ಶಿವಮೊಗ್ಗ

ಹಾಮಾನಾ ಕನ್ನಡ ದನಿಯಷ್ಟೇ ಅಲ್ಲ, ಧಣಿಯೂ ಹೌದು

Published On :

ಕನ್ನಡಪ್ರಭ ವಾರ್ತೆ, ತೀರ್ಥಹಳ್ಳಿ, ಫೆ.5
ಇಲ್ಲಿನ ತುಂಗಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರು ಡಾ. ಹಾ.ಮಾ.ನಾಯಕ ಪ್ರಶಸ್ತಿ ಸ್ವೀಕರಿಸಿದರು.
ಮಂಡ್ಯದ ಕರ್ನಾಟಕ ಸಂಘ ಹಾಗೂ ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರವು ಹಾ.ಮಾ. ನಾಯಕ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ಬಾರಿ ಹಾಮಾನಾ ಹುಟ್ಟೂರಲ್ಲೇ ಪ್ರಶಸ್ತಿ ನೀಡುವ ಉದ್ದೇಶದಿಂದ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ಆಯೋ ಜಿಸಿತ್ತು.
25 ಸಾವಿರ ನಗದು, ಸರಸ್ವತಿ ಕಂಚಿನ ಪ್ರತಿಮೆಯನ್ನೊಳಗೊಂಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂಪಾ, ಹಾಮಾನಾ ಅವರು ಕನ್ನಡದ ದನಿ ಮಾತ್ರವಲ್ಲದೆ ಅವರು ಕನ್ನಡದ ಧಣಿಯೂ ಆಗಿದ್ದರು. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುವುದು ಖುಷಿ ತಂದಿದೆ ಎಂದರು.
ಪ್ರೀತಿ ಇಲ್ಲದೆ ಏನನ್ನೂ ಮಾಡಲಾರೆ, ದ್ವೇಷವನ್ನೂ ಎಂದ ಹೇಳಿದ ಅವರು ಟೀಕೆಗಳನ್ನು ಸ್ವಸ್ಥ ಮನಸ್ಸಿನಿಂದ ಸ್ವೀಕಾರ ಮಾಡಬೇಕು ಎಂದು ಹೇಳಿದರು.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಮಧ್ಯ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಧಾರವಾಡ ಜಗಳಗಂಟರ ಊರು ಎಂದಾಗಿದ್ದರೂ ವೈಚಾರಿಕ ಸಂಘರ್ಷಗಳಿಗೆ ಮಾತ್ರ ಹೆಚ್ಚಾಗಿತ್ತು ಎಂದು ಹೇಳಿದ ಅವರು, ಧಾರವಾಡದ ಮೋಡಿಕಾರರ ಮೋಡಿಗೆ ತಾವು ಒಳಗಾಗದೆ ಕುವೆಂಪು ಕಡೆ ವಾಲಿದ್ದೆ. ಕುವೆಂಪು ಅಲೆ ಇಡೀ ಬಾನಂಗಳ ವ್ಯಾಪಿಸಿತ್ತು. ನಾಲ್ಕು ದಶಕಗಳ ಕಾಲವಲ್ಲದೆ ಇಂದಿಗೂ ಈ ಅಲೆ ಪ್ರಸ್ತುತವಾಗಿದೆ ಎಂದರು.
ವಿಶಿಷ್ಟ ಸ್ಥಾನ: ಅಂಕಣ ಬರಹಕ್ಕೆ ತನ್ನದೇ ಆದ ಇತಿಹಾಸವಿದೆ. 18ನೇ ಶತಮಾನದಲ್ಲಿ  ಸಣ್ಣ ಕತೆ, ಕಾದಂಬರಿಗಳು ಹುಟ್ಟಿದ್ದು, ಇಂಗ್ಲೆಂಡಿನಲ್ಲಿ ಬೇಗ ಜನಪ್ರಿಯತೆ ಹೊಂದಿತು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಂಕಣ ಬರಹಕ್ಕೆ ಹಾಮಾನಾ ಅವರು ವಿಶಿಷ್ಟ ಸ್ಥಾನ ತಂದುಕೊಂಟ್ಟಿದ್ದಾರೆ. ಇಂದು ಸಾಕಷ್ಟು ಅಂಕಣಕಾರರಿದ್ದಾರೆ, ಜಗದ್ಗುರುಗಳೂ ಈಗ ಆಕಾಶ ಬಿಟ್ಟು ಅಂಕಣದ ಅಂಗಳಕ್ಕಿಳಿದಿದ್ದಾರೆ ಎಂದರು.
ಜ್ಞಾನ ಭಂಡಾರ: ಪ್ರಶಸ್ತಿ ಪ್ರದಾನ ಮಾಡಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕುವೆಂಪು, ಯು.ಆರ್. ಅನಂತಮೂರ್ತಿ, ಲಂಕೇಶ್ ಸೇರಿದಂತೆ ಇನ್ನಿತರ ಮಹಾನ್ ಲೇಖಕರ ಸಾಹಿತ್ಯವು ಜ್ಞಾನ ಭಂಡಾರವಾಗಿದ್ದು, ಯುವಕರು ಸಾಹಿತ್ಯ ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಬರಹಗಳು ಬದುಕಿನ ಮಾರ್ಗ ತಿಳಿವಳಿಕೆ ಬೆಳಕಾಗುತ್ತವೆ. ಇನ್ನೊಬ್ಬರ ಮಾರ್ಗದರ್ಶನಕ್ಕೆ ಒಳಗಾದರೆ ಬದುಕು ಬೆಳಗುತ್ತದೆ ಎಂದು ಹೇಳಿದರು.
ಹಾಮಾನಾ ಅವರ ಬರಹ ಮತ್ತು ನಿಲುವು ಸ್ಪಷ್ಟ ಮತ್ತು ನೇರ ಎಂದು ಅಭಿಪ್ರಾಯಪಟ್ಟ ಸಚಿವರು, ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವದ ಹಾಮಾನಾ ಬರಹಗಳು ಎಂದಿಗೂ ಪ್ರಸ್ತುತವಾಗಿವೆ ಎಂದರು.
5 ಲಕ್ಷ ದೇಣಿಗೆ: ಮಂಡ್ಯದ ಕರ್ನಾಟಕ ಸಂಘಕ್ಕೆ ತೀರ್ಥಹಳ್ಳಿಯ ಜನರ ಪರವಾಗಿ 5 ಲಕ್ಷ ದೇಣಿಗೆ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.
ಕರ್ನಾಟಕ ಸಂಘ ಮಂಡ್ಯದ ಅಧ್ಯಕ್ಷ ಪ್ರೊ. ಜಯಪ್ರಕಾಶ್ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಡಾ. ಪದ್ಮಾ ಶೇಖರ್, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಪ್ರಾಂಶುಪಾಲ ಪ್ರೊ. ಡಿ.ಎಸ್. ಸೋಮಶೇಖರ್, ಹಾ.ಮಾ.ನಾ. ಪುತ್ರ ಎಚ್.ಎಂ. ರವೀಂದ್ರ ಉಪಸ್ಥಿತರಿದ್ದರು.

