ಶಿವಮೊಗ್ಗ

ಮಂಗನ ಕಾಯಿಲೆಗೆ ಮಲೆನಾಡು ಮತ್ತೆ ತಲ್ಲಣ

Published On :

ಶಿವಮೊಗ್ಗ/ತೀರ್ಥಹಳ್ಳಿ: ಜೀವ ತೆಗೆವ, ಪ್ರಾಣಿ ಸಾಂಕ್ರಾಮಿಕವಾದ ಮಂಗನ ಖಾಯಿಲೆ ಮತ್ತೆ ದಾಂಗುಡಿ ಇಟ್ಟಿದೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ 11 ಹಳ್ಳಿಗಳಲ್ಲಿ ಸೋಂಕು ಇರುವುದು ಖಚಿತವಾಗಿದೆಯಲ್ಲದೇ, 18 ಮಂದಿಯಲ್ಲಿ ಮಂಗನ ಕಾಯಿಲೆ ಇರುವುದು ಪುಣೆಯ ಆರ್‌ಟಿಪಿ ಸಿಆರ್ ಪ್ರಯೋಗಶಾಲೆಯಿಂದ ದೃಢಪಟ್ಟಿದೆ.
ಜನವರಿಯಿಂದೀಚೆಗೆ ತೀರ್ಥಹಳ್ಳಿ ತಾಲೂಕು ಒಂದರಲ್ಲೇ ಈ ವರೆಗೆ 92 ಮಂದಿ ಮಂಗನ ಖಾಯಿಲೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದಾರೆ. ಒಟ್ಟಾರೆ 58 ಸ್ಯಾಂಪಲ್‌ಗಳನ್ನು ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಎಲ್ಲೆಲ್ಲಿ ಈ ಸೋಂಕು?: ಹೊಸನಗರ ತಾಲೂಕಿನಲ್ಲೂ ಈ ಸೋಂಕು ಪತ್ತೆಯಾಗಿದ್ದು, ಉಣುಗು ಕೀಟವನ್ನು ಪರೀಕ್ಷೆ ಮಾಡಿದಾಗ ಮಂಗನ ಖಾಯಿಲೆ ಅಲ್ಲಿರುವುದು ಗೊತ್ತಾಗಿದೆ. ಈ ಉಣುಗು ಕೀಟ ಪ್ರಾಣಿ ಅಥವಾ ಮನುಷ್ಯನನನ್ನು ಕಚ್ಚಿದಲ್ಲಿ ಅದು ಹರಡುವ ಸಾಧ್ಯತೆ ಹೆಚ್ಚಿದೆ.
ಹೊಸನಗರ ತಾಲೂಕಿನ ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಿಂದ ಸಂಗ್ರಹಿಸಿದ ಕೀಟದಲ್ಲಿ ಈ ಸೋಂಕಿರುವುದು ಗೊತ್ತಾಗಿದೆ.
ಮಂಗದ ದೇಹ ಪತ್ತೆ: ಇನ್ನು ತೀರ್ಥಹಳ್ಳಿಯಲ್ಲಿ ಕಳೆದ ಡಿಸೆಂಬರ್‌ನಿಂದಲೇ ಈ ಸೋಂಕಿನ ಸೂಕ್ಷ್ಮಗಳು ಗೋಚರಿಸಲಾರಂಭಿಸಿದ್ದು, ಜನವರಿಯಿಂದ ತೀವ್ರಗೊಂಡಿದೆ. ಅದರಲ್ಲೂ ಶುಕ್ರವಾರ ಇಲ್ಲಿನ ಸಹ್ಯಾದ್ರಿ ಪಾಲಿಟೆಕ್ನಿಕ್ ಬಳಿಯೇ ಒಂದು ಮಂಗದ ದೇಹ ಪತ್ತೆಯಾಗಿರುವುದು ಈ ಭಾಗದ ಜನರ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಈವರೆಗೆ ತೀರ್ಥಹಳ್ಳಿ ತಾಲೂಕಿನ ಕನ್ನಂಗಿ, ಹಾರೊಗೊಳಿಗೆ, ಕೋಣಂದೂರು, ಮಂಡಗದ್ದೆ, ತನಿಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಸೋಂಕು ಇರುವುದು ದೃಢಪಟ್ಟಿದೆ.
ಜೀವ ತೆಗೆವ ಸೋಂಕು: ಈ ಬಾರಿ ದೊಡ್ಡಮಟ್ಟದಲ್ಲಿ ಸೋಂಕು ಕಾಣಿಸಿಕೊಂಡಿಲ್ಲವಾದರೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂಬುದು ಹಿರಿಯ ತಂತ್ರಜ್ಞ ಚಂದ್ರಶೇಖರ್ ಮತ್ತು ಮೈಕ್ರೋ ಬಯಾಲಜಿಸ್ಟ್ ಸಂಧ್ಯಾ ಹೇಳುತ್ತಾರೆ.
