ಪ್ರತಿಭೆ ನಿಂತ ನೀರಾಗದಿರಲಿ
ಕ.ಪ್ರ.ವಾರ್ತೆ , ಶಿವಮೊಗ್ಗ , ಫೆ. 24
ಪ್ರತಿಭೆಗೆ ಬಡತನದ ನಂಟು ಜಾಸ್ತಿ. ಬಡತನವನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆಯ ದಾರಿಯನ್ನು ಕಂಡುಕೊಳ್ಳಬೇಕು. ಪ್ರತಿಭೆ ಯಾವತ್ತೂ ನಿಂತ ನೀರಾಗಬಾರದು ಎಂದು ಎಂದು ವಿಶ್ರಾಂತ ಕುಲಸಚಿವ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೇಖಕ ಶ್ರೀಕಂಠ ಕೂಡಿಗೆ ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜು ಸೋಮವಾರ ಆೋಜಿಸಿದ್ದ -ಸನಿಹ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ, ಕಲೆ, ವಿಜ್ಞಾನ, ಯಾವುದೇ ಕ್ಷೇತ್ರವಾದರೂ ಅದನ್ನು ಹೆಚ್ಚು ಬಳಸುವುದರಿಂದ, ಬೆಳೆಸುವುದರಿಂದ ಸದೃಢತೆ ಸಾಧಿಸಬಹುದು. ವಿಜ್ಞಾನ ಮತ್ತು ವಿಜ್ಞಾನೇತರ ವಿಷಯಗಳಲ್ಲಿ, ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಪ್ರಬುದ್ಧತೆ ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ. ಶಕುಂತಲ, ಸಂಚಾಲಕ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಕೆ.ಎಸ್. ವಿಠ್ಠಲರಾವ್, ಸಾಂಸ್ಕೃತಿಕ ಪ್ರತಿನಿಧಿ ಸಂಜಯ್ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳಲ್ಲಿ ಮೌಲ್ಯ ಬೆಳೆಸಿ: ಜಿಲ್ಲಾಧಿಕಾರಿ ಬನ್ಸಲ್
ಕ.ಪ್ರ.ವಾರ್ತೆ , ಶಿವಮೊಗ್ಗ , ಫೆ. 24
ಮಕ್ಕಳು ಪಠ್ಯಕ್ಕೆ ಸೀಮಿತವಾಗಿರಲು ಬಿಡದೆ ಅವರಲ್ಲಿ ಮೌಲ್ಯ ಬೆಳೆಸುವಲ್ಲಿ, ಸೇವಾ ಕಾರ್ಯದಲ್ಲಿ ತೊಡಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಹೇಳಿದರು.
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಸೋಮವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ವಿತರಿಸಿ, ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದರು. ಶಾಲಾ ಹಂತದಲ್ಲಿ ಮಾತ್ರವಲ್ಲದೇ ಕಾಲೇಜು ಹಂತದಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆ ಇರುವಂತಾಗಬೇಕು ಎಂದರು.
ಡಿಡಿಪಿಐ ಬಸವರಾಜ್, ಸ್ಕೌಟ್ಸ್ ಜಿಲ್ಲಾ ಆಯುಕ್ತ ಕೆ. ರವಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಎಚ್.ಡಿ. ಉದಯಶಂಕರ ಶಾಸ್ತ್ರಿ, ಜಿಲ್ಲಾ ಸಂಘಟಕ ಎನ್.ಆರ್. ಪ್ರಕಾಶ್, ಶಿಕ್ಷಣ ಇಲಾಖೆ ಉಪ ಸಮನ್ವಯಾಧಿಕಾರಿ ಕೆ. ಗಣಪತಿ ಉಪಸ್ಥಿತರಿದ್ದರು. ಎಸ್. ಉಮೇಶ್ ಶಾಸ್ತ್ರಿ ಸ್ವಾಗತಿಸಿದರು. ಎ.ವಿ. ರಾಜೇಶ್ ನಿರೂಪಿಸಿದರು.
