ಶಿವಮೊಗ್ಗ

20 ನಿಮಿಷ 20 ಸುದ್ದಿ

Published On :

ಶಾಲಾ ವಾರ್ಷಿಕೋತ್ಸವ

ಭದ್ರಾವತಿ: ಸರ್ಕಾರಿ ಶಾಲೆಯೊಂದರಲ್ಲಿ ಶಾಲಾ ವಾರ್ಷಿಕೋತ್ಸವದ ಸಲುವಾಗಿ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಪೋಷಕರಿಗೆ ಕ್ರೀಡೆ, ಶಿಕ್ಷಕ ಶಿಕ್ಷಕಿಯರಿಗೆ ಸ್ಪರ್ಧೆಗಳು ಮುಂತಾದ ಚಟುವಟಿಕೆಗಳನ್ನು ನೋಡಿದರೆ ಇದು ಖಾಸಗಿ ಶಾಲೆಯನ್ನೂ ಮೀರಿಸಿದ ಚಟುವಟಿಕೆ ನಡೆಸುತ್ತಿದೆ ಎನಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ (ಡಯಟ್) ಉಪನ್ಯಾಸಕ ನಾಗೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಭದ್ರಾವತಿ ತಾಲೂಕು ಹಳ್ಳಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಇಂತಹ ಸಮಾರಂಭ ಶಿಕ್ಷಕರ ಕರ್ತವ್ಯ ಮತ್ತು ಶ್ರಮವನ್ನು ಪ್ರತಿಬಿಂಬಿಸುತ್ತದೆಂದರು. ಜಿಪಂ ಸದಸ್ಯ ಎಸ್. ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ದಾರುಕೇಶ್ ತಾಪಂ ಸದಸ್ಯೆ ಪಾರ್ವತೀ ಬಾಯಿ, ಗ್ರಾಪಂ ಅಧ್ಯಕ್ಷ ಪ್ರೇಮ್ಕುಮಾರ್, ಶಿಕ್ಷಣ ಸಂಯೋಜಕ ಜಿ.ಎಸ್.ಮಹೇಶ್ವರಪ್ಪ, ಉಮೇಶ್, ನಾಗಮ್ಮ ಮೊದಲಾದವರು  ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಶೋಭಾ ವರದಿ ವಾಚಿಸಿದರು. ಮುಖ್ಯ ಶಿಕ್ಷಕ ಕೂಬಾನಾಯ್ಕ ಸ್ವಾಗತಿಸಿದರು.

ಹೃದಯದ ಗಡ್ಡೆ ಶಸ್ತ್ರ ಚಿಕಿತ್ಸೆ
ಶಿವಮೊಗ್ಗ:  58 ವರ್ಷ ವಯಸ್ಸಿನ ಮಹಿಳೆಗೆ ಅಪರೂಪದ ಹೃದಯದ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯನ್ನು ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ. ಲಕ್ಷಕ್ಕೆ ಒಬ್ಬರಲ್ಲಿ ಕಾಣಿಸಿಕೊಳ್ಳುವ ಎಡ ಅಪಧಮನಿಯ ಮಿಕ್ಸೋಮಾ ಶಸ್ತ್ರಚಿಕಿತ್ಸೆಯನ್ನು ಡಾ. ನರೇಂದ್ರ ಜಿ. ನಿಶಾನಿಮಠ್ ನೇತೃತ್ವದ ನಾಲ್ಕು ವೈದ್ಯರ ತಂಡವು 5 ಗಂಟೆ ಕಾಲ ನಡೆಸಿ ಯಶಸ್ವಿಯಾಗಿದೆ.
ಈ ಶಸ್ತ್ರಚಿಕಿತ್ಸಾ ವಿಧಾನಕ್ಕೆ ರು. 1.5 ಲಕ್ಷ ವೆಚ್ಚ ತಗುಲಿದ್ದು, ಈ ಪ್ರಕರಣದಲ್ಲಿ ಸರ್ಕಾರ ಬಿಪಿಎಲ್ ರೋಗಿಗಳಿಗೆ ಪ್ರಾಯೋಜಿಸಿರುವ ಆರೋಗ್ಯ ಶ್ರೀ ಯೋಜನೆಯಡಿ ನೆರವೇರಿಸಲಾಗಿದೆ.ಅಪರೂಪದ ಚಿಕಿತ್ಸೆ: ಇದು ಅಪರೂಪದ ಹಾಗೂ ಜಟಿಲ ಶಸ್ತ್ರಚಿಕಿತ್ಸೆ. ರೋಗಿಯ ಹೃದಯದಿಂದ ಹೊರತೆಗೆದಿರುವ ಗಡ್ಡೆಯು  ಸುಮಾರು 7 ಸೆ.ಮೀ. ಉದ್ದವಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಯನ್ನು ಪರೀಕ್ಷಿಸಿದಾಗ ಗಡ್ಡೆ ಕಂಡುಬಂದಿದೆ. ಇಂತಹ ಪ್ರಕರಣಗಳಲ್ಲಿ ತಕ್ಷಣ ಚಿಕಿತ್ಸೆ ಮಾಡದಿದ್ದರೆ ರೋಗಿಯ ಜೀವಕ್ಕೆ ಅಪಾಯವಾಗುವ ಸಂಭವವಿತ್ತು ಎಂದರು. ಈ ಸಂದರ್ಭದಲ್ಲಿ ಸಲಹಾ ಹೃದಯ ತಜ್ಞ ಡಾ. ಜೆ. ನರೇಂದ್ರ, ಸಿಇಒ ಡಾ. ಅವಿನಾಶ್ ಇದ್ದರು.


