ಸಾಲ ವಾಪಸ್ ಕೊಡು ಎಂದದ್ದಕ್ಕೆ ವ್ಯಕ್ತಿ ಕೊಲೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ. 20
ಸಾಲ ಕೊಟ್ಟ ಹಣವನ್ನು ವಾಪಸ್ ಕೇಳಿದ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲಳ್ಳಿಯ ಹುಡ್ಕೋ ಕಾಲೋನಿಯ ನಿವಾಸಿ, ಎಪಿಎಂಸಿಯ ಅಡಕೆ ಮಂಡಿಯೊಂದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶ್ರೀಧರ್ (42) ಎಂಬವರೇ ಆರೋಪಿಯಾಗಿದ್ದು, ಕೋಟೆ ದುರ್ಗಾಪರಮೇಶ್ವರಿ ದೇವಾಲಯದ ಬಳಿಯ ನಿವಾಸಿ ಮಂಜಪ್ಪ (41) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಇವರು ಬಿ.ಎಚ್. ರಸ್ತೆಯ ಮೀನಾಕ್ಷಿ ಭವನದ ಬಳಿ ಅಂಗಡಿ ನಡೆಸುತ್ತಿದ್ದರು.
ಶ್ರೀಧರ್ ಹಾಗೂ ಮಂಜಪ್ಪ ಇಬ್ಬರು ಅನೇಕ ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಮಂಜಪ್ಪನವರು ಶ್ರೀಧರ್ಗೆ 9 ಲಕ್ಷವನ್ನು ಸಾಲವಾಗಿ ಕೊಟ್ಟಿದ್ದರು. ಆದರೆ, ಸಾಲ ಹಿಂದಿರುಗಿಸಿರಲಿಲ್ಲ.
ಇತ್ತೀಚೆಗೆ ಮಂಜಪ್ಪ ಅವರು ಸಾಲ ಹಿಂದಿರುಗಿಸುವಂತೆ ಶ್ರೀಧರ್ಗೆ ಒತ್ತಡ ಹೇರಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಯು ಫೆ. 16ರ ಭಾನುವಾರ ಹಣ ನೀಡುವುದಾಗಿ ನಂಬಿಸಿ ಮಂಜಪ್ಪರನ್ನು ತಾನು ಕಾರ್ಯನಿರ್ವಹಣೆ ಮಾಡುತ್ತಿದ್ದ ಎಪಿಎಂಸಿಯಲ್ಲಿರುವ ಅಡಕೆ ಮಂಡಿಯ ಗೋದಾಮಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಗೋದಾಮಿನಲ್ಲಿದ್ದ ತೂಕ ಮಾಡುವ ಯಂತ್ರದ ಕಲ್ಲಿನಿಂದ ತಲೆಗೆ ಹೊಡೆದು ಮಂಜಪ್ಪರನ್ನು ಕೊಲೆ ಮಾಡಿದ್ದಾನೆ. ನಂತರ ಏನೂ ಗೊತ್ತಿಲ್ಲದಂತೆ ಆರಾಮಾಗಿ ಓಡಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆವೇ ಕೊಲೆಗೀಡಾದ ಮಂಜಪ್ಪರವರ ಪತ್ನಿ ಶಶಿಕಲಾ ಕೋಟೆ ಪೊಲೀಸ್ ಠಾಣೆಯಲ್ಲಿ ತಮ್ಮ ಪತಿ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು. ಅವರ ಸ್ನೇಹಿತ ಶ್ರೀಧರ್ ಜತೆ ತೆರಳಿದ್ದ ಮಾಹಿತಿ ಕೂಡ ನೀಡಿದ್ದರೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಸಿಪಿಐ ಜೈರಾಜ್, ಸಬ್ ಇನ್ಸ್ಪೆಕ್ಟರ್ ಎನ್. ಗುರುಪ್ರಸಾದ್ ಅವರು ಆರೋಪಿ ಶ್ರೀಧರ್ನನ್ನು ವಿಚಾರಣೆ ನಡೆಸಿದಾಗ ಕೊಲೆಯ ವೃತ್ತಾಂತ ಬಯಲಾಗಿದೆ. ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಹತ್ಯೆ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ.
ಜತೆಗೆ ತಾನು ಕಾರ್ಯನಿರ್ವಹಣೆ ಮಾಡುತ್ತಿದ್ದ ಮಲ್ಲಪ್ಪಗೌಡ ಸನ್ಸ್ ಎಂಬ ಅಡಕೆ ಮಂಡಿಗೆ ಸೇರಿದ ಗೋದಾಮಿನಲ್ಲಿದ್ದ ಮಂಜಪ್ಪನ ಶವ ತೋರಿಸಿದ್ದಾನೆ. ಶವವು ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದು, ದುರ್ನಾತ ಬರಲಾರಂಭಿಸಿತ್ತು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಚಾಲಕ ಆತ್ಮಹತ್ಯೆ
ಶಿವಮೊಗ್ಗ: ಇಲ್ಲಿನ ಹೊಳೆ ಬಸ್ ನಿಲ್ದಾಣದ ಬಳಿ ಸೇತುವೆ ಕೆಳಭಾಗ ತುಂಗಾ ನದಿ ದಡದಲ್ಲಿ ಕೆಎಸ್ಆರ್ಟಿಸಿ ಮೈಸೂರು ಡಿಪೋದ ಚಾಲಕ ಚಂದ್ರಪ್ಪ (35) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮಲವಗೊಪ್ಪ ಬಳಿ ಎರಡು ಕೆಎಸ್ಆರ್ಟಿಸಿ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ಬಸ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದರಲ್ಲಿ ಒಂದು ಬಸ್ಸನ್ನು ಮಾತ್ರ ಆರ್ಟಿಓ ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಆದರೆ ಚಂದ್ರಪ್ಪ ಚಾಲಕನಾಗಿದ್ದ ಬಸ್ ಅನ್ನು ತಾಂತ್ರಿಕ ನ್ಯೂನತೆಯ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರಲಿಲ್ಲ. ಕಳೆದ ಎರಡು ದಿನಗಳಿಂದ ಈ ಬಸ್ಸಿನ ಹೊಣೆಹೊತ್ತು ಸ್ಥಳದಲ್ಲಿದ್ದ ಚಂದ್ರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಪ್ಪ ಆತ್ಮಹತ್ಯೆಗೆ, ಕೆಲಸ ಕಳೆದುಕೊಳ್ಳುವ ಭೀತಿ ಅಥವಾ ಕೌಟುಂಬಿಕ ಕಾರಣ ಇರಬಹುದೆಂದು ಶಂಕಿಸಲಾಗಿದೆ. ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಕಲಿ ಮದ್ಯ ವಶ
ಶಿವಮೊಗ್ಗ: ಇಲ್ಲಿನ ಮಿಳಘಟ್ಟ ಒಂದನೇ ತಿರುವಿನಲ್ಲಿ ರಿಸರ್ವ್ ಕ್ವಾಟರ್ಸ್ ಹಿಂಭಾಗದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 18 ಬಾಕ್ಸ್ ನಕಲಿ ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಮದ್ಯದ ಮೌಲ್ಯ 36 ಸಾವಿರ ರುಪಾಯಿ ಎಂದು ಅಂದಾಜಿಸಲಾಗಿದ್ದು, ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ. ಅನಿಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ದಾಳಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿ ವೇಣುಗೋಪಾಲ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