ಬೈಕ್ ಕಳವು: ಮೂವರ ಬಂಧನ
ದಾವಣಗೆರೆ: ದ್ವಿಚಕ್ರ ವಾಹನ ಕಳವು ಮಾಡಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಕೆ.ಟಿ.ಜೆ. ನಗರ ಪೊಲೀಸರು ಜಯನಗರದ ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಶನಿವಾರ ಬೆಳಗ್ಗೆ ಬೈಕ್ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನಿಟುವಳ್ಳಿ ನಿವಾಸಿ ಶಂಭು, ಜುನೈದ್, ಖಾಸಿಂ ಬಂಧಿತರು. ಆರೋಪಿಗಳು ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಕಳ್ಳತನ ಮಾಡಿಕೊಂಡು ಬರುತ್ತಿದ್ದಾಗ ಕೆಟಿಜೆ ನಗರ ಠಾಣೆ ಅಪರಾಧ ವಿಭಾಗದ ಎಸ್ಐ ದೇವರಾಜ ಹಾಗೂ ತಂಡ ಆರೋಪಿಗಳನ್ನು ಬೈಕ್ ಸಹಿತ ಬಂಧಿಸಿದೆ.
ಬಂಧಿತ ಆರೋಪಿಗಳ ವಿರುದ್ಧ ಕೆಟಿಜೆ ನಗರ ಠಾಣೆ, ಬಡಾವಣೆ ಪೊಲೀಸ್ ಠಾಣೆ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 5 ಬೈಕ್ ಕಳವು ಪ್ರಕರಣ ದಾಖಲಾಗಿದ್ದವು. ಆರೋಪಿಗಳಿಂದ ರು. 2 ಲಕ್ಷ ಮೌಲ್ಯದ 3 ಬೈಕ್ಗಳನ್ನು ಜಪ್ತುಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಂಧಿತರ ವಿರುದ್ಧ ಮತ್ತಷ್ಟು ತನಿಖೆ ನಡೆಯುತ್ತಿದೆ. ಕೆಟಿಜೆ ನಗರ ಪೊಲೀಸರು ನಿಖೆ ಕೈಗೊಂಡಿದ್ದಾರೆ.
ಮೊಬೈಲ್ ಸಂಸ್ಕೃತಿಯಿಂದ ಸಂಬಂಧ ಶಿಥಿಲ
ಕ.ಪ್ರ.ವಾರ್ತೆ , ಶಿವಮೊಗ್ಗ , ಫೆ. 24
ಮೊಬೈಲ್, ಇಂಟರ್ನೆಟ್ ಮತ್ತು ಎಸ್ಎಂಎಸ್ ಸಂಸ್ಕೃತಿಯಲ್ಲಿ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಸುಮಧುರ ಭಾವನೆಗಳನ್ನೇ ಮರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಸಾಹಿತಿ ನಾ. ಡಿಸೋಜ ಹೇಳಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಜ್ಞಾನದೀಪ ಶಾಲೆ ಮತ್ತು ಬಾಂಧವ್ಯದ ಬೆಸುಗೆ ಬಳಗ ಏರ್ಪಡಿಸಿದ್ದ ಇದು ಪತ್ರವಲ್ಲ ಪ್ರೀತಿಗೊಂದು ಸೇತುವೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಮಕ್ಕಳಲ್ಲಿ ಪತ್ರ ಬರೆಯುವ, ಸಂಸ್ಕೃತಿಯನ್ನು ಬೆಳೆಸುವ ಮೂಲಕ ಭಾವನೆಗಳನ್ನು ಪುನಶ್ಚೇತನಗೊಳಿಸಲು ಪ್ರಕ್ರಿಯೆ ಆರಂಭಿಸಿರುವುದು ಸಂತಸದ ಸಂಗತಿ. ತಂದೆಯ ಬಗ್ಗೆ ಮಕ್ಕಳ ನಿರ್ಮಲ ಭಾವನೆಗಳು ಪುಸ್ತಕದಲ್ಲಿ ಸುಂದರವಾಗಿ ಅಭಿವ್ಯಕ್ತವಾಗಿದೆ. ಪತ್ರ ಸಂಸ್ಕೃತಿ ಹೃದಯದ ಭಾವನೆಯನ್ನು ಅಭಿವ್ಯಕ್ತಗೊಳಿಸಿ ಮಾನವೀಯ ಸಂಬಂಧ ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ, ಪ್ರಾಚಾರ್ಯ ಶ್ರೀಕಾಂತ್ ಎಂ. ಹೆಗಡೆ, ಪ್ರಕಾಶಕ ಜಿಬಿಟಿ ಮೋಹನ, ತುರುವನೂರು ಎಂ.ವಿ. ಮಲ್ಲಿಕಾರ್ಜುನ ಮೊದಲಾದವರು ಇದ್ದರು.
