ಮಕ್ಕಳಿಗೆ ದೇಶಾಭಿಮಾನದ ಪಾಠ ಹೇಳಿ
ಶಿವಮೊಗ್ಗ: ಮಕ್ಕಳು ಬಾಲ್ಯದಲ್ಲಿ ಇದ್ದಾಗಲೇ ನಾವು ಅವರಲ್ಲಿ ಯಾವ ಸಂಸ್ಕೃತಿ ಬೆಳೆಸುತ್ತೇವೆಯೋ ಅದು ಬೆಳೆಯುತ್ತದೆ. ಹಾಗಾಗಿ, ಮಕ್ಕಳು ಸುಸಂಸ್ಕೃತರಾಗಲು, ಪೋಷಕರಲ್ಲಿ ಗೌರವ ಭಾವನೆ ಮೂಡಿಸಲು ಮಕ್ಕಳಿಗೆ ಶ್ರೇಷ್ಠ ಸಂಸ್ಕೃತಿ ಪರಿಚಯ ಮಾಡುವುದು ಇಂದಿನ ತುರ್ತು ಅಗತ್ಯ. ಇದನ್ನು ಎಲ್ಲ ಶಾಲೆಗಳು ಅನುಸರಿಸುವ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಕಂಠ ಕೂಡಿಗೆ ಹೇಳಿದರು.
ನಗರದ ಶ್ರೀರಾಮಕೃಷ್ಣ ವಿದ್ಯಾನಿಕೇತನ ವಸತಿ ಶಾಲೆಯ ಶಾಲಾ ಹಬ್ಬದ 2ನೇ ದಿನದ ಮಕ್ಕಳ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾರೂ ಪ್ರತಿಭಾಹೀನರಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದಕ್ಕೆ ಸೂಕ್ತ ಪ್ರೋತ್ಸಾಹ ಸಿಕ್ಕಾಗ ಉನ್ನತ ಸಾಧನೆ ಮಾಡಲು ಸಾಧ್ಯ. ಇಂದಿನ ಶಿಕ್ಷಣದಲ್ಲಿ ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಕೇವಲ ಪಠ್ಯಗಳಿಂದ ಮಾತ್ರ ಮಕ್ಕಳ ವ್ಯಕ್ತಿತ್ವ ವಿಕಸನ ಅಸಾಧ್ಯ ಪಠ್ಯದ ಜೊತೆಗೆ ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳಾದ ನೃತ್ಯ, ಭಾಷಣ, ನಾಟಕ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯವಿದೆ ಎಂದು ಸಲಹೆ ನೀಡಿದರು.
ನೈತಿಕವಾಗಿ ದೇಶ