'ವಿಐಎಸ್ಎಲ್ಗೆ ಗಣಿ; ಸರ್ಕಾರದ ಮನವೊಲಿಸಲು ಯತ್ನ'
ಕ.ಪ್ರ.ವಾರ್ತೆ, ಭದ್ರಾವತಿ, ಫೆ.6
ಭಾರತೀಯ ಉಕ್ಕು ಪ್ರಾಧಿಕಾರವು ವಿಐಎಸ್ಎಲ್ ಕಾರ್ಖಾನೆಯನ್ನು ವಹಿಸಿಕೊಂಡ ನಂತರ ಒಂದೊಂದೇ ಘಟಕಗಳನ್ನು ಮುಚ್ಚುತ್ತಾ ಬಂದಿತೆ ಹೊರತು ಅದನ್ನು ಆಧುನೀಕರಣಗೊಳಿಸಿ ಉತ್ಪಾದನೆ ಸುಧಾರಿಸುವತ್ತ ಯಾವುದೇ ಗಮನ ನೀಡಲಿಲ್ಲ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಆರೋಪಿಸಿದರು.
ವಿಐಎಸ್ಎಲ್ ಉತ್ಸವ ಸಮಿತಿಯು ಬುಧವಾರ ಸಂಜೆ ವಿಐಎಸ್ಎಲ್ ಅಮೃತ ಮಹೋತ್ಸವ ರಂಗಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳು ವಿಐಎಸ್ಎಲ್ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರ ಖಾಸಗೀಕರಣಗೊಳಿಸದಂತೆ ಅಥವಾ ಜಂಟಿ ಮಾಲೀಕತ್ವದಲ್ಲಿ ನಡೆಸದಂತೆ ತಡೆಹಿಡಿಯುವಲ್ಲಿ ಯಶಸ್ವಿ ಆಗಿದ್ದೇವೆ. ಅದನ್ನು ಉಕ್ಕು ಪ್ರಾಧಿಕಾರದ ಅಧೀನದಲ್ಲಿ ಉಳಿಸುವುದರೊಂದಿಗೆ ಕರ್ನಾಟಕ ಸರ್ಕಾರವು ವಿಐಎಸ್ಎಲ್ ಕಾರ್ಖಾನೆಗೆ ಕಬ್ಬಿಣದ ಅದಿರಿನ ಗಣಿ ಆದಷ್ಟು ಬೇಗ ಮಂಜೂರಾತಿ ಮಾಡಲು ಮನವೊಲಿಸಲು ಪ್ರಯತ್ನಿಸುವುದಾಗಿ ರಾಘವೇಂದ್ರ ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಮಿಕರ ಅನುಕೂಲಕ್ಕಾಗಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳಲ್ಲಿ ತಲಾ ಎರಡು ಇಎಸ್ಐ ಆಸ್ಪತ್ರೆಗಳನ್ನು ಸ್ಥಾಪಿಸಲು ಈಗಾಗಲೇ ಕೇಂದ್ರ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಿಲ್ಲದ ಭದ್ರಾವತಿ ಪಟ್ಟಣವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮೈಸೂರು ಕಾಗದ ಕಾರ್ಖಾನೆಯನ್ನು ಸಹ ಸಾರ್ವಜನಿಕ ರಂಗದಲ್ಲೇ ಉಳಿಸಿಕೊಂಡು ಅದನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ಸರ್ಕಾರ, ಜಿಲ್ಲೆಯ ರಾಜಕೀಯ ಮುಖಂಡರ ಜವಾಬ್ದಾರಿ ಎಂದು ಆಯನೂರು ಮಂಜುನಾಥ್ ಹೇಳಿದರು.