ಕಳವಿಗೆ ಯತ್ನ
ಶಿವಮೊಗ್ಗ: ಮುಖ್ಯರಸ್ತೆಯಲ್ಲಿರುವ ಆಭರಣ ಮಳಿಗೆ ಹಾಗೂ ಬ್ಯಾಂಕ್ ಕಳವಿಗೆ ಯತ್ನಸಿದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಹಾರ್ನಹಳ್ಳಿ ಮಂಜಪ್ಪ ಅಂಡ್ ಸನ್ಸ್ ಮತ್ತು ಈ ಮಳಿಗೆ ಮೇಲ್ಭಾಗದಲ್ಲಿಯೇ ಇರುವ ಫೆಡರಲ್ ಬ್ಯಾಂಕ್ಗೆ ಪ್ರವೇಶಿಸಲು ಕನ್ನ ಕೊರೆಯಲು ಕಳ್ಳರು ಯತ್ನಿಸಿದ್ದಾರೆ. ಭಾನುವಾರ ರಜಾದಿನವಾಗಿದ್ದರಿಂದ ಕಾಂಪ್ಲೆಕ್ಸ್ನ ಹಿಂಭಾಗದಿಂದ ಸರಳು ಮುರಿದು ಪಕ್ಕದ ಮಳಿಗೆ ಪ್ರವೇಶಿಸಿರುವ ಕಳ್ಳರು ಮುಂಭಾಗದ ಶಟರ್ ಎತ್ತಿ ಬ್ಯಾಂಕ್ ಹಾಗೂ ಮಳಿಗೆ ಗೋಡೆಗೆ ಕನ್ನ ಹಾಕುವ ಯತ್ನ ನಡೆಸಿದ್ದಾರೆ. ನಂತರ ಯಾವುದೋ ಕಾರಣದಿಂದ ಅರ್ಧಕ್ಕೆ ನಿಲ್ಲಿಸಿ ವಾಪಸಾಗಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೃತ್ಯಗಳು ದಾಖಲಾಗಿವೆ. ಕೋಟೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಕಾಲ್ನಡಿಗೆ ಜಾಥಾ
ಭದ್ರಾವತಿ: ಫೆ.26ರಂದು ಶಿವಮೊಗ್ಗದಲ್ಲಿ ನಡೆಯಲಿರುವ ಬೃಹತ್ ಭಾರತ ಗೆಲ್ಲಿಸಿ ಸಮಾವೇಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಾರತೀಯ ಜನತಾ ಪಕ್ಷದ ಮುಖಂಡರು ಪಟ್ಟಣದ ಹುತ್ತಾ ಬಸ್ ನಿಲ್ದಾಣದಿಂದ ರಂಗಪ್ಪ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು. ಈ ಮೂಲಕ ಸಮಾವೇಶಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಿದರು. ಭಾಜಪ ಭದ್ರಾವತಿ ಕ್ಷೇತ್ರ ಘಟಕದ ಅಧ್ಯಕ್ಷ ಎಂ. ಮಂಜುನಾಥ್, ಪಕ್ಷದ ಮುಖಂಡರಾದ ಬಿ.ಕೆ. ಶ್ರೀನಾಥ್, ಆರ್.ಎಸ್. ಶೋಭ, ಬಾ.ನಂ. ರಮೇಶ್, ವಿ. ಕದಿರೇಶ್, ಕೆ.ಎನ್. ಭೈರಪ್ಪಗೌಡ, ಎಂ.ಎಸ್. ಸುರೇಶಪ್ಪ, ಜಿ. ಆನಂದಕುಮಾರ್, ವಿಶ್ವನಾಥ ರಾವ್, ರೇವಣ್ಣ, ಸಿದ್ದಪ್ಪ ಮೊದಲಾದವರು ಜಾಥಾದ ನೇತೃತ್ವ ವಹಿಸಿದ್ದರು.