ಇಂದು 'ಅನಿಸಿಕೆ' ಬಿಡುಗಡೆ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ತಿಂಗಳು ಏರ್ಪಡಿಸುವ ಸಾಹಿತ್ಯ ಹುಣ್ಣಿಮೆಯ 102ನೇ ಕಾರ್ಯಕ್ರಮ ಫೆ.16 ರಂದು ಭಾನುವಾರ ಸಂಜೆ 6 ಗಂಟೆಗೆ ನಗರದ ಅಶೋಕನಗರ ಬಡಾವಣೆಯ ಸುವರ್ಣ ಸಂಸ್ಕೃತಿ ಭವನದಲ್ಲಿ ಜಿಲ್ಲಾ ಹವ್ಯಕ ಸಂಘದ ಆತಿಥ್ಯದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ. ತಬಲಾ ವಾದನ ಮತ್ತು ಬಾನ್ಸುರಿ ವಾದನಗಳ ಜುಗಲ್ ಬಂದಿ ಈ ಬಾರಿಯ ವಿಶೇಷ. ಜಿಲ್ಲಾ ಹವ್ಯಕ ಸಂಘದ ಅಧ್ಯಕ್ಷರು ಮತ್ತು ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ. ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ಯಾಂಭಟ್ಟ ಅವರನ್ನು ಸನ್ಮಾನಿಸಲಾಗುವುದು.ಹೊತ್ತಗೆ ಬಿಡುಗಡೆ:  “OÚ«Ú­sÚ®Úúڒ ಸಾಪ್ತಾಹಿಕ ಪುರವಣಿ ಸಂಪಾದಕ ರಾಧಾಕೃಷ್ಣ ಭಡ್ತಿ, 101ನೇ ಸಾಹಿತ್ಯ ಹುಣ್ಣಿಮೆಯ ಆತಿಥ್ಯ ನೀಡಿದ್ದ ನಗರಸಭಾ ಮಾಜಿ ಸದಸ್ಯರಾದ ಆಶಾ ಮತ್ತು ಚನ್ನಬಸಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಲ್. ರಾಜು ಪಂಡಿತ್ ಅವರ “@¬ÒOæ’ ಕವನ ಸಂಕಲನ ಬಿಡುಗಡೆಯಾಗಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ.

21ರಂದು 'ಕಾವ್ಯ ರಸಗ್ರಹಣ'
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಫೆ. 21ರಂದು ವಿಶ್ವ ಮಾತೃಭಾಷಾ ದಿನಾಚರಣೆಯ ಅಂಗವಾಗಿ ಪ್ರಾಚೀನ ಕವಿ ಕಾವ್ಯಗಳ ರಸಗ್ರಹಣ ಶಿಬಿರವನ್ನು ಜಿಲ್ಲೆಯ ಕನ್ನಡ ಶಿಕ್ಷಕರು, ಉಪನ್ಯಾಸಕ ವೃಂದಕ್ಕೆ ಏರ್ಪಡಿಸಲಾಗಿದೆ. ಪಂಪನ ಸಾಹಿತ್ಯ ಕುರಿತು ಹೊಸ ಓದು ಶಿಬಿರದ ಮುಖ್ಯ ಉದ್ದೇಶವಾಗಿದೆ. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರು, ಪದವಿಪೂರ್ವಕಾಲೇಜುಗಳ ಕನ್ನಡ ಉಪನ್ಯಾಸಕರು ಮತ್ತು ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ತಾಲೂಕುಗಳ ಪ್ರೌಢಶಾಲಾ ಕನ್ನಡ ಶಿಕ್ಷಕರಿಗೆ ಶಿಬಿರದಲ್ಲಿ ಭಾಗವಹಿಸುವಂತೆ ಆಯಾ ಇಲಾಖೆಗಳ ಉಪನಿರ್ದೇಶಕರು ಸೂಕ್ತ ಆದೇಶ ಮಾಡಿ ಶಾಲಾ ಕಾಲೇಜುಗಳಿಗೆ ರವಾನಿಸಿದ್ದಾರೆ. ಇವರಲ್ಲದೆ ಆಸಕ್ತ ಶಿಕ್ಷಕರು ಭಾಗವಹಿಸಬಹುದು. ನಾಡಿನ ಹೆಸರಾಂತ ವಿದ್ವಾಂಸರು ಶಿಬಿರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮತ್ತು ಸಲಹೆ ನೀಡಲಿದ್ದಾರೆ. ಆಯಾ ವಿಭಾಗದ ಶಿಕ್ಷಕರು ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಮಾಡಲಾಗಿದೆ. ಗಮಕ, ವ್ಯಾಖ್ಯಾನ ಮಾದರಿ ಪ್ರಸ್ತುತಪಡಿಸಲಾಗುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಅವರನ್ನು (ಮೊ. 9449552795) ಸಂಪರ್ಕಿಸಲು ಕೋರಲಾಗಿದೆ.