ಒಸಡಿನಿಂದ ರಕ್ತ: ಸೋಂಕು ತಗುಲಿದವರಿಗೆ ಆರಂಭದಲ್ಲಿ ತಲೆನೋವು ಜ್ವರದಿಂದ ಬಳಲಿ, ನಂತರ ವಾಂತಿಯೂ ಆರಂಭವಾಗುತ್ತದೆ. ಕೊನೆ ಹಂತದಲ್ಲಿ ಕೈಕಾಲು ಮುರುಟಿಕೊಳ್ಳುವ ಜೊತೆಗೆ ಒಸಡಿನಿಂದ ರಕ್ತ ಬರಲೂ ಆರಂಭವಾಗುತ್ತದೆ. ಹೊಸದಾಗಿ ಸೋಂಕು: ಮುಂಚಿತವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಂಡರೆ ಈ ಸೋಂಕು ತಗುಲುವುದಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತದೆ.
ಸದ್ಯ ಸಾಗರದ 12 ಉಣುಗು ಕೀಟವನ್ನು ಪ್ರಯೋಗಕ್ಕೆ ಒಡ್ಡಿದರೆ, ತೀರ್ಥಹಳ್ಳಿಯಲ್ಲಿ 43 ಕೀಟವನ್ನು ಪರೀಕ್ಷೆಗೊಳಪಡಿಸಲಾಗಿದೆ. ಹೊಸನಗರ ತಾಲೂಕಿನಲ್ಲಿ 33 ಉಣುಗು ಕೀಟ ಪರೀಕ್ಷೆಗೊಳಪಡಿಸಿ ಒಂದರಲ್ಲಿ ಸೋಂಕಿರುವುದು ಪತ್ತೆಯಾಗಿದೆ.
ಸೋಂಕು ಪೀಡಿತ ಪ್ರದೇಶದಲ್ಲಿ ಕಣ್ಗಾವಲು
ತೀರ್ಥಹಳ್ಳಿ:  ಕನ್ನಂಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಜ್ವರ (ಕೆಎಫ್‌ಡಿ) ಪ್ರಕರಣಗಳು ಕಂಡುಬರುತ್ತಿದೆ.
ಆ ವ್ಯಾಪ್ತಿಯ ಗ್ರಾಮಗಳಲ್ಲಿ ಮಾತ್ರವಲ್ಲದೆ, ತಾಲೂಕಿನ ವಿವಿಧ ಪ್ರಾಥಮಿಕ ಕೇಂದ್ರ ವ್ಯಾಪ್ತಿಯಲ್ಲೂ ವ್ಯಾಪಕವಾಗಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹೆಚ್ಚಿನ ಚಿಕಿತ್ಸೆ ವ್ಯವಸ್ಥೆ: ರೋಗ ಚಿಕಿತ್ಸೆಗಾಗಿ ಅಗತ್ಯ ಔಷಧಿಗಳನ್ನು ದಾಸ್ತಾನಿಟ್ಟುಕೊಳ್ಳಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಕಳುಹಿಸುವ ಹಾಗೂ ಅಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಭೀತಿಗೊಳಲಾಗದಿರಿ:  ಆರೋಗ್ಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಜ್ವರ ಸಮೀಕ್ಷೆ, ರೋಗ ತಪಾಸಣೆ ನಡೆಸಲಾಗುತ್ತಿದೆ. ಕರಪತ್ರಗಳು ಹಾಗೂ ಇತರೆ ಚಟುವಟಿಕೆಗಳ ಮೂಲಕ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಜನರಿಗೆ ವ್ಯಾಪಕವಾಗಿ ಅರಿವನ್ನು ಮೂಡಿಸಲಾಗುತ್ತಿದೆ. ಜನರು ಅನಗತ್ಯವಾಗಿ ಭಯಗ್ರಸ್ಥರಾಗದಂತೆ ಹಾಗೂ ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗುತ್ತಿದೆ.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.