ಯಾರ ರಕ್ಷಿಸಲು ಹೊರಟಿದ್ದೀರಿ ಸಿದ್ದರಾಮಯ್ಯ?
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಫೆ.8
ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇರ ವಾಗ್ದಾಳಿ ನಡೆಸಿದ್ದಾರೆ.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗ್ರಾಮಾಂತರ ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಬೂತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾರ ರಕ್ಷಣೆಗಾಗಿ ಇದೆಲ್ಲಾ?: ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಸಾವಿನ ಹಿಂದೆ ಷಡ್ಯಂತ್ರ ನಡೆದಿದೆ. ಬಂಡೆಯವರ ಪತ್ನಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಳಿಕೊಂಡರೂ ಏಕೆ ಹಿಂದೆ ಮುಂದೆ ನೋಡುತ್ತಿದ್ದೀರಾ ಸಿದ್ದರಾಮಯ್ಯ ಎಂದು ತರಾಟೆಗೆ ತೆಗೆದುಕೊಂಡ ಬಿಎಸ್ವೈ, ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ, ಬಂಡೆಗೆ ಹಾರಿದ ಗುಂಡು ಹೊರಬಿದ್ದಿದೆ ಆ ಗುಂಡು ಸಿಗಲಿಲ್ಲ ಎಂದರೆ ಅರ್ಥವೇನು. ಚಿತಾವಣೆಯಿಂದ ಮಲ್ಲಿಕಾರ್ಜುನ ಬಂಡೆಯನ್ನು ಕೊಲ್ಲಲಾಗಿದೆ. ಕರ್ನಾಟಕದಲ್ಲಿ ಇನ್ನು ಈ ರೀತಿಯ ಆಟಗಳು ನಡೆಯಲ್ಲ, ನಡೆಯಲು ಬಿಡೋದಿಲ್ಲ ಎಂದು ಏರುದನಿಯಲ್ಲಿ ಗುಡುಗಿದರು.
ಪೊಲೀಸ್ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಯವರು ಇಲಾಖೆಯ ವೈಫಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಈ ಮೂಲಕ ಇಲಾಖೆಯ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದ್ದಾರೆ. ಇಲಾಖೆ ವಿಫಲವಾಗುತ್ತಿರುವ ಬಗ್ಗೆ ಗುಪ್ತಚರ ವರದಿ ತರಿಸಿಕೊಳ್ಳಲು ಸಾಧ್ಯವಿರಲಿಲ್ಲವೇ ಎಂದು ಕಿಡಿಕಾರಿದ ಯಡಿಯೂರಪ್ಪ, ಇಲಾಖೆಯನ್ನು ನಿರ್ವಹಿಸುತ್ತಿರುವ ಮಂತ್ರಿ ವಿಫಲವಾಗಿದ್ದಲ್ಲಿ ಅವರನ್ನು ಬದಲಿಸಿ ತಾವೇ ಆ ಖಾತೆಯನ್ನು ನಿರ್ವಹಿಸಿ ಎಂದು ಸಲಹೆ ನೀಡಿದರು.
ಎಲ್ಲಾ ರೀತಿಯ ದಂಧೆಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳೇ ನಿರತರಾಗಿದ್ದಾರೆ. ಲೂಟಿ ಮಾಡುತ್ತಿದ್ದಾರೆ, ವ್ಯಭಿಚಾರ ನಡೆಯುತ್ತಿದೆ, ಅನೇಕ ರೀತಿಯ ಜೂಜು, ದಂಧೆಗಳು ನಡೆಯುತ್ತಿವೆ. ಇದೆಲ್ಲಕ್ಕೂ ಅಧಿಕಾರಿಗಳೇ ರಕ್ಷಣೆಕೊಡುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ನಿಮ್ಮಲ್ಲಿ ಗುಪ್ತಚರ ಇದೆ. ಉನ್ನತ ಪೊಲೀಸ್ ಅಧಿಕಾರಿಗಳು ವಿಫಲರಾದರೆಂದರೆ, ಅವರನ್ನು ತೆಗೆದು ಬೇರೆಯವರನ್ನು ಮಾಡಿ, ಯಾರ ಅಭ್ಯಂತರವಿಲ್ಲ. ಈ ರೀತಿ ಬಹಿರಂಗ ಹೇಳಿಕೆ ನೀಡುವ ಮೂಲಕ ಇಲಾಕೆಯ ಆತ್ಮಸ್ಥೈರ್ಯ ಹಾಳು ಮಾಡಿ ಇನ್ನೂ ಅರಾಜಕತೆ ಸೃಷ್ಟಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿರಲು ಅವರು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಅತ್ಯಂತ ಕೆಟ್ಟ ಸರ್ಕಾರ: ಸ್ವಾತಂತ್ರ್ಯ ಬಂದ ನಂತರ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ. ಒಂದುಕಡೆ ಆರ್ಥಿಕ ದುಸ್ಥಿತಿ, ದಿವಾಳಿ ತನ, ಇನ್ನೊಂದು ಕಡೆ ಅಭಿವೃದ್ಧಿ ಕಾರ್ಯ ಶೂನ್ಯ, ಮತ್ತೊಂದು ಕಡೆ ಕಾನೂನು ಸುವ್ಯವಸ್ಥೆ ಕಾಡಾಡುವಲ್ಲಿ ವಿಫಲ. ಸಮರ್ಥವಾಗಿ ಅಧಿಕಾರ ನಡೆಸುವ ಯೋಗ್ಯತೆ ಇಲ್ಲ ಎಂದರೆ ಜನರ ಸ್ಥಿತಿ, ರಾಜ್ಯದ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಉದ್ಯಮಿ ರುದ್ರೇಗೌಡ ಸೇರಿದಂತೆ ಗ್ರಾಮಾಂತರ ಬಿಜೆಪಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