ಸಾಹಿತ್ಯದಿಂದ ನವಚೈತನ್ಯ
ಶಿಕಾರಿಪುರ: ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಪಠ್ಯಪುಸ್ತಕದಲ್ಲಿ ಸದಾ ತೊಡಗಿಸಿಕೊಂಡಿರುವ ಮಕ್ಕಳಿಗೆ ನವ ಚೈತನ್ಯವನ್ನು ನೀಡಲಿದೆ. ಈ ದಿಸೆಯಲ್ಲಿ ಶಾಲಾ ವಾರ್ಷಿಕೋತ್ಸವ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಇಲ್ಲಿನ ದಂತ ವೈದ್ಯ ಡಾ.ಪ್ರಶಾಂತ್ ಅಭಿಪ್ರಾಯಪಟ್ಟರು. ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ ಟ್ರಸ್ಟಿ ಹಾಗೂ ಕನಕ ಎಜುಕೇಷನಲ್ ಸೊಸೈಟಿ ವತಿಯಿಂದ ಪಟ್ಟಣದ ಹಳೇ ದೂಪದಹಳ್ಳಿ ಬಳಿಯ ಕಾನಹಕ್ಕಲಿನಲ್ಲಿರುವ ಕನಕ ವಸತಿ ವಿದ್ಯಾ ಶಾಲೆಯಲ್ಲಿ ನಡೆದ ಶಾರದಾ ಪೂಜೆ ಹಾಗೂ ಪೋಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದ ಶ್ರೀಲಕ್ಷ್ಮಿವೆಂಕಟೇಶ್ವರ ದೇವಾಲಯದ ಪ್ರಧಾನ ಅರ್ಚಕ ವಾದಿರಾಜಾಚಾರ್ ಬಟ್ನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಭಾರತಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಧ್ಯಕ್ಷ ಎಚ್.ಮಲ್ಲಪ್ಪ, ಮುಖಂಡ ಕೆ.ಹಾಲಪ್ಪ, ನಿಂಗಪ್ಪ, ಮಲ್ಲಿಕಾರ್ಜುನ್, ಲಕ್ಷ್ಮಿಕಾಂತ್, ಬಿ.ಸಿ ವೇಣುಗೋಪಾಲ್, ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕೀಳರಿಮೆ ತೊರೆಯಲಿ
ಸಾಗರ: ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ, ಹಿಂಜರಿಕೆ ಮನೋಭಾವದಿಂದ ದೊರಕಿದ ಅವಕಾಶ ಕೈಚೆಲ್ಲುತ್ತಾರೆ. ನಿಮ್ಮಲ್ಲಿನ ಪ್ರತಿಭೆ ಅಭಿವ್ಯಕ್ತಗೊಳಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದು ಬೆಂಗಳೂರು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಾರ್ಯಕ್ರಮ ಸಂಯೋಜನಾಧಿಕಾರಿ ಉಮಾಪತಿ ಹೇಳಿದರು. ಇಲ್ಲಿನ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಗುರುವಾರ ಏರ್ಪಡಿಸಿದ್ದ 5 ದಿನಗಳ ಅಂತರ ಇಲಾಖಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದಾಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಯಾಂತ್ರಿಕ ವಿಭಾಗದ ಮುಖ್ಯಸ್ಥ ವಾಸುದೇವ ಎಸ್. ಅಪ್ಪಾಜಿ, ಉಪನ್ಯಾಸಕರಾದ ನವೀನ್, ಮಾರ್ತಾಂಡಪ್ಪ ಹಾಜರಿದ್ದರು. ಶಿಬಿರದ ಯೋಜನಾಧಿಕಾರಿ ಎಚ್.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಟಿ.ಪವನ್ ವಂದಿಸಿದರು. ಶಿವಕುಮಾರ್ ನಿರೂಪಿಸಿದರು.

