ಶಿವಮೊಗ್ಗ

ಯಡೇಹಳ್ಳಿಯಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

Published On :

ತ್ಯಾಗರ್ತಿ: ಸಾಗರ ತಾಲೂಕಿನ ಯಡೇಹಳ್ಳಿಯ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಜಾತ್ರೋತ್ಸವ ಪ್ರಯುಕ್ತ ಜಾತ್ರೆಯ ಮೂರನೇ ದಿನವಾದ ಮಂಗಳವಾರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಿತು.
ಪ್ರವಾಸಿ ಮಂದಿರದ ವಿಶಾಲವಾದ ಬಯಲಿನಲ್ಲಿ ನಡೆದ ಈ ಕುಸ್ತಿ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕುಸ್ತಿಯ ಆರಂಭದಲ್ಲಿ ಸ್ಥಳೀಯ ಕುಸ್ತಿಪಟುಗಳ ಕುಸ್ತಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಕುಸ್ತಿ ಪಟುಗಳು ತಮ್ಮ ಮೈಕಟ್ಟಿಗೆ ಯೋಗ್ಯ ಎದುರಾಳಿಯನ್ನು ಆಯ್ಕೆ ಮಾಡಿಕೊಂಡು ಸೆಣೆಸಿದರು.
ವಿಜೇತರಿಗೆ 1 ಸಾವಿರ ರುಪಾಯಿಯಿಂದ 5 ಸಾವಿರ ರುಪಾಯಿ ವರೆಗೆ ಹಂತ ಹಂತವಾಗಿ ಬಹುಮಾನ ಘೋಷಿಸಲಾಯಿತು. ನಂತರ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ವಿವಿಧ ಕಸರತ್ತು ಹಾಗೂ ಕೈ ಚಳಕದೊಂದಿಗೆ ಕುಸ್ತಿ ನಡೆಸಿದರು. ಪರಸ್ಪರರು ಬಗ್ಗಿಸಲು ಮತ್ತು ಹೆಣೆಯಲು ನಡೆಸಿದ ತಂತ್ರ ಮತ್ತು ಪ್ರತಿ ತಂತ್ರದ ಕುಸ್ತಿ ಪಟುಗಳು ನೋಡುಗರ ಮೈನವಿರೇಳಿಸಿದವು. ಸೂಕ್ಷ್ಮ ಹೋರಾಟದ ಕ್ಷಣಗಳಲ್ಲಿ ಉತ್ತೇಜಿಸುವ ಜೈಕಾರ ಕೇಳಿ ಬಂದಿತು. ವಿಜೇತರಾದಾಗ ಅಭಿಮಾನಿಗಳು ಸಂತಸದಿಂದ ಕೇಕೆ ಹಾಕಿ ಕೂಗಿ ಕುಣಿದಾಡಿದ ದೃಶ್ಯ ಸಹ ಕಂಡುಬಂತು.
ಕುಸ್ತಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಅರುಣ್‌ಪ್ರಸಾದ್, ಶಿವಮೊಗ್ಗದ ಉದ್ಯಮಿ ರವೀಂದ್ರ ರಾವ್, ಹೊಸೂರು ಗ್ರಾ.ಪಂ. ಅಧ್ಯಕ್ಷ ಕಲ್ಲುಗುಂಡಿ ನಾಗರಾಜ್, ಯಡೇಹಳ್ಳ ಗ್ರಾ.ಪಂ. ಸದಸ್ಯ ಮಹೇಶ ಗೌಡ, ಗ್ರಾಮದ ಹಿರಿಯರಾದ ಕೆ. ನಾಗರಾಜ್, ನಜರುಲ್ಲಾಖಾನ್, ಜಾನ್, ಮಾಫಿರ್ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಕುಸ್ತಿ ಪೈಲ್ವಾನ್ ಶಿವಮೊಗ್ಗದ ಆರ್. ಅಪ್ಪುವಿಗೆ ಸನ್ಮಾನಿಸಲಾಯಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.