ಹೋರಾಟ ಅನಿವಾರ್ಯ: ಚಂಪಾ
ಶಿವಮೊಗ್ಗ: ಮಾತೃಭಾಷಾ ಶಿಕ್ಷಣ ಕುರಿತಾದ ಸುಪ್ರೀಂ ಕೋರ್ಟಿನ ತೀರ್ಪು ವ್ಯತಿರಿಕ್ತವಾದರೆ ಹೋರಾಟ ಅನಿವಾರ್ಯ ಎಂದು ಪ್ರೊ. ಚಂದ್ರಶೇಖರ ಪಾಟೀಲ್ ಹೇಳಿದರು.
ರಾಷ್ಟ್ರಕವಿ ಕುವೆಂಪು ಆದಿಯಾಗಿ ಪರಿಸರದ ಭಾಷೆ, ಈ ನೆಲದ ಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕೆಂದು ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೂಡ ತಮ್ಮ ವಾದ ಪ್ರತಿಪಾದಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಈ ವಿವಾದದ ವಿಚಾರಣೆಯ ತೀರ್ಪು ವ್ಯತಿರಿಕ್ತವಾದರೆ ಸರ್ಕಾರವೇ ಹೋರಾಟದ ಮೂಲಕ ಮಾತೃಭಾಷಾ ಶಿಕ್ಷಣ ಜಾರಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಮಾಧ್ಯಮ ಕನ್ನಡವೇ ಆಗಬೇಕು ಎಂದು ಕುವೆಂಪು ಅವರು ಮೊದಲ ವಿಶ್ವ ಕನ್ನಡ ಸಮ್ಮೇಳದಲ್ಲಿ ಅಭಿಪ್ರಾಯಪಟ್ಟಿದ್ದರೆ, ಬೆಳಗಾವಿಯ ಸಮ್ಮೇಳನದಲ್ಲಿ ಪ್ರಾಥಮಿಕ ಶಿಕ್ಷಣದಿಂದಲೇ ಇಂಗ್ಲಿಷ್ ಮಾಧ್ಯಮವಾಗಿರಬೇಕೆಂದು ನಾರಾಯಣಮೂರ್ತಿ ಹೇಳಿದ್ದಾರೆ.
ಇದನ್ನು ಗಮನಿಸಿದರೆ ಗಡಿಯಾರದ ಪೆಂಡುಲಮ್ ಎಲ್ಲಿಂದ ಎಲ್ಲಿಗೆ ತೊಯ್ದಾಡುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.