ಜಾತಿ ವಿಷಬೀಜ ಬಿತ್ತಿದ 'ಕೈ': ಬಿಎಸ್ವೈ
ಮೋದಿ ಬೆಂಬಲಿಸಲು ಮನವಿ, ತುಮರಿ ಸೇತುವೆ ಕಾಮಗಾರಿ ಆರಂಭಿಸಲು ಆಗ್ರಹ
ಸಾಗರ: ಕೇಂದ್ರದಲ್ಲಿ 10 ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ದುರಾಡಳಿತದಿಂದ ವಿಶ್ವದ ದೃಷ್ಟಿಯಲ್ಲಿ ಭಾರತ ಹಗರಣಗಳ, ಭ್ರಷ್ಟಾಚಾರದ, ಆರ್ಥಿಕ ದುಸ್ಥಿತಿಯ ದೇಶ ಎಂಬ ಭಾವನೆ ಮೂಡುವಂತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಸಾಗರ ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ, ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುಸ್ಲೀಮರು ಸೇರಿದಂತೆ ದೇಶದ ಮತದಾರರು ನರೇಂದ್ರ ಮೋದಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವಿಷ ಬೀಜ: ಕಾಂಗ್ರೆಸ್ ಮೋದಿಯವರನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ನಿಜವಾಗಲೂ ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತುವುದು, ದೇಶ ವಿಭಜನೆಯಂತಹ ಕೆಲಸ ಮಾಡುತ್ತಿದೆ. ಇವೆಲ್ಲಕ್ಕೂ ಪೂರ್ಣ ವಿರಾಮ ಹಾಕುವ ಕಾಲ ಒದಗಿಬಂದಿದ್ದು ಮೋದಿಯವರ ಸಮರ್ಥ ನಾಯಕತ್ವವನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸುವರ್ಣ ಗ್ರಾಮ ಯೋಜನೆಯಲ್ಲಿ ಹೊಸದಾಗಿ ಒಂದು ಹಳ್ಳಿಯನ್ನೂ ತೆಗೆದುಕೊಂಡಿಲ್ಲ. ಗಂಗಾ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿಲ್ಲ, ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಕೇಲವೇ ಫಲಾನುಭವಿಗಳಿಗೆ ಮಾತ್ರ ಬಾಂಡ್ ಕೊಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಳೆದ ಬಜೆಟ್ಟಿನಲ್ಲಿ ಎಷ್ಟು ಹಣವನ್ನು ತೆಗೆದಿಡಲಾಗಿತ್ತು, ಆ ಪೈಕಿ ಎಷ್ಟು ಹಣವನ್ನು ವಿನಿಯೋಗಿಸಲಾಗಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ತುಮರಿ ಸೇತುವೆ: ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತುಮರಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಿ ಬಜೆಟ್ಟಿನಲ್ಲಿ 25 ಕೋಟಿ ರೂ. ಹಣವನ್ನು ಮೀಸಲಿರಿಸಿದ್ದೆ. ಕಾಗೋಡು ತಿಮ್ಮಪ್ಪನವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಿನ್ನೀರಿನ ಜನರ ಬಗ್ಗೆ ಕಾಳಜಿ ಇದ್ದರೆ ಸೇತುವೆ ಕಾಮಗಾರಿಯನ್ನು ಆರಂಭಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ನಾಶಕ್ಕೆ ಹೊರಟಿದೆ. ಸಿಗರೇಟ್ ಲಾಬಿಗೆ ಮಣಿದಿರುವ ಸರ್ಕಾರ ಅಡಕೆ ಬೆಳೆಯನ್ನೆ ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ ಎಂದು ಆರೋಪಿಸಿದರು.
ಹೊಸ ನಾಯಕತ್ವ: ಜಿ.ಪಂ. ಮಾಜಿ ಸದಸ್ಯ ಬಿ.ಆರ್.ಜಯಂತ್, ಇಡೀ ದೇಶವಾಸಿಗಳಲ್ಲಿ ಕಾಂಗ್ರೆಸ್ ದುರಾಡಳಿತವನ್ನು ಬೇರುಸಹಿತ ಕಿತ್ತುಹಾಕಬೇಕೆಂಬ ಸಂಕಲ್ಪ ಕಾಣುತ್ತಿದೆ. ಜನ ಹೊಸ ನಾಯಕತ್ವದ ನಿರೀಕ್ಷೆಯಲ್ಲಿದ್ದು ಅದನ್ನು ಮೋದಿಯವರಲ್ಲಿ ಕಾಣುತ್ತಿದ್ದಾರೆ ಎಂದರು.
ಮಾಜಿ ಸಚಿವ ಎಚ್.ಹಾಲಪ್ಪ, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಅರಗ ಜ್ಞಾನೇಂದ್ರ, ಟಿ.ಡಿ.ಮೇಘರಾಜ್ ಮಾತನಾಡಿದರು. ಎಂ.ಬಿ.ಭಾನುಪ್ರಕಾಶ್, ಭಾರತಿ ಶೆಟ್ಟಿ, ಗುರುಮೂರ್ತಿ, ವಾಲೆಮನೆ ಶಿವಕುಮಾರ್, ಎಸ್.ದತ್ತಾತ್ರಿ, ಜಗದೀಶ್ ಒಡೆಯರ್, ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು. ಚೇತನರಾಜಜ್ಸ್ವಾಗತಿಸಿದರು. ಯು.ಎಚ್.ರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶಬಾಬು ವಂದಿಸಿದರು. ಸಂತೋಷ್ ಶೇಟ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

