ಶಿವಮೊಗ್ಗ

ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಶಾಖೆ ಪ್ರಾರಂಭ

Published On :

ಕ.ಪ್ರ.ವಾರ್ತೆ , ಹೊಳಲ್ಕೆರೆ , ಫೆ. 14
ಗ್ರಾಹಕರು ತಮ್ಮ ವಾಹನ ವಿಮೆ, ಬೆಂಕಿ ಆಕಸ್ಮಿಕ, ಆರೋಗ್ಯ ವಿಮೆ ಮತ್ತಿತರ ಯಾವುದೇ ವಿಮಾ ಪಾಲಿಸಿ ಪಡೆಯಲು ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಹುಬ್ಬಳ್ಳಿ ಪ್ರಾದೇಶಿಕ ಮುಖ್ಯ ವ್ಯವಸ್ಧಾಪಕ ಡಾ. ಜೆ.ಪಾಂಡುರಂಗನಾಥ್ ಹೇಳಿದರು.
ಪಟ್ಟಣದ ಗಣಪತಿ ರಸ್ತೆಯ ಪರಮೇಶ್ವರಪ್ಪ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭವಾದ ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಈ ಕಂಪನಿಯಿಂದ ಹೊಳಲ್ಕೆರೆ ಮತ್ತು ಸುತಮುತ್ತಲಿನ ಗ್ರಾಮಗಳ ಗ್ರಾಹಕರು ಇಲ್ಲಿಯೆ ಎಲ್ಲಾ ವಿಮಾ ಸೌಲಭ್ಯಗಳ ಪ್ರಯೋಜನ ಪಡೆಯಬಹುದು. ಜಿಲ್ಲಾ ಕೇಂದ್ರವಾದ ಚಿತ್ರದುರ್ಗಕ್ಕೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.
ದಾವಣಗೆರೆ ವಿಭಾಗೀಯ ವ್ಯವಸ್ಥಾಪಕ ಎಸ್.ಎಸ್. ದಡೆದ್, ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಎ.ಪಿ ಕುಲಕರ್ಣಿ, ಹೊಳಲ್ಕೆರೆ ಶಾಖಾ ಅಡಳಿತಾಧಿಕಾರಿ ವೈ.ಮೋಹನ್, ಪ.ಪಂ. ಸದಸ್ಯ ಪಿ.ಎಚ್. ಮುರುಗೇಶ್, ಟಿ.ಚಂದ್ರಶೇಖರ್, ಎಂ.ಪ್ರಕಾಶ್ ಹಾಜರಿದ್ದರು.
ಶಿಕ್ಷಣದಿಂದ ಹಿಂದುಳಿದವರ ಅಭಿವೃದ್ಧಿ
ಶ್ರೀರಾಂಪುರ: ಶಿಕ್ಷಣದಿಂದ ಮಾತ್ರ ಹಿಂದುಳಿದವರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ಶ್ರೀರಾಂಪುರ ಹೋಬಳಿಯ ಓಬಳಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದಿಂದ ಬದುಕಿನ ನೈತಿಕತೆ, ಸಮಯ ಪ್ರಜ್ಞೆ, ದೂರದೃಷ್ಟಿ ಆಶಾಭಾವ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣ ಉದ್ಯೋಗಕ್ಕೆ ಸೀಮಿತವಾಗದೇ ಸಮಾಜದಲ್ಲಿ ಗೌರವವಾಗಿ ಬದುಕು ರೂಪಿಸಿಕೊಳ್ಳಲು ಪೂರಕವಾಗಿರುತ್ತದೆ. ಶಿಕ್ಷಣ ಮಾನವನ ದುರ್ಗುಣಗಳನ್ನು ದೂರ ಮಾಡಿ ಸದ್ಗುಣ ನೀಡುತ್ತದೆ. ಕೇವಲ ಅಂಕಗಳಿಕೆಗೆ ಶಿಕ್ಷಣ ನೀಡದೇ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳನ್ನೇ ಆಸ್ತಿ ಮಾಡಿ: ನಿವೃತ್ತ ಡಯಟ್ ಉಪನ್ಯಾಸಕ ಎಚ್. ಈರಣ್ಣ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯನ್ನಾಗಿ ನೀಡಬೇಕು. ಈ ನಿಟ್ಟಿನಲ್ಲಿ ವಿದ್ಯೆ, ವಿನಯ, ಸಂಸ್ಕಾರ ಮೂಡಿಸುವ  ಶಿಕ್ಷಣ ನೀಡಬೇಕು ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಬೆಳೆಸಲು ಪ್ರತಿಯೊಬ್ಬ ಪೋಷಕರು ಸಹಕರಿಸಬೇಕು ಎಂದರು. ತಾಪಂ ಸದಸ್ಯೆ ಕಮಲಮ್ಮ, ಗ್ರಾಪಂ ಸದಸ್ಯ ರಂಗನಾಥ, ಲಿಂಗರಾಜು, ರಾಜಪ್ಪ, ಸುಶೀಲಮ್ಮ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ಜಗ್ನನಾಥ್, ಮರುಳಪ್ಪ, ಶಿವಕುಮಾರ್, ಕೆಂಚಮ್ಮ ಉಪಸ್ಥಿತರಿದ್ದರು.