ಸಾಹಿತ್ಯಕ್ಕೆ ಯವಕರ ನಿರಾಸಕ್ತಿ
ಶಿರಾಳಕೊಪ್ಪ: ಇಂದಿನ ಯುವ ಜನಾಂಗಕ್ಕೆ ಒಳ್ಳೆಯ ಸಂಗತಿ ತಿಳಿದುಕೊಳ್ಳಲು ಸಮಯವಿಲ್ಲ. ಉತ್ತಮ ಮೌಲ್ಯ, ಸಂಸ್ಕೃತಿ, ಸಾಹಿತ್ಯ ಹಾಗೂ ವೈಚಾರಿಕ ಚಿಂತನೆ ಕಡಿಮೆ ಆಗುತ್ತಿವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಕುಮಾರ್ ವಿಷಾದಿಸಿದರು. ಪಟ್ಟಣದ ಮಹದೇವಯ್ಯ ಬಯಲು ರಂಗಮಂದಿರದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಸ್ಥೆ ಮತ್ತು ಶಿರಾಳಕೊಪ್ಪ ವಿಪ್ರ ಸಮಾಜದ ಆಶ್ರಯದಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಗ್ಗ ಕುರಿತು ಮಾತನಾಡಿದ ನಟೇಶ್ ಅವರು, ಅತ್ಯಂತ ಕಡಿಮೆ ವಿದ್ಯಾಭ್ಯಾಸ ಮಾಡಿದ ಡಿ.ವಿ. ಗುಂಡಪ್ಪ ಅವರು ಒಬ್ಬ ಮಹಾನ್ ಸಾಹಿತಿ ಆಗಿ 'ಮಂಕುತಿಮ್ಮನ ಕಗ್ಗ'ದಂತಹ ಕೃತಿ ರಚಿಸಿದರು. ಬಳಿಕ ಮೈಸೂರು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಕೊಟ್ಟು ಗೌರವಿಸಿತು ಎಂದರು. ಅಧ್ಯಕ್ಷತೆ ವಹಿಸಿ ವಿಪ್ರ ನೌಕರರ ಸಂಘದ ತಾಲೂಕು ಅಧ್ಯಕ್ಷ ಸತ್ಯನಾರಾಯಣರಾವ್ ಮಾತನಾಡಿದರು. ಶಿಕಾರಿಪುರ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಣಪತಿ ಭಟ್ಟ ಮತ್ತು ಶಿರಾಳಕೊಪ್ಪ ಭಾಗದ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಣ್ಣಭಟ್ ಮಾತನಾಡಿದರು. 10 ವರ್ಷದ ಬಾಲಕಲಾವಿದೆ ಮಾನಸ ನಾಡಿಗ್ ಅವರು ಸುಗಮ ಸಂಗೀತ, ಭಗವದ್ಗೀತೆ ಶ್ಲೋಕ, ಹರಿಕತೆ ಹೇಳಿ ರಂಜಿಸಿದರು.

ಸಮುದಾಯ ಭವನ ಉದ್ಘಾಟನೆ
ಸೊರಬ: ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುವ ಕಟ್ಟಡ ಗುಣಮಟ್ಟ ಮಾತ್ರವಲ್ಲ, ಅದರ ಬಳಕೆಯೂ ಸಮರ್ಪಕವಾಗಿರಬೇಕು. ಸಮುದಾಯದ ಏಳಿಗೆಗೆ ನಿರ್ಮಿಸುವ ಇಂತಹ ಕಟ್ಟಡಗಳನ್ನು ಸಮಾಜದ ವಿಕಾಸಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಆಗ ಮಾತ್ರ ನಿಮ್ಮ ಹಣ, ಶ್ರಮ ಎಲ್ಲವೂ ಸಾರ್ಥಕವಾಗುತ್ತದೆ ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು. ತಾಲೂಕು ಹೋಬಳಿ ಕೇಂದ್ರ ಉಳವಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕದ ಯೋಜನೆಯಡಿ ರು. 10 ಲಕ್ಷ ಅನುದಾನದಲ್ಲಿ  ನಿರ್ಮಿಸಲಾದ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಉಳವಿ ಗ್ರಾಪಂ ಅಧ್ಯಕ್ಷ ಪರಶುರಾಮಪ್ಪ ಕೋಳಿಸಾಲು ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಎಚ್.ಎಂ. ಬಸವಲಿಂಗಪ್ಪ, ತಾಪಂ ಉಪಾಧ್ಯಕ್ಷೆ ನೀಲಮ್ಮ ಸುರೇಶ, ಸದಸ್ಯ ಬಿ.ನಿಂಗಪ್ಪ ಬರಗಿ, ಕೆ. ಮಹಾದೇವಪ್ಪ ಉಪಸ್ಥಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳಾದ ಇಸ್ಮಾಯಿಲ್, ರವಿಕುಮಾರ್, ವೆಂಕಟೇಶ್, ಶ್ರೀಮತಿ ಮಂಜುಳಾ, ಡಾ. ರಾಮಚಂದ್ರ, ಡಾ. ರಂಗಸ್ವಾಮಿ, ಚಿದಾನಂದ, ತಿಮ್ಮಣ್ಣ ಹಾಗೂ ಭಿಮನಗೌಡ ಹಾಜರಿದ್ದರು.