ಭದ್ರಾವತಿ ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ, ಬಳ್ಳಾರಿಯ ಎನ್ಇಬಿ ವಲಯದಲ್ಲಿ ವಿಐಎಸ್ಎಲ್ ಕಾರ್ಖಾನೆಗೆ ಮಂಜೂರಾಗಿರುವ ಗಣಿ ಪ್ರದೇಶದ ಬಗ್ಗೆ ಖಾಸಗಿ ವ್ಯಕ್ತಿಗಳು ತಕರಾರು ಸಲ್ಲಿಸಿದ್ದರೂ ಸಹ ಅಲ್ಲಿ ವಿಐಎಸ್ಎಲ್ ಕಾರ್ಖಾನೆಗೆ 140 ಹೆಕ್ಟೇರ್ ಗಣಿ ಪ್ರದೇಶ ಮಂಜೂರು ಮಾಡಲು ಯಾವುದೇ ತೊಂದರೆ ಆಗುವುದಿಲ್ಲ ಎಂದು ರಾಜ್ಯದ ಕೈಗಾರಿಕಾ ಕಾರ್ಯದರ್ಶಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ರಮಣದುರ್ಗ ಪ್ರದೇಶದಲ್ಲಿ ಹೆಚ್ಚುವರಿ 240 ಹೆಕ್ಟೇರ್ ಗಣಿ ಮಂಜೂರಾತಿಗಾಗಿ ಸಹ ವಿಐಎಸ್ಎಲ್ ಕಾರ್ಖಾನೆ ಅರ್ಜಿ ಸಲ್ಲಿಸಿದ್ದು ಅದರ ಮಂಜೂರಾತಿಗಾಗಿಯೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ವಿಐಎಸ್ಎಲ್ ಕಾರ್ಖಾನೆಗೆ ಗಣಿ ಮಂಜೂರಾತಿ ಆದಲ್ಲಿ 2000 ಕೋಟಿ ಕಾರ್ಖಾನೆಯ ಅಭಿವೃದ್ಧಿಗಾಗಿ ತೊಡಗಿಸಲು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಉಕ್ಕು ಪ್ರಾಧಿಕಾರದ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ. ಈ ಸಂದರ್ಭ ವಿಐಎಸ್ಎಲ್ ಸಮುದಾಯ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರಕ್ಕೆ ಸೇರಿಸಿದ ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮರೆಯಬಾರದು. ಅವರೊಂದಿಗೆ ರಾಜ್ಯದ ಹಲವಾರು ಸಂಸದರು ಉಕ್ಕು ಪ್ರಾಧಿಕಾರದ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳನ್ನು ವಿಐಎಸ್ಎಲ್ ಕಾರ್ಖಾನೆಯ ಖಾಸಗೀಕರಣ ಮತ್ತು ಖಾಸಗಿ ಸಹಭಾಗಿತ್ವ ಪ್ರಸ್ತಾವನೆ ಕೈಬಿಡುವಂತೆ ಆಗ್ರಹಿಸಿದ್ದಾರೆ ಎಂದು ಅಪ್ಪಾಜಿ ತಿಳಿಸಿದರು.
ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ ಮಾತನಾಡಿ, ಕಾರ್ಖಾನೆ ಕಬ್ಬಿಣದ ಅದಿರನ್ನು ಬೇರೆ ಮೂಲಗಳಿಂದ ಟನ್ನಿಗೆ 5600 ನೀಡಿ ಖರೀದಿಸುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ನಷ್ಟ ಅನುಭವಿಸುತ್ತಿದೆ. ಇದನ್ನು ನಿವಾರಿಸಲು ರಾಜ್ಯ ಸರ್ಕಾರ ಆದಷ್ಟು ಬೇಗ ವಿಐಎಸ್ಎಲ್ ಕಾರ್ಖಾನೆಗೆ ಗಣಿಯನ್ನು ಮಂಜೂರು ಮಾಡಬೇಕೆಂದರು.
ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಎಂ.ರವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಖಾನೆಯ ಆಡಳಿತ ಮತ್ತು ಸಿಬ್ಬಂದಿ ಮಹಾಪ್ರಬಂಧಕ ಎ.ರಂಗರಾಜನ್, ಅನೇಕ ಹಿರಿಯ ಅಧಿಕಾರಿಗಳು, ವಿಐಎಸ್ಎಲ್ ಕಾರ್ಮಿಕ ಸಂಘದ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮತಿ ಸದಸ್ಯರು, ಇಸ್ಪಾತ್ ಮಹಿಳಾ ಸಮಾಜದ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಖಾನೆಯ ಸ್ಥಾವರಗಳ ಮಹಾಪ್ರಬಂಧಕ ಎಚ್.ಕೆ. ವೆಂಕಟೇಶಕುಮಾರ್ ಸ್ವಾಗತಿಸಿದರು. ವಿಐಎಸ್ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎಂ. ರವಿಶಂಕರ್ ವಂದಿಸಿದರು. ಖ್ಯಾತ ಮಿಮಿಕ್ರಿ ಕಲಾವಿದ ದಯಾನಂದ ಮತ್ತು ಸಂಗಡಿಗರಿಂದ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

