ಕಂದಾಯ ಗ್ರಾಮವಾಗಲಿರುವ ಕಾಗೋಡು ಪ್ರದೇಶ
ಕ.ಪ್ರ.ವಾರ್ತೆ , ಶಿವಮೊಗ್ಗ , ಫೆ. 25
ಕಾಗೋಡು ಎಂದಾಕ್ಷಣ ನೆನಪಿಗೆ ಬರುವುದು ಐತಿಹಾಸಿಕ ಕಾಗೋಡು ಹೋರಾಟ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ. ಆದರೆ, ಇತ್ತೀಚಿನವರೆಗೂ ಕಾಗೋಡು ಎಂಬ ಹಳ್ಳಿಯ ಅಸ್ತಿತ್ವವೇ ಇರಲಿಲ್ಲ. ಪಕ್ಕದಲ್ಲಿಯೇ ಇದ್ದ ಹಿರೇನಲ್ಲೂರು ಗ್ರಾಮದೊಂದಿಗೆ ಮಿಳಿತಗೊಂಡಿತ್ತು. ಈಗ ಸರ್ಕಾರವು ಕಾಗೋಡು ಪ್ರದೇಶವನ್ನು ಕಂದಾಯ ಗ್ರಾಮವಾಗಿ ಘೋಷಿಸಲು ಮುಂದಾಗಿದೆ.
ಈ ಸಂಬಂಧ ಕಂದಾಯ ಸಚಿವಾಲಯದ ಅಧೀನ ಕಾರ್ಯದರ್ಶಿ ಶಂಬುಲಿಂಗಯ್ಯ ಅವರು 2013ರ ಡಿಸೆಂಬರ್ 31ರಂದು ಅಧಿಸೂಚನೆ ಹೊರಡಿಸಿ, ಆಕ್ಷೇಪಗಳಿಗೆ 1 ತಿಂಗಳ ಅವಕಾಶ ನೀಡಿ ಆಹ್ವಾನಿಸಿದ್ದರು. ಈಗ ಈ ಅವಧಿಯೂ ಮುಗಿದಿರುವುದರಿಂದ ಕಾಗೋಡು ಪ್ರದೇಶವು ಕಂದಾಯ ಗ್ರಾಮವಾಗಿ ಹೊರಹೊಮ್ಮುವುದು ಖಚಿತವಾಗಿದೆ.
ಸಾಗರದ ನೂತನ ತಹಸೀಲ್ದಾರ್ ಭಾಗ್ಯಲಕ್ಷ್ಮಿ ಎಚ್. ಅವರು 'ಕನ್ನಡಪ್ರಭ'ಕ್ಕೆ ಈ ವಿಷಯ ತಿಳಿಸಿದರು. ಉಳುವವನೇ ಹೊಲದೊಡೆಯ ಎಂಬ ಘೋಷಣೆ ಮೊಳಗಿಸಿ ಭೂಸುಧಾರಣಾ ಕಾಯ್ದೆ ಜಾರಿಗೆ ಬರಲು ಕಾರಣವಾದ ಕಾಗೋಡು ಹೋರಾಟಕ್ಕೆ ನೆಲೆ ನೀಡಿದ್ದ ಭೂಮಿ ಈಗ ಸ್ವತಂತ್ರ್ಯ ಹಳ್ಳಿಯಾಗಲಿದೆ.
ಹೀಗಿದೆ ಸ್ವರೂಪ: ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 5ರ ಪ್ರಕಾರ ಸರ್ಕಾರವು ಯಾವುದೇ ಕಂದಾಯ ಗ್ರಾಮವನ್ನು ವಿಭಜಿಸಿ ಹೊಸ ಕಂದಾಯ ಗ್ರಾಮ ಘೋಷಿಸಬಹುದು. ಆದರೆ, ಕರ್ನಾಟಕ ಭೂಕಂದಾಯ ನಿಯಮ 1966ರ ನಿಯಮ 3ರಲ್ಲಿ ಸೂಚಿಸಿರುವಂತೆ ಜನಸಂಖ್ಯೆ, ಆಡಳಿತಾತ್ಮಕ ಅನುಕೂಲ ಇತ್ಯಾದಿ ಮಾನದಂಡ ಆಧರಿಸಿ ಹೊಸ ಗ್ರಾಮವನ್ನು ಘೋಷಿಸಬಹುದು. ಕಾಗೋಡು ವಿಷಯಕ್ಕೆ ಸಂಬಂಧಿಸಿದಂತೆ ಜನಸಂಖ್ಯೆಯನ್ನೇ ಮುಖ್ಯ ಮಾನದಂಡವನ್ನಾಗಿ ಪರಿಗಣಿಸಲಾಗಿದೆ.
ಇದರಂತೆ ತಾಲೂಕು ಆಡಳಿತವು ಆಕಾರಬಂದ್ ದಾಖಲೆ ಪ್ರಕಾರ ಹಿರೇನಲ್ಲೂರು ಗ್ರಾಮಕ್ಕೆ ಸೇರಿದ್ದ 95 ಸರ್ವೆ ನಂ.ಗಳಲ್ಲಿದ್ದ ಪ್ರದೇಶವನ್ನು ಪ್ರತ್ಯೇಕಿಸಿ ಇದನ್ನು ಕಾಗೋಡು ಕಂದಾಯ ಗ್ರಾಮವಾಗಿ ರೂಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಕ್ಷೇತ್ರದ ಶಾಸಕ, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಒತ್ತಾಸೆಯೂ ಇತ್ತು. ಸದ್ಯ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು ನೂತನ ಕಂದಾಯ ಗ್ರಾಮವೆಂದು ಘೋಷಿಸುವುದಷ್ಟೇ ಬಾಕಿ.
ಐತಿಹಾಸಿಕ ಮಹತ್ವ: ಕಾಗೋಡು ಗ್ರಾಮವು ರೈತ ಹೋರಾಟದ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದ ಗ್ರಾಮವಾಗಿದೆ. 1951ರ ಏ.16ರಂದು ಕಾಗೋಡು ಸಮೀಪದ ತಡಗಳಲೆ ಗ್ರಾಮದಲ್ಲಿ ಭೂಮಾಲೀಕರು ತಮ್ಮ ಭೂಮಿ ಉಳಲು ಬಂದ ಗೇಣಿದಾರರನ್ನು ತಡೆದು, ಅವರ ನೊಗ- ನೇಗಿಲುಗಳನ್ನು ತುಂಡರಿಸಿದ್ದರು. ಇದನ್ನು ಖಂಡಿಸಿ ರೈತ ಗೇಣಿದಾರರು ಇದೇ ತುಂಡಾದ ಕೃಷಿ ಉಪಕರಣಗಳನ್ನು ಹೊತ್ತು ಸಾಗರದ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು ಹೋರಾಟಕ್ಕೆ ನಾಂದಿ ಹಾಡಿತ್ತು.
ಈ ಹೋರಾಟವು ರಾಮಮನೋಹರ ಲೋಹಿಯಾ ಅವರನ್ನೂ ಆಕರ್ಷಿಸಿತ್ತು. ಇದರಲ್ಲಿ ಪಾಲ್ಗೊಳ್ಳಲು 1951ರ ಜೂ.13 ರಂದು ಸಾಗರಕ್ಕೆ ಬಂದ ಲೋಹಿಯಾ ಸತ್ಯಾಗ್ರಹಿಗಳಿದ್ದ ಜೈಲಿಗೆ ಭೇಟಿ ಕೊಟ್ಟರು. ಅಂದೇ ಸಾಗರದ ಗಾಂಧಿ ಮೈದಾನದಲ್ಲಿ ಭಾಷಣ ಮಾಡಿದರು. ಮರುದಿನ ಕಾಗೋಡಿ ಗ್ರಾಮಕ್ಕೆ ಹೋಗಿ ಸರ್ಕಾರದ ಆದೇಶ ಉಲ್ಲಂಘಿಸಿ ಭೂಮಿ ಪ್ರವೇಶಿಸಿದರು.
ಅಲ್ಲಿಂದ ವಾಪಸು ಬಂದ ಲೋಹಿಯಾ ಅವರನ್ನು ಪೊಲೀಸರು ಮಧ್ಯರಾತ್ರಿ ಸಾಗರ ರೈಲು ನಿಲ್ದಾಣದಲ್ಲಿ ಬಂಧಿಸಿದರು. ಅವರ ಜತೆಯಲ್ಲಿ ಖಾದ್ರಿ ಶಾಮಣ್ಣ, ಮುಲ್ಕಾ ಗೋವಿಂದರೆಡ್ಡಿ, ಈಶ್ವರಪ್ಪ, ಜಿಆರ್ಜಿ ನಗರ್ ಅವರೂ ಬಂಧನಕ್ಕೆ ಒಳಗಾದರು. ಚಳವಳಿ ಹತ್ತಿಕ್ಕುವ ಪ್ರಯತ್ನದಲ್ಲಿ ಅಂದು ರಾತ್ರಿ ಪೊಲೀಸರು ಕಾಗೋಡಿನಲ್ಲಿ ರೈತರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದರು.
ಹೋರಾಟವನ್ನು ಬೆಂಬಲಿಸಿ ಜಯಪ್ರಕಾಶ ನಾರಾಯಣ ಅವರೂ ಸಹ ಸಾಗರಕ್ಕೆ ಬಂದು ಪಾಲ್ಗೊಂಡಿದ್ದರು. ಈ ಐತಿಹಾಸಿಕ ಹೋರಾಟವು ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ಬರಲು ಕಾರಣವಾಗಿತ್ತು.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