ಇಂದು ಆರೋಗ್ಯ ಕೇಂದ್ರಕ್ಕೆ ಶಂಕು
ಶಿವಮೊಗ್ಗ: ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘವು ಸ್ಥಾಪಿಸಲು ಉದ್ದೇಶಿಸಿರುವ ಹೊಯ್ಸಳ ಆರೋಗ್ಯ ಕೇಂದ್ರದ ಶಿಲಾನ್ಯಾಸ ಸಮಾರಂಭ ಫೆ.16 ರಂದು ಬೆಳಗ್ಗೆ 10.30 ಗಂಟೆಗೆ ಕುವೆಂಪು ನಗರ (ಸವಳಂಗ ರಸ್ತೆ)ದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಎಂ.ವೇಣುಗೋಪಾಲ್ ಹಾಗೂ ಉಪಾಧ್ಯಕ್ಷ ಎಂ.ಶಂಕರ್, ಸಂಘದ ನಿವೇಶನದಲ್ಲಿ 1.25 ಕೋಟಿ ವೆಚ್ಚದಲ್ಲಿ 50 ಚದರ ಅಳತೆಯ ಸುಸಜ್ಜಿತ ಆರೋಗ್ಯ ಕೇಂದ್ರ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದರು. ಆರೋಗ್ಯ ಕೇಂದ್ರಕ್ಕೆ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಶಿಲಾನ್ಯಾಸ ನೆರವೇರಿಸಿದರು.  ಕಾರ್ಯಕ್ರಮವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಪಿ.ವಿ. ಕೃಷ್ಣಭಟ್, ಎಂ.ಬಿ. ಭಾನುಪ್ರಕಾಶ್, ಸಿದ್ದರಾಮಣ್ಣ, ಶಾಸಕ ಕೆ.ಬಿ.ಪ್ರಸನ್ನಕುಮಾರ್ ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಪಾಲ್ಗೊಳ್ಳುವರು.

ಸರಸಮ್ಮಗೆ ಬೀಳ್ಕೊಡುಗೆ
ಸೊರಬ: ಇಲ್ಲಿನ ಹರೀಶಿ- ಮಂಗಳೂರು ಗ್ರಾಮದಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸರಸಮ್ಮ ಸೇವೆಯಿಂದ ನಿವೃತ್ತಿಯಾದ ಹಿನ್ನೆಲೆ ಅವರನ್ನು ಚಂದ್ರಗುತ್ತಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದಿಂದ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಇಂದು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು, ಆರ್ಥಿಕ ಸದೃಢತೆ ಸಾಧಿಸುವಲ್ಲಿ ಅಂಗನವಾಡಿಗಳ ಸೇವೆಯೂ ಕಾರಣಗಳಾಗಿವೆ ಎಂದರು. ಇದೇ ವೇಳೆ ಚಂದ್ರಗುತ್ತಿ ಅಂಗನವಾಡಿ ಕಾರ್ಯಕರ್ತೆ ಎಸ್.ರಾಧಾ ಅವರಿಗೆ ಇಲಾಖೆ ವತಿಯಿಂದ ಉತ್ತಮ ಕಾರ್ಯಕರ್ತೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಂಗಳೂರು ಸ್ತ್ರೀಶಕ್ತಿ ಸಂಘದ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಗುತ್ತಿ ವಲಯ ಮೇಲ್ವಿಚಾರಕಿ ವೀಣಾ ಸಿರ್ಸಿಕರ್ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ, ಆರೋಗ್ಯ ಕಾರ್ಯಕರ್ತೆ ಲಕ್ಷ್ಮೀ, ಶಿಕ್ಷಕಿಯರಾದ ಛಾಯಾ, ಪ್ರೇಮ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸುಮಿತ್ರಮ್ಮ, ಲಲಿತಮ್ಮ, ವಿಜಯಾ ಹೆಗಡೆ, ಜ್ಯೋತಿರ್ಮಾಲ, ಸುನೀತಾ, ವೆಂಕಮ್ಮ, ವಿನೋದಮ್ಮ, ಗಾಯತ್ರಿ ಮೊದಲಾದವರು ಇದ್ದರು.

ಎಸ್ಸೆಸೆಲ್ಸಿ ಪರೀಕ್ಷೆ ಸಂವಾದ
ಶಿರಾಳಕೊಪ್ಪ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ಶಿಕ್ಷಕರು. ವಿದ್ಯಾರ್ಥಿಗಳು ವಿದ್ಯಾವಂತರಾಗಲಿ ಎಂದು ಶಿಕ್ಷಣವನ್ನು ಕೊಡುವ ಶಿಕ್ಷಕರು ಮೊದಲು ಅಧ್ಯಯನ ಮಾಡಿ ಬೇಧನೆ ಮಾಡುವದರಿಂದ ಹೆಚ್ಚಿನ ಉಪಯೋಗವಾಗಲಿದೆ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶಿರಾಳಕೊಪ್ಪ ಗುರುಭವನದಲ್ಲಿ ನಡೆದ ಕರ್ನಾಟಕ ರಾಜ್ಯ ನೌಕರರ ಸಂಘ ಶಿಕಾರಿಪುರ, ಆದಿತ್ಯಾ ಗ್ಯಾಸ್ ಡಿಸ್ಟ್ರಿಬ್ಯೂಟರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಯುಕ್ತ ಆಶ್ರಯದಲ್ಲಿ ನಡೆದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ಸಂವಾದ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಐಎಎಸ್ ಅಧಿಕಾರಿ ರಾಕೇಶ್ ಕುಮಾರ್ ಪರೀಕ್ಷೆ ಎದುರಿಸಲು ಮಾನಸಿಕ ಸಿದ್ಧತೆ ವಿಷಯದ ಬಗ್ಗೆ ಮಾತನಾಡಿ, ಮಕ್ಕಳನ್ನು ಹುರಿದುಂಬಿಸಿದರು. ಇಂಗ್ಲೀಷ್ ವಿಷಯದ ಬಗ್ಗೆ ಅಶೋಕ, ಗಣಿತ ವಿಷಯ ಕುರಿತು ಎಸ್ ಎನ್ ಸೋಮಶೇಖರ್, ವಿಜ್ಞಾನ ವಿಷಯದ ಬಗ್ಗೆ ಪ್ರವೀಣ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ಮಾಡಿದರು. ಅಧ್ಯಕ್ಷತೆಯನ್ನು ತಾಲೂಕು ನೌಕರರ ಸಂಘದ ಅಧ್ಯಕ್ಷ ಎ. ಚಿನ್ನಪ್ಪ ವಹಿಸಿ ಮಾತನಾಡಿದರು.

