ಮಾರ್ಗ ಸಮೀಕ್ಷೆ ನಡೆಸಿ ಪರವಾನಗಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ. 20
ಸಾರಿಗೆ ಬಸ್ಗಳು ಪರಸ್ಪರ ಪೈಪೋಟಿ ನಡೆಸಿ ಅವಘಡಗಳನ್ನಾಗುವುದನ್ನು ತಪ್ಪಿಸಲು ಇನ್ನು ಮುಂದೆ ಮಾರ್ಗ ಸಮೀಕ್ಷೆ ನಡೆಸಿದ ನಂತರವೇ ವೇಳಾಪಟ್ಟಿ ನಿಗದಿ ಮಾಡಿ ಪರವಾನಗಿ ನೀಡುವ ಒಲವನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ವ್ಯಕ್ತಪಡಿಸಿದೆ. ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಈ ವಿಷಯ ತಿಳಿಸಿ, ನೂತನ ಪರವಾನಗಿ ವಿಷಯವನ್ನು ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಮುಂದೂಡಿದರು.
2004ರಲ್ಲಿ ರಾಜ್ಯ ಸಾರಿಗೆ ಪ್ರಾಧಿಕಾರವು ನ್ಯಾಯಾಲಯಗಳ ತೀರ್ಪಿನ ಅನ್ವಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿ, ಮಾರ್ಗ ಸಮೀಕ್ಷೆ ನಡೆಸಿದ ನಂತರವೇ ಮಜಲು ವಾಹನಗಳಿಗೆ ಪರವಾನಗಿ ನೀಡಲು ಸೂಚಿಸಿತ್ತು. ಆದರೆ, ಇದೂವರೆಗೆ ಸಮೀಕ್ಷೆ ಕಾರ್ಯದಲ್ಲಿ ಪ್ರಗತಿಯಾಗಿಲ್ಲ. ಜಿಲ್ಲೆಯ ಅಲ್ಲಲ್ಲಿ ಕೆಲವೆಡೆ ಸಮೀಕ್ಷೆ ನಡೆದಿರುವುದನ್ನು ಬಿಟ್ಟರೆ ಬಹುತೇಕ ಕಡೆ ನಡೆದಿಲ್ಲ. ಅಲ್ಲದೆ, ಅಂತರ ಜಿಲ್ಲಾ ಬಸ್ ಸಂಚಾರದಲ್ಲಂತೂ ಪ್ರಗತಿಯೇ ಆಗಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರದ ಪ್ರಾಧಿಕಾರದ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಅನಗತ್ಯ ಪೈಪೋಟಿ: ಇದೂವರೆಗೆ 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸುವ ಸಂದರ್ಭದಲ್ಲಿ ಅರ್ಜಿಯಲ್ಲಿ ಯಾವ ವೇಳಾಪಟ್ಟಿ ನಮೂದಿಸಲಾಗಿರುತ್ತದೆಯೋ ಅದೇ ವೇಳಾಪಟ್ಟಿಯನ್ನು ಅನುಮೋದಿಸಿ ಪರವಾನಗಿ ನೀಡಲಾಗುತ್ತಿತ್ತು. ಬಸ್ ಸಾಗುವ ಅವಧಿ (ರನ್ನಿಂಗ್ ಟೈಮ್) ಸರಾಸರಿ ಎಕ್ಸ್ ಪ್ರೆಸ್ ಬಸ್ ಗಳಿಗೆ 1 ಕಿಮೀಗೆ 1.5 ನಿಮಿಷ, ಲೋಕಲ್ ಬಸ್ಗಳಿಗೆ 2 ನಿಮಿಷವಿದೆ. ಇದನ್ನು ಗಮನಿಸದೇ ವೇಳಾಪಟ್ಟಿ ನಿಗದಿ ಮಾಡಿರುವುದರಿಂದ ಖಾಸಗಿ ಬಸ್ಗಳ ನಡುವೆ ಅನಗತ್ಯ ಪೈಪೋಟಿ ನಡೆಯುತ್ತಿತ್ತು.
