ಶಿವಮೊಗ್ಗ

ಶ್ರೀಧರ್ ಸಾವಿಗೆ ಕಾಂಗ್ರೆಸ್ ಕಾರಣ: ಬೇಳೂರು

Published On :

ಕ.ಪ್ರ.ವಾರ್ತೆ, ಸಾಗರ, ಫೆ.10
ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ದಬ್ಬಾಳಿಕೆ ರಾಜಕಾರಣ ಪುನರಾವರ್ತನೆ ಆಗಿದ್ದು, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಪಟಾಲಂ ತಮಗೆ ಆಗದವರ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜಂಬಾನಿ ಗ್ರಾಮದ ಸಜ್ಜನ ವ್ಯಕ್ತಿ ಶ್ರೀಧರ್ ಎಂಬವರಿಗೆ ಕಾಂಗ್ರೆಸ್ ಪಕ್ಷದ ಹಮೀದ್, ಪ್ರಕಾಶ್ ಇನ್ನಿತರರ ಕುಮ್ಮಕ್ಕಿನಿಂದ ಕೆಲವರು ಒತ್ತಾಯಪೂರ್ವಕವಾಗಿ ವಿಷಪ್ರಾಶನ ಮಾಡಿಸಿದ್ದಾರೆ. ವಿಷ ಸೇವನೆ ಮಾಡಿದ ಶ್ರೀಧರ್ ಶನಿವಾರ ಸಂಜೆ ಶಿವಮೊಗ್ಗದಲ್ಲಿ ಮೃತಪಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದವರೆ ಕಾರಣ ಎಂದು ದೂರಿದರು.
ಬಂಧನಕ್ಕೆ ಒತ್ತಾಯ:  ಶ್ರೀಧರ್ ಅವರ ಮನೆಗೆ ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ನುಗ್ಗಿದ ಹತ್ತು ಜನರ ತಂಡ ಶ್ರೀಧರ್‌ಗೆ ವಿಷ ಕುಡಿಸಿ, ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ, ಎಸ್‌ಎಸ್‌ಎಲ್‌ಸಿ ಓದುತ್ತಿರುವ ಅವರ ಮಗಳಿಗೆ ನಮ್ಮ ವಿರುದ್ಧ ದೂರು ನೀಡಿದರೆ ಅತ್ಯಾಚಾರ ಮಾಡುವ ಬೆದರಿಕೆ ಒಡ್ಡಿದ್ದಾರೆ. ಹಲ್ಲೆ ನಡೆಸಿ, ಶ್ರೀಧರ್ ಸಾವಿಗೆ ಕಾರಣವಾಗಿರುವ ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಎಚ್ಚರಿಕೆ:  ಕಾಗೋಡು ತಿಮ್ಮಪ್ಪ ಅವರು ತಮ್ಮ ಪಟಾಲಂಗೆ ಕಡಿವಾಣ ಹಾಕದೆ ಹೋದರೆ, ಅವರು ಸಭೆ ನಡೆಸುವ ಕಡೆಗಳಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ. ಹಿರಿಯ ರಾಜಕಾರಣಿಯಾಗಿದ್ದು, ತಮ್ಮ ಹಿಂಬಾಲಕರು ಕ್ಷೇತ್ರದ ಜನರಿಗೆ ನೀಡುತ್ತಿರುವ ಉಪಟಳವನ್ನು ತಿಮ್ಮಪ್ಪ ಅವರು ಅರ್ಥ ಮಾಡಿಕೊಳ್ಳಬೇಕು.
 ಹಿಂದೆ ಅವರು ಅಧಿಕಾರದಲ್ಲಿದ್ದಾಗಲೂ ಕ್ಷೇತ್ರದಲ್ಲಿ ಹಲವಾರು ದೌರ್ಜನ್ಯ ಪ್ರಕರಣಗಳು ನಡೆದಿತ್ತು.  ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರ ದೌರ್ಜನ್ಯ ತಡೆಗಟ್ಟಲು ಕ್ರಮ ಕೈಗೊಳ್ಳದೆ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತುಮರಿ ಸೇತುವೆಗಾಗಿ ಪಾದಯಾತ್ರೆ:  ಹೊಳೆಬಾಗಿಲು-ಕಳಸವಳ್ಳಿ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಕಾಗೋಡು ತಿಮ್ಮಪ್ಪನವರು ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಹಿನ್ನೀರಿನ ಜನರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈಗ ಕಾಗೋಡು ಅಧಿಕಾರಿದಲ್ಲಿದ್ದರೂ ತುಮರಿ ಸೇತುವೆಗೆ ಹಣ ಬಿಡುಗಡೆ ಮಾಡಿಸುವ ಬಗ್ಗೆ ಈತನಕ ಗಮನ ಕೊಡಲಿಲ್ಲ. ಈ ಬಾರಿಯ ಬಜೆಟ್ಟಿನಲ್ಲಿ ಸೇತುವೆಗೆ ಹಣ ಬಿಡುಗಡೆ ಮಾಡದೆ ಹೋದರೆ, ಹಿನ್ನೀರಿನ ಜನರು ಹಾಗೂ ಅಭಿಮಾನಿಗಳ ಜೊತೆ ತುಮರಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಾಗೋಡು ತಿಮ್ಮಪ್ಪ ಅವರು ಸಾಗರದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಪ್ರವಾಸಿ ಮಂದಿರವನ್ನು ಲೋಕೋಪಯೋಗಿ ಇಲಾಖೆ ಕಚೇರಿಯಾಗಿ ಪರಿವರ್ತಿಸುವ ಹುನ್ನಾರ ಮಾಡುತ್ತಿದ್ದಾರೆ.
 ಈ ಪ್ರವಾಸಿ ಮಂದಿರಕ್ಕೆ ಸುದೀರ್ಘ ಇತಿಹಾಸವಿದೆ. ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಬಂದು ಹೋಗಿದ್ದಾರೆ.
 ಯಾವುದೆ ಕಾರಣಕ್ಕೂ ಪ್ರವಾಸಿ ಮಂದಿರವನ್ನು ಲೋಕೋಪಯೋಗಿ ಕಚೇರಿ ನಿರ್ವಹಣೆಗೆ ವಹಿಸಬಾರದು ಎಂದು ಒತ್ತಾಯಿಸಿದರು.
ಹಿಂದೆ ನಾನು ಶಾಸಕನಾಗಿದ್ದಾಗ ಜೋಗದ ಯಾತ್ರಿ ನಿವಾಸ ಹಾಳು ಬಿದ್ದಿದೆ ಎಂದು ತಿಮ್ಮಪ್ಪ ಆರೋಪಿಸಿದ್ದರು. ಈಗ ಜೋಗದ ಯಾತ್ರಿನಿವಾಸ ಇನ್ನಷ್ಟು ಹಾಳು ಬಿದ್ದು ಹೋಗಿದೆ. ಈತನಕ ಅದನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಅವರು ಮಾಡಿಲ್ಲವೆಂದು ದೂರಿದರು. ಎಂ.ಜಿ. ದೀನದಯಾಳ್, ದೀಪಕ್ ಬರೋಡೆ, ಅದರಂತೆ ಚಂದ್ರಶೇಖರ, ಕಲಸೆ ಚಂದ್ರಪ್ಪ, ಪರಮೇಶ್ವರ್, ಗಣಪತಿ, ನಾರಾಯಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.