ವಿನಾಕಾರಣ ಪ್ರತಿಭಟನೆ ಸಲ್ಲ
ಸೊರಬ: ತಾಲೂಕಿನ ಆನವಟ್ಟಿ ಗ್ರಾಮ ಪಂಚಾಯತಿ ಪಿಡಿಒ ಭೂತಣ್ಣನವರ ಮೇಲೆ ಸದರಿ ಗ್ರಾಮ ಪಂಚಾಯತಿಯ ಕೆಲ ಸದಸ್ಯರು ಇತ್ತೀಚೆಗೆ ಗ್ರಾಪಂ ಆವರಣದಲ್ಲಿ ವಿನಾಕಾರಣ ಪ್ರತಿಭಟನೆ ನಡೆಸುತ್ತಿರುವುದು ದೌರ್ಜನ್ಯ ಎಂದು ಸರ್ಕಾರಿ ನೌಕರರ ಆರ್ಡಿಪಿಆರ್ ಸಂಘ ಖಂಡಿಸಿದೆ. ಈ ರೀತಿ ವಿನಾಕಾರಣ ಪ್ರತಿಭಟನೆ ನಡೆಸುತ್ತಿರುವುದರಿಂದ ಕಚೇರಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಪಿಡಿಒ ಕಚೇರಿಗೆ ಹಾಜರಾದರೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿ ಗೂಂಡಾ ವರ್ತನೆ ಪ್ರದರ್ಶಿಸಿರುವ ಇವರು ಆಡಳಿತದ ಶಾಂತಿ ಕದಡಿದ್ದಾರೆ. ಕಾನೂನುಬಾಹಿರ ಕೆಲಸಗಳಿಗೆ ಮಂಜೂರಾತಿ ನೀಡುವಂತೆ ಒತ್ತಡ ಹೇರುತ್ತ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ಇದರಿಂದ ನೊಂದು ಭೂತಣ್ಣ ಅವರು ಶಿರಾಳಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರಿಗೆ ಈ ರೀತಿ ದೌರ್ಜನ್ಯ ಎಸಗುತ್ತಿರುವವರ ಮೇಲೆ ಕಾನೂನು ಜರುಗಿಸಬೇಕು. ಇಲ್ಲದಿದ್ದಲ್ಲಿ ಸಂಘದ ವತಿಯಿಂದ ಅನಿರ್ದಿಷ್ಟ ಕಾಲಾವಧಿ ಧರಣಿ ನಡೆಸಲಾಗುವುದು ಎಂದು ಸರ್ಕಾರಿ ನೌಕರರ ಆರ್ಡಿಪಿಆರ್ ಸಂಘದ ಪದಾಧಿಕಾರಿಗಳಾದ ಹನುಮಪ್ಪ, ಪರಮೇಶ್ವರಪ್ಪ, ಹೋಮೇಶಪ್ಪ, ನಾಗರಾಜ, ಈಶ್ವರಪ್ಪ, ಚೂಡಾಮಣಿ, ರಾಜು, ಮಂಜಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಯೋಜನೆ ಸದ್ಬಳಕೆಯಾಗಲಿ
ಹೊಸನಗರ: ಸರ್ಕಾರ ಸದುದ್ದೇಶದಿಂದ ರೂಪಿಸಿರುವ ಯೋಜನೆ ದುರುಪಯೋಗವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಮೇಲಿದೆ ಎಂದು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಹೇಳಿದರು. ತಾಲೂಕಿನ ಎಂ. ಗುಡ್ಡೇಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕಾದುದು ಅಧಿಕಾರಿಗಳ ಜವಾಬ್ದಾರಿಯಾದರೆ, ಸರ್ಕಾರ ಕೊಟ್ಟಿರುವ ಸೌಲಭ್ಯ ಸದುಪಯೋಗವಾಡಿಕೊಳ್ಳಬೇಕಾದುದು ಫಲಾನುಭವಿಗಳ ಕರ್ತವ್ಯ ಎಂದರು.ಎಸ್ಡಿಎಂಸಿ ಅಧ್ಯಕ್ಷ ಸತೀಶ್ ಕಲಸಸಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ವಿನೋದಾ ಬಾಯಿ, ಶಿಕ್ಷಕ  ನವೀನ್, ಗೀತಾ, ಶಾರದಮ್ಮ, ಎಸ್ಡಿಎಂಸಿ ಸದಸ್ಯ ಮಂಡಾನಿ ಟಾಕಪ್ಪ, ವಿಶ್ವನಾಥ, ಶಿವರಾಂ, ಸುಜಾತಾ, ಗಾಯತ್ರಿ, ಶೋಭಾ, ಸುಶೀಲಾ ಮೊದಲಾದವರು ಇದ್ದರು.