ಡಾಂಬರೀಕರಣಕ್ಕೆ ಮನವಿ
ಶಿವಮೊಗ್ಗ: ನಗರದ ಲಗನ ಮಂದಿರದ ರಸ್ತೆ ತುಂಬಾ ಹಾಳಾಗಿ ಸಾರ್ವಜನಿಕರು ಓಡಾಡಲು ಕಷ್ಟವಾಗಿದ್ದು, ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಸ್ನೇಹ ಸಹ್ಯಾದ್ರಿ ಟ್ರಸ್ಟ್ ಒತ್ತಾಯಿಸಿದೆ. ಮಳೆಯಿಂದ ರಸ್ತೆ ಹಾಳಾಗಿದ್ದು, ನಗರಸಭೆ ಕಳಪೆ ಕಾಮಗಾರಿ ನಡೆಸಿ ಅಲ್ಲಲ್ಲಿ ಜಲ್ಲೆ ಹಾಕಿಸಿ ದುರಸ್ತಿ ಕಾರ್ಯ ಮಾಡಿದ್ದಾರೆ. ಈಗ ಕಲ್ಲುಗಳು ಕಿತ್ತು ಹೋಗಿ ಮಕ್ಕಳು, ಸಾರ್ವಜನಿಕರು ಓಡಾಡದ ಸ್ಥಿತಿ ತಲುಪಿದೆ. ಸಂಬಂಧಪಟ್ಟವರು ಒಂದುವಾರದೊಳಗೆ ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಲ್ಲಿನ ನಿವಾಸಿಗಳೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತೊಗರ್ಸಿ ಜಾತ್ರೆ
ಶಿವಮೊಗ್ಗ: ಶಿಕಾರಿಪುರ ತಾಲೂಕು ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೊಡ್ಡ ರಥೋತ್ಸವ ಮಾರ್ಚ್ 12ರಂದು ನಡೆಯಲಿದೆ. ಶ್ರೀಶೈಲ ಜಗದ್ಗುರುಗಳ ಸಾನಿಧ್ಯದಲ್ಲಿ ಮಾ.11ರಂದು ಧರ್ಮಸಭೆ, ಬೆಳಿಗ್ಗೆ 6 ರಿಂದ ಶಿವದೀಕ್ಷೆ ನೆರವೇರಲಿದೆ. ಮಾ.13ರಂದು ಬೆಳಿಗ್ಗೆ 10ಕ್ಕೆ ಸಾಮೂಹಿಕ ವಿವಾಹ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 08187-235322 ಸಂಪರ್ಕಿಸಬಹುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮಹಾಂತ ದೇಶಿಕೇಂದ್ರ ಸ್ವಾಮಿ ತಿಳಿಸಿದ್ದಾರೆ.
ಕಾಮಗಾರಿಗೆ ಚಾಲನೆ
ದಾವಣಗೆರೆ: ಹರಿಹರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ- 4ರ ಕ್ರಾಸ್ನಿಂದ ರಾಜನಹಳ್ಳಿ ಮುಖಾಂತರ ಕೋಣನತಲೆವರೆಗಿನ 4 ಕಿಮೀ ರಸ್ತೆಯ ಅಭಿವೃದ್ಧಿಗಾಗಿ 2.50 ಕೋಟಿ ಅನುದಾನದಲ್ಲಿ ಕೇಂದ್ರ ರಸ್ತೆ ನಿಧಿಯಡಿ ಮಂಜೂರಾಗಿದ್ದು, ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಭೂಮಿಪೂಜೆ ನೆರವೇರಿಸಿದರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಶಾಸಕ ಎಚ್.ಎಸ್. ಶಿವಶಂಕರ, ಮಾಜಿ ಶಾಸಕ ಬಿ.ಪಿ. ಹರೀಶ ಇತರರು ಇದ್ದರು.
ಸಂಘಕ್ಕೆ ಆಯ್ಕೆ
ಹರಿಹರ: ನಗರದ ಜಿಎಂಎಂ ಪ್ರೌಢ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆಯಲ್ಲಿ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕೆ.ಎಂ. ಪಾಲಾಕ್ಷಪ್ಪ(ಗೌರವಾಧ್ಯಕ್ಷ), ಎಸ್.ಎಂ. ಮಡಿವಾಳರ(ಅಧ್ಯಕ್ಷ), ಮಂಜಣ್ಣ(ಉಪಾಧ್ಯಕ್ಷ), ಬಿ. ಅಜ್ಜಣ್ಣ(ಕಾರ್ಯದರ್ಶಿ), ಕೆ.ಎಸ್. ಕಲ್ಪನಾ (ಸಹ ಕಾರ್ಯದರ್ಶಿ), ಕೆ.ಟಿ. ಮಂಜಣ್ಣ(ಸಂಘಟನಾ ಕಾಯದರ್ಶಿ) ಮತ್ತು ಬಿ.ಕೆ. ನಾಗರಾಜ್(ಖಜಾಂಚಿ) ಆಯ್ಕೆಯಾಗಿದ್ದಾರೆ. ಸಂಘದ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶಮೂರ್ತಿ, ಉಪಾಧ್ಯಕ್ಷ ಡಾ.ಕೆ. ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಗಣೇಶ ಭಟ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