ಇಂದು ಜಯಂತಿ
ಚಳ್ಳಕೆರೆ: ಪಟ್ಟಣದ ತಾಲೂಕು ಆಡಳಿತ, ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಫೆ. 15ರ ಶನಿವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅನಿಲ್‌ಕುಮಾರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ವಹಿಸುವರು. ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಮೊಳಕಾಲ್ಮೂರು ಶಾಸಕ ಎಸ್. ತಿಪ್ಪೇಸ್ವಾಮಿ, ನಿವೃತ್ತ ಡಿವೈಎಸ್ಪಿ ಎಚ್. ಆಂಜನೇಯ, ತಹಸೀಲ್ದಾರ್ ಎಚ್.ವಿ. ವಿಜಯರಾಜು, ಬೈಲಪ್ಪ ಇತರರು ಭಾಗವಹಿಸುವರು.
ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ
ತರೀಕೆರೆ: ಸರ್ಕಾರದ ಯಾವುದೇ ಕಾಮಗಾರಿಗಳು ಕಳಪೆಯಾಗಬಾರದು. ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಜಿ.ಪಂ. ಸದಸ್ಯೆ ಹೇಮಾವತಿ ಕೃಷ್ಣಪ್ಪ ತಿಳಿಸಿದ್ದಾರೆ. ಇಲ್ಲಿಗೆ ಸಮೀಪದ ಉಡೇವ ಗ್ರಾಪಂ ವ್ಯಾಪ್ತಿಯ ಯರದಂಕಲು ಗ್ರಾಮಕ್ಕೆ ಕಲ್ಲತ್ತಿಗಿರಿಯಿಂದ ಕುಡಿಯುವ ನೀರು ಒದಗಿಸುವ 5 ಲಕ್ಷ ವೆಚ್ಚದ ನೂತನ ಪೈಪ್‌ಲೈನ್ ಕಾಮಗಾರಿ ಸ್ಥಳ ಪರಿಶೀಲಿಸಿದ ನಂತರ ಅವರು ಮಾತನಾಡಿದರು. ಕುಡಿವ ನೀರಿನ ಕಾಮಗಾರಿ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ವ್ಯವಸ್ಥಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಉತ್ತಮ ರೀತಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ಕಾರ್ಯ ವಿಳಂಬ ಹಾಗೂ ಕಳಪೆ ಕಾಮಗಾರಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಎಸ್.ಎ. ಕೃಷ್ಣಪ್ಪ, ಗ್ರಾ.ಪಂ. ಸದಸ್ಯ ಬಿ.ಮಂಜಪ್ಪ, ಗುತ್ತಿಗೆದಾರರು ಮತ್ತಿತರರು ಭಾಗವಹಿಸಿದ್ದರು.
ಇಂದಿನಿಂದ ಗೀತಹಬ್ಬ
ಶೃಂಗೇರಿ: ಬೆಂಗಳೂರಿನ ಉಪಾಸನಾ ಟ್ರಸ್ಟ್, ನಿರ್ಮಾಣ್ ಶೆಲ್ಟರ್ಸ್ ಮತ್ತು ಕೊಪ್ಪ- ಶೃಂಗೇರಿಯ ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಶಾಲೆ ಸಹಯೋಗದೊಂದಿಗೆ ಪಟ್ಟಣದ ಗೌರಿಶಂಕರ ಸಭಾಂಗಣದಲ್ಲಿ ಫೆ. 15 ಹಾಗೂ 16 ರಂದು ಆಯೋಜಿಸಲಾಗಿರುವ ಹಾಡುಹಬ್ಬ ಎರಡು ದಿನಗಳ ಗೀತಹಬ್ಬ ಹಾಗೂ ನೃತ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ರಾಷ್ಟ್ರಪ್ರಶಸ್ತಿ ವಿಜೇತ ಗಾಯಕ ಡಾ. ಕೆ.ವಿ. ಸುಬ್ಬಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರೀಶಂಕರ, ಡಾ.ಬಿ.ಕೆ. ಸುಮಿತ್ರ, ಗರ್ತಿಕೆರೆ ರಾಘಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಇಂದು ತಾಪಂ ಸಭೆ
ನರಸಿಂಹರಾಜಪುರ: ತಾಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ. ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆಯು ಫೆ. 15 ರ ಶನಿವಾರ ಬೆಳಗ್ಗೆ 11 ಗಂಟೆಗೆ ಸಾಮರ್ಥ್ಯ ಸೌಧದಲ್ಲಿ ನಡೆಯಲಿದೆ ಎಂದು ತಾಲೂಕು ಪಂಚಾಯಿತಿ ಪ್ರಕಟಣೆ ತಿಳಿಸಿದೆ.