ಹಾಗಾಗಿ ಮಾರ್ಗ ಸಮೀಕ್ಷೆ ಮುಗಿದ ನಂತರ ಹೊಸ, ಅಗತ್ಯ ಬಿದ್ದಲ್ಲಿ ನವೀಕೃತ ಪರವಾನಗಿಗಳಿಗೂ ವೇಳಾಪಟ್ಟಿ ನಿಗದಿಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಪರಸ್ಪರ ಪೈಪೋಟಿಗೆ ಬೀಳುವ ವೇಳಾಪಟ್ಟಿಯಿಂದ ಬಸ್ ಸಿಬ್ಬಂದಿ ಅನಗತ್ಯ ಒತ್ತಡಕ್ಕೊಳಗಾಗುತ್ತಾರೆ. ಅವಘಡಗಳು ಸಂಭವಿಸುತ್ತವೆ. ಇದನ್ನು ಸರಿಪಡಿಸಲು ಪೂರ್ವಭಾವಿ ಸಮೀಕ್ಷೆ ನಡೆಯಬೇಕು ಎಂದು ಖಾಸಗಿ ಬಸ್ ಮಾಲೀಕರು ಸಭೆಯಲ್ಲಿ ಒತ್ತಾಯಿಸಿದರು.
ಜಿಲ್ಲೆ ಸಮೀಕ್ಷೆ: ಜಿಲ್ಲೆಯಲ್ಲಿ ರಾಷ್ಟ್ರೀಕೃತ ಮಾರ್ಗಗಳಾದ ಶಿವಮೊಗ್ಗ-ಬೆಂಗಳೂರು ಹಾಗೂ ಶಿವಮೊಗ್ಗ- ಹರಿಹರ ಮಾರ್ಗ ಹೊರತುಪಡಿಸಿ, ಈಗಾಗಲೇ ಬಸ್ ಗಳು ಸಂಚರಿಸುತ್ತಿರುವ ಮಾರ್ಗ ಹೊರತುಪಡಿಸಿ 142 ಹೊಸ ಮಾರ್ಗಗಳನ್ನು ಸಮೀಕ್ಷೆಯಲ್ಲಿ ಈಗಾಗಲೇ ಗುರುತಿಸಲಾಗಿದೆ. ಆದರೆ, ಯಾರೂ ಈ ಮಾರ್ಗದಲ್ಲಿ ಬಸ್ ಓಡಿಸುತ್ತಿಲ್ಲ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು.
ಇರುವ ಮಾರ್ಗಗಳ ಪರವಾನಗಿ ನವೀಕರಣ ಸಂದರ್ಭದಲ್ಲಿ ಮತ್ತೆ ಸಮೀಕ್ಷೆ ಅಗತ್ಯವಿಲ್ಲ ಎಂಬುದು ಖಾಸಗಿ ಬಸ್ ಮಾಲೀಕರ ಪ್ರತಿಪಾದನೆಯಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹಾಲಿ ಖಾಸಗಿ ಬಸ್ಗಳು ಸಾಗುತ್ತಿರುವ ಮಾರ್ಗದಲ್ಲಿಯೇ (ಖಾಸಗಿ ಸಿಟಿ ಸರ್ವಿಸ್) ಅವರ ಬಸ್ ಬಿಡುವುದಕ್ಕಿಂತ ಜನರಿಗೆ ಅಗತ್ಯವಿರುವ ಮಾರ್ಗಗಳಲ್ಲಿ ಬಸ್ಗಳನ್ನು ಓಡಿಸಲಿ ಎಂಬುದು ಅವರ ಒತ್ತಾಯ.
ಅವಕಾಶ ನೀಡಬಾರದು: ರಾಷ್ಟ್ರೀಕೃತವಲ್ಲದ ಮಾರ್ಗದಲ್ಲಿ ಸರ್ಕಾರಿ ಸಾರಿಗೆ ಬಸ್ಗಳಿಗೆ ಹೆಚ್ಚು ಪರವಾನಗಿ ನೀಡಿದರೆ ಖಾಸಗಿ ಬಸ್ ಉದ್ಯಮ ಅವನತಿಯತ್ತ ಹೋಗುತ್ತದೆ. ಇದಕ್ಕೆ ಪ್ರಾಧಿಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಯಿತು.
ಜನರಿಗೆ ಅನುಕೂಲ: ಇದಕ್ಕೆ ಕೆಎಸ್ಸಾರ್ಟಿಸಿ ಕಾನೂನು ಅಧಿಕಾರಿ ರಾಜೀವ್ ಶೆಟ್ಟಿ ಅವರು ಪ್ರತಿವಾದ ಮಂಡಿಸಿ, ಸೇವೆಯೇ ನಮ್ಮ ಉದ್ದೇಶ. ಸರ್ಕಾರಿ ಬಸ್ಗಳು ಸಂಚರಿಸಿದರೆ ಜನರಿಗೆ ಅನುಕೂಲವಿದೆ ಎಂದು ಪ್ರತಿಪಾದಿಸಿದರು. ಜಿಲ್ಲಾಧಿಕಾರಿಗಳು ಪ್ರಮುಖ ವಿಷಯಗಳನ್ನು ಮುಂದಿನ ಸಭೆಯಲ್ಲಿ ತೀರ್ಮಾನಿಸುವುದಾಗಿ ಸಭೆಯಲ್ಲಿ ಮುಂದೂಡಿದರು.
ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ಜಿಲ್ಲಾ ಪೊಲೀಸ್ ವರಿಷ್ಠ ಕೌಶಲೇಂದ್ರ ಕುಮಾರ್ ಇದ್ದರು.
ಹೊಸ ಮಾರ್ಗದಲ್ಲಿ ಸರ್ಕಾರಿ ಬಸ್ ಇರಲಿ
ಜೆನರ್ಮ್ ಯೋಜನೆಯಡಿ ಶಿವಮೊಗ್ಗ ನಗರಕ್ಕೆ 65 ಸರ್ಕಾರಿ ಸಾರಿಗೆ ಬಸ್ ಗಳಿಗೆ ಪರವಾನಗಿ ನೀಡುವುದಾಗಿ ಹೇಳಿದ್ದೀರಿ. ಬಸ್ ಬಿಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈಗಾಗಲೇ ಖಾಸಗಿ ಬಸ್ಗಳು ಸಂಚರಿಸುತ್ತಿರುವ ಮಾರ್ಗದಲ್ಲಿಯೇ ಸರ್ಕಾರಿ ಬಸ್ ಸಂಚಾರಕ್ಕೆ ಅವಕಾಶ ಮಾಡುವುದು ಬೇಡ ಎಂದು ನಗರ ಸಾರಿಗೆ ಸಂಸ್ಥೆಗಳ ಬಸ್ ಮಾಲೀಕರ ಸಂಘದ ಅಧ್ಯಕ್ಷ ಪಿ. ರುದ್ರೇಶ್ ಸಭೆಯಲ್ಲಿ ಹೇಳಿದರು.
ಈ ತೀರ್ಮಾನವನ್ನು ಜಿಲ್ಲಾಡಳಿತ ಅನುಷ್ಠಾನಕ್ಕೆ ತಂದರೆ ಖಾಸಗಿ ಬಸ್ಗಳು ನಿಲ್ಲಬೇಕಾಗುತ್ತದೆ. ಸಾವಿರಾರು ಸಿಬ್ಬಂದಿ ಅತಂತ್ರರಾಗುತ್ತಾರೆ. ಆಟೋ ಕಾಂಪ್ಲೆಕ್ಸ್ ಕಾರ್ಮಿಕರು ಕೆಲವವಿಲ್ಲದಂತಾಗುತ್ತಾರೆ. ಆದ್ದರಿಂದ ಮಾರ್ಗ ಸಮೀಕ್ಷೆ ನಡೆಸಿ, ಹೊಸ ಮಾರ್ಗ ಗುರುತಿಸಿ ಅಲ್ಲಿ ಜೆನರ್ಮ್ ಯೋಜನೆ ಸರ್ಕಾರಿ ಬಸ್ಗಳು ಸಂಚರಿಸಲಿ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಸಾರಿಗೆ ಸಂಸ್ಥೆಯ ಲಾ ಆಫೀಸರ್ ರಾಜೀವ್ ಶೆಟ್ಟಿ, ಜೆನರ್ಮ್ ಯೋಜನೆಯಡಿ ಬಸ್ ಸಂಚಾರ ಆರಂಭಿಸಬೇಕೆಂಬುದು ನಮ್ಮ ಪ್ರಸ್ತಾವನೆ ಅಲ್ಲ. ಯೋಜನೆಯಲ್ಲಿಯೇ ಹಾಗಿದೆ. ಸರ್ಕಾರಿ ಬಸ್ ಗಳನ್ನು ಓಡಿಸಬೇಕು ಎಂದರು.
ಅಲ್ಲದೆ, ಜೆನರ್ಮ್ ಯೋಜನೆ ಅಡಿ ಬರೀ ಬಸ್ಗಳನ್ನು ಓಡಿಸುವುದಲ್ಲ. ಮೂಲ ಸೌಕರ್ಯವನ್ನೂ ಅಭಿವೃದ್ಧಿಪಡಿಸಬೇಕು. ರಸ್ತೆ ದುರಸ್ತಿ ಮಾಡಬೇಕು ಎಂಬ ಮಾತುಗಳೂ ಸಭೆಯಲ್ಲಿ ಕೇಳಿಬಂದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