ಸೂಕ್ತ ರಕ್ಷಣೆಗೆ ಆಗ್ರಹ
ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಷ್ಟ್ರೀಕೃತವಲ್ಲದ ಮಾರ್ಗಗಳಲ್ಲಿ ಬಸ್ಸು ಸೇವೆ ಆರಂಭಿಸಲು ಅನುಮತಿ ಕೇಳಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾ ಖಾಸಗಿ ಬಸ್ಸು ಕೆಲಸಗಾರರ ಒಕ್ಕೂಟ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದ ಒಕ್ಕೂಟದ ಸದಸ್ಯರು, ಖಾಸಗಿ ಬಸ್ಸುಗಳ ಅಸ್ತಿತ್ವದಿಂದಾಗಿ ಸ್ಟ್ಯಾಂಡ್ ಏಜೆಂಟರು, ಚಾಲಕರು, ನಿರ್ವಾಹಕರು ಮತ್ತು ಇತರೆ ಸಿಬ್ಬಂದಿ ಸೇರಿಕೊಂಡು ಇನ್ನೂ ಸುಮಾರು ಹದಿಮೂರು ಅವಲಂಬಿತ ಉದ್ದಿಮೆಗಳು ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿವೆ. ಸುಮಾರು 50 ಸಾವಿರಕ್ಕಿಂತ ಹೆಚ್ಚು ಮಂದಿ ಹಾಗೂ ಅವರ ಕುಟುಂಬಸ್ಥರು ಈ ಉದ್ಯಮವನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ ಎಂದರು. ಒಂದು ವೇಳೆ ಕೆಎಸ್ಆರ್ಟಿಸಿ ಹೆಚ್ಚಿನ ಸೇವೆ ಆರಂಭಿಸಿದರೆ ಖಾಸಗಿ ಉದ್ಯಮ ನಷ್ಟಕ್ಕೆ ಒಳಗಾಗಿ ಅವಲಂಬಿತ ಸಿಬ್ಬಂದಿ ಬೀದಿ ಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಒಕ್ಕೂಟದ ಅಧ್ಯಕ್ಷ ಪಾಟೀಲ್, ಪ್ರಮುಖರಾದ ಸಿದ್ದಪ್ಪ, ಗುರುಪುರ ರವಿ, ದಾನೇಶ್, ರಾಜೇಗೌಡ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹಕ್ಕುಪತ್ರ ನೀಡಲು ಆದ್ಯತೆ ನೀಡಿ
ಸಾಗರ: ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಬಗರ್ಹುಕುಂ ಹಾಗೂ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಅಧಿಕಾರಿಗಳ ಸಭೆ ನಡೆಯಿತು.  ಸಭೆಯಲ್ಲಿ ಮಾತನಾಡಿದ ಕಾಗೋಡು, ಮುಂದಿನ ಮೂರು ತಿಂಗಳೊಳಗೆ ಅರಣ್ಯಹಕ್ಕು ಭೂಮಿಯ ಸಮೀಕ್ಷೆ ನಡೆಸಿ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಲು ಸಾಧ್ಯವಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಹಾಗೂ ಗ್ರಾಮ ಅರಣ್ಯ ಹಕ್ಕು ಸಮಿತಿಯವರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚನೆ ನೀಡಿದರು.15 ದಿನ ಗಡುವು: ಜಿಲ್ಲೆಯಲ್ಲಿ 1.50 ಲಕ್ಷ, ಹೊಸನಗರದಲ್ಲಿ 12 ಸಾವಿರ ಹಾಗೂ ಸಾಗರ ತಾಲ್ಲೂಕಿನಲ್ಲಿ 6 ಸಾವಿರ ಅರಣ್ಯವಾಸಿಗಳಿದ್ದಾರೆ. ಬಗರ್ಹುಕುಂ ಅರ್ಜಿಗಳನ್ನು 15 ದಿನದೊಳಗೆ ಪರಿಶೀಲಿಸಿ ಕಂದಾಯ ಇಲಾಖೆಗೆ ರವಾನಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಪಿ.ಬ್ಯಾನರ್ಜಿ ಅವರಿಗೆ ಸೂಚಿಸಿದರು. ತಾಪಂ ಅಧ್ಯಕ್ಷ ಹರೀಶ್ ಗಂಟೆ, ಕಾರ್ಯನಿರ್ವಹಣಾಧಿಕಾರಿ ಟಿ.ಸಿದ್ದಪ್ಪ, ಬಗರ್ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ಪೌರಾಯುಕ್ತ ಚಂದ್ರಶೇಖರ್, ಉಪ ಅರಣ್ಯ ಸಂರಕ್ಷಣಾಧಿಕಾರಿಬ್ಯಾನರ್ಜಿ ಹಾಜರಿದ್ದರು.