ತಾಲೂಕು ಸಾಹಿತ್ಯ ಸಮ್ಮೇಳನ: ನಾಳೆ ಸಭೆ
ಭದ್ರಾವತಿ:  ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾ.1 ರಂದು 4ನೇ ತಾಲೂಕುಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಫೆ.16ರಂದು ಬೆಳಗ್ಗೆ 10.30 ಗಂಟೆಗೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಮ್ಮೇಳನದ ಆಯೋಜನೆಯ ಬಗ್ಗೆ ಚರ್ಚಿಸಲು ಸರ್ವ ಸದಸ್ಯರ ಸಭೆಯನ್ನು ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.
ಅಂಚೆ ಮುಷ್ಕರ ನಡೆಯುತ್ತಿರುವುದರಿಂದ ಸದಸ್ಯರಿಗೆ ಪ್ರತ್ಯೇಕ ಸೂಚನೆಗಳನ್ನು ಅಂಚೆಯ ಮೂಲಕ ರವಾನಿಸಿದ್ದರೂ ಒಂದೊಮ್ಮೆ ಅವುಗಳು ತಲುಪದಿದ್ದಲ್ಲಿ ಪತ್ರಿಕಾ ಪ್ರಕಟಣೆಯನ್ನೇ ಸಭೆಯ ಸೂಚನೆ ಎಂದು ತಿಳಿದು, ತಾಲೂಕಿನ ಸದಸ್ಯರು ಸಭೆಗೆ ಹಾಜರಾಗಲು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಕೋರಿದ್ದಾರೆ.
ಗ್ರಾಪಂ ಅಧ್ಯಕ್ಷೆ ಪದಚ್ಯುತಿ
ಸಾಗರ: ತಾಲ್ಲೂಕಿನ ಆನಂದಪುರಂ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎ. ಶಾಂತಮ್ಮ ವಿರುದ್ಧ ಶುಕ್ರವಾರ ಸಲ್ಲಿಸಿದ್ದ ಅವಿಶ್ವಾಸ ಮಂಡನೆಗೆ ಬಹುಮತ ದೊರತೆ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲಾಗಿದೆ.
ಸಮುದಾಯ ಭವನಕ್ಕೆ ಶಿಲಾನ್ಯಾಸ
ಶಿರಾಳಕೊಪ್ಪ: ಕೆಳದಿ ಅಸರರ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ನೇರಲಗಿ ವೀರಭದ್ರನ ಸನ್ನಿಧಿಯಲ್ಲಿ ರು. 25 ಲಕ್ಷ ವೆಚ್ಚದ ಸಮುದಾಯ ಭವನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದರು. ಶಿರಾಳಕೊಪ್ಪ ಹತ್ತಿರದ ನೇರಲಗಿ ವೀರಭದ್ರೇಶ್ವರ ವಿಶ್ವಸ್ಥ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿವೈ ರಾಘವೇಂದ್ರ ಮಾತನಾಡಿದರು. ಮಾಜಿ ಶಾಸಕ ಬಿ.ಎನ್. ಮಹಲಿಂಗಪ್ಪ, ಪದ್ಮನಾಭ ಭಟ್, ಅಗಡಿ ಅಶೋಕ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ್, ಈಶ್ವರಪ್ಪ ಬಂಗಾರ್ ನಾಯ್, ಶಿರಾಳಕೊಪ್ಪ ಘಟಕದ ಅಧ್ಯಕ್ಷ ಎಸ್.ಆರ್. ನಾಯ್ಕ್, ಮಂಚಿ ಶಿವಾನಂದ, ಶಿವಾನಂದ ಸ್ವಾಮಿ, ನಿವೇದಿತಾ ರಾಜು, ದೇವಸ್ಥಾನ ಸಮಿತಿ ಸದಸ್ಯರು ಮಹಿಳಾ ಘಟಕದ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.