6 ತಿಂಗಳಿಂದ ಅಲುಗಾಡದ ಆ್ಯಂಬುಲೆನ್ಸ್
ಕ.ಪ್ರ.ವಾರ್ತೆ ಶಿವಮೊಗ್ಗ ಫೆ.24
ಅತ್ಯಮೂಲ್ಯ ಕೊಡುಗೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ಮೆಗ್ಗಾನ್ ಆಸ್ಪತ್ರೆ ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಗೆ ಗೊತ್ತಿಲ್ಲ ಎಂಬುದು ಈಗ ಸಾಬೀತಾಗಿದೆ.
ಅತ್ಯಂತ ಕಾಳಜಿಯಿಂದ, ಬಡ ರೋಗಿಗಳಿಗೆ ಅನುಕೂಲವಾಗಲಿ ಕಾರ್ಪೋರೇಷನ್ ಬ್ಯಾಂಕ್ ನೀಡಿದ ಜೀವರಕ್ಷಕ ಆ್ಯಂಬುಲೆನ್ಸ್ ವಾಹನ ಒಂದೇ ಒಂದು ಕಿ.ಮೀ. ಸಾಗಿಲ್ಲ. ಕಳೆದ 6 ತಿಂಗಳಿಂದ ಯಾವೊಬ್ಬ ರೋಗಿಗೂ ಉಪಯೋಗವಾಲಿಲ್ಲ. ಸಿಮ್ಸ್ ಕಾಲೇಜಿನ ಎದುರು ಈ ಆ್ಯಂಬುಲೆನ್ಸ್ ಫಳಫಳ ಹೊಳೆಯುತ್ತಾ ನಿಂತಿದೆ.
ವೆಂಟಿಲೇಟರ್: ಇದೇನು ಮಾಮೂಲಿ ಆ್ಯಂಬುಲೆನ್ಸ್ ಅಲ್ಲ. ಸುಮಾರು ರು. 35 ಲಕ್ಷ ಬೆಲೆ ಬಾಳುವ ಈ ವಾಹನದಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದೆ. ಇಂತಹ ಸೌಲಭ್ಯ ಇರುವ ಏಕೈಕ, ಸರ್ಕಾರದ ವಶದಲ್ಲಿರುವ ಆ್ಯಂಬುಲೆನ್ಸ್ ವಾಹನವಿದು. ಬಿಟ್ಟರೆ ಇನ್ನೊಂದೆರಡು ಖಾಸಗಿ ಆ್ಯಂಬುಲೆನ್ಸ್ ಇದನ್ನು ಬಳಸುವ ಒಂದೇ ಒಂದು ಅವಕಾಶವೂ ಮೆಗ್ಗಾನ್ ಆಸ್ಪತ್ರೆಗೆ ಸಿಗಲಿಲ್ಲವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಈ ಪ್ರಶ್ನೆಯನ್ನು ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಲೇಪಾಕ್ಷಿ ಅವರನ್ನು ಕೇಳಿದರೆ, ಗೊತ್ತಿಲ್ಲ ಎಂದು ಉತ್ತರಿಸುತ್ತಾರೆ. -ಕನ್ನಡಪ್ರಭ- ಪ್ರತಿಕ್ರಿಯೆ ಬಯಸಿದಾಗ, ನಾವು ಈಗಾಗಲೇ ಸಿಮ್ಸ್ ಗೆ ಹಸ್ತಾಂತರಿಸಿದ್ದೇವೆ. ಅವರಿಗೇ ಕೇಳಬೇಕು ಎನ್ನುತ್ತಾರೆ.