ತೆಳು ಪ್ಲಾಸ್ಟಿಕ್ ಬಳಕೆ ನಿಷೇಧ
ಶಿವಮೊಗ್ಗ: ಸರ್ಕಾರವು 40 ಮೈಕ್ರಾನ್ಗಿಂತ ತೆಳುವಾಗಿರುವ ಪ್ಲಾಸ್ಟಿಕ್ಗಳ ಉತ್ಪಾದನೆ ಹಾಗೂ ಬಳಕೆಯನ್ನು  ನಿಷೇಧಿಸಿ ಆದೇಶ ಹೊರಡಿಸಿದ್ದರೂ ಮತ್ತು ಇವುಗಳ ಬಳಕೆ ಮಾಡದಂತೆ ಈ ಹಿಂದೆ ನಗರಸಭೆಯಿಂದ ಸಾಕಷ್ಟು ತಿಳುವಳಿಕೆ, ಕ್ರಮಗಳನ್ನು ಕೈಗೊಂಡಿದ್ದರೂ ಸಹ ನಗರದಲ್ಲಿ ಅನಧಿಕೃತವಾಗಿ ಅಲ್ಲಲ್ಲಿ ಮಾರಾಟ ಮತ್ತು ಬಳಕೆ ಮಾಡುತ್ತಿರುವುದನ್ನು ಶಿವಮೊಗ್ಗ ಮಹಾನಗರ ಪಾಲಿಕೆಯು ಗಂಭೀರವಾಗಿ ಪರಿಗಣಿಸಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದಾಗಿ ನಗರದ ಘನತ್ಯಾಜ್ಯ ನಿರ್ವಹಣೆಯಲ್ಲಿ ಹಾಗೂ ಸಾರ್ವಜನಿಕರಿಗೆ ತೀವ್ರತರಹದ ಅನಾನುಕೂಲವಾಗುತ್ತಿದೆ. ಆದಕಾರಣ ಸರ್ಕಾರದ ಆದೇಶದನ್ವಯ ಪ್ಲಾಸ್ಟಿಕ್ ಉತ್ಪಾದಕ ಘಟಕಗಳು ಉತ್ಪಾದನೆ ಮಾಡದಂತೆ, ಮಾರಾಟಗಾರರು ಇವುಗಳನ್ನು ಖರೀದಿಸದಂತೆ ಹಾಗೂ ಸಾರ್ವಜನಿಕರು ಇವುಗಳನ್ನು ಬಳಕೆ ಮಾಡದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಕಾನೂನು ಉಲ್ಲಂಘಿಸಿ, 40 ಮೈಕ್ರಾನ್ಗಿಂತ ತೆಳುವಾಗಿರುವ ಪ್ಲಾಸ್ಟಿಕ್ಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆ ಮಾಡುವುದು ಕಂಡುಬಂದಲ್ಲಿ ನಗರಪಾಲಿಕೆ ಸ್ಥಳ ಪರಿಶೀಲಿಸಿ ವಶಪಡಿಸಿಕೊಳ್ಳಲಾಗುವುದಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಮಾತಿನ ಚಕಮಕಿ
ಸಾಗರ: ತಾಲೂಕಿನ ನಾಡಕಲಸಿಯಲ್ಲಿ ಶನಿವಾರ ಮೆಸ್ಕಾಂ ಲೈನ್ಮನ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿದೆ. ಶನಿವಾರ ಮೆಸ್ಕಾಂ ಲೈನ್ಮನ್ ಹರೀಶ್ ಎಂಬವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವೀರಪ್ಪ ಎಂಬವರು ದೂರಿದ್ದಾರೆ. ತಾನು ನಾಡಕಲಸಿ ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷನಾಗಿದ್ದು, ಶನಿವಾರ ಹರೀಶ್ ಅವರ ಬಳಿ ವಿದ್ಯುತ್ ವ್ಯತ್ಯಯ ಕುರಿತು ಮಾಹಿತಿ ನೀಡಲು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಪ್ರತಿಕ್ರಿಯೆ ನೀಡದೆ ಇರುವ ಕುರಿತು ಪ್ರಶ್ನಿಸಲು ಮುಂದಾದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ವೀರಪ್ಪ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. 3 ಅಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ದ್ವೇಷದ ಹಿನ್ನೆಲೆಯಲ್ಲಿ ನನ್ನ ಮೇಲೆ ನಾಡಕಲಸಿ ಗ್ರಾಮದ ಈರಪ್ಪ ಹಾಗೂ ಮಂಜಪ್ಪ ಎಂಬವರು ಹಲ್ಲೆ ಮಾಡಿದ್ದಾರೆ ಎಂದು ಲೈನ್ಮನ್ ಹರೀಶ್ ದೂರು ನೀಡಿದ್ದಾರೆ. ಶನಿವಾರ ಬೆಳಗ್ಗೆ ನಾನು ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಏಕಾಏಕಿ ಈರಪ್ಪ ಹಾಗೂ ಮಂಜಪ್ಪ ಹಲ್ಲೆ ನಡೆಸಿದ್ದಾರೆ. ಮಾನಸಿಕವಾಗಿ ನೊಂದಿದ್ದೇನೆ ಎಂದು ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರೀಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಪರಸ್ಪರ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.