ದೊಡ್ಡ ಲಾಬಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಈ ಜೀವರಕ್ಷಕ ವಾಹನವೂ ಸೇರಿ ನಾಲ್ಕು ಆ್ಯಂಬುಲೆನ್ಸ್ಸ್ಗಳಿವೆ. ಆದರೆ ಚಾಲಕರಿರುವುದು ಮೂವರು ಮಾತ್ರ. ಅಲ್ಲದೇ ಆ್ಯಂಬುಲೆನ್ಸ್ ಬಳಕೆಯ ದೊಡ್ಡ ಲಾಬಿ ಇದ್ದು, ಯಾರಾದರೂ ಗಂಭೀರ ಸ್ಥಿತಿಯಲ್ಲಿರುವ ರೋಗಿ ಮೆಗ್ಗಾನ್ ಆಸ್ಪತ್ರೆಗೆ ಬಂದರೆ ಮಧ್ಯವರ್ತಿಗಳೇ ಅವರ ಬಳಿ ಬಂದು, ಇಲ್ಲಿ ಚನ್ನಾಗಿ ನೋಡ್ಕೊಳ್ಳಲ್ಲ, ಮಣಿಪಾಲ್ಗೆ ಹೋಗಿಬಿಡಿ ಎಂದು ಹೆದರಿಸುತ್ತಾರೆ.
ತಜ್ಞ ವೈದ್ಯರು ಬಂದು ನೋಡುವ ಮೊದಲೇ ಆತಂಕದಲ್ಲಿರುವ ರೋಗಿಗಳ ಸಂಬಂಧಿಗಳು ಕೂಡಲೇ ಮಣಿಪಾಲ್ಗೆ ಹೊರಡುತ್ತಾರೆ. ಮೆಗ್ಗಾನ್ ಆಸ್ಪತ್ರೆಯ ಆ್ಯಂಬುಲೆನ್ಸ್ ಹೊರಡುತ್ತದೆ. ಈ ಮೂಲಕ ವಾಹನ ಸಿಬ್ಬಂದಿಗೆ ಅನಪೇಕ್ಷಿತ ಆದಾಯ ಖಂಡಿತ. ಇನ್ನೊಬ್ಬ ಚಾಲಕ ನೇಮಕವಾದರೆ ಈ ಆದಾಯವನ್ನು ಹಂಚಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಅವರದು.
ಆದಾಯದ ಆಸೆ: ಹೊರಗುತ್ತಿಗೆ ಆಧಾರದ ಮೇಲೆ ಚಾಲಕನ್ನು ನೇಮಿಸಿಕೊಳ್ಳುವ ಅವಕಾಶವಿದ್ದರೂ, ಅದಕ್ಕೆ ಅಡ್ಡಿಯಾಗುತ್ತಿರುವುದು ಅನಪೇಕ್ಷಿತ ಆದಾಯದ ಆಸೆಯೇ ಎಂದು ಮೂಲಗಳು ಹೇಳುತ್ತಿವೆ.
ಅಲ್ಲದೇ, ಕಾರ್ಪೋರಷನ್ ಬ್ಯಾಂಕು ಈ ಜೀವರಕ್ಷಕ ವಾಹನವನ್ನು ವಿವಿಐಪಿಗಳಿಗಾಗಿ ನೀಡಿದೆ ಎಂಬ ಪುಕಾರು ಹಬ್ಬಿಸಲಾಗಿದೆ.
ಆದರೆ ಬ್ಯಾಂಕಿನ ಮೂಲಗಳು ಈ ವಾಹನ ನೀಡುವಾಗ ಅಂತಹ ಷರತ್ತನ್ನೇನೂ ವಿಧಿಸಿಲ್ಲ ಎನ್ನುತ್ತಿವೆ. ಅಲ್ಲದೇ, ಇಂತಹ ಅಮೂಲ್ಯ ದಾನ ಕೊಡುವಾಗ ಬಡವನ ಜೀವಕ್ಕೂ, ವಿವಿಐಪಿ ಜೀವಕ್ಕೂ ವ್ಯತ್ಯಾಸ ತೋರುವುದು ಸರಿಯಲ್ಲ ಎಂಬ ಸಾಮಾನ್ಯ ಜ್ಞಾನವೂ ಇಂತಹ ಪುಕಾರು ಹಬ್ಬಿಸುವವರಿಗೆ ಇಲ್ಲವಾಗಿದೆ.
ಈ ವಾಹನ ಆದಷ್ಟು ಬೇಗ ಜನಸಾಮಾನ್ಯರ ಬಳಕೆಗೆ ಸಿಗದಿದ್ದರೆ ಅಮೂಲ್ಯ ಕೊಡುಗೆಯೊಂದು ನಿಷ್ಪಲವಾಗಲಿದೆ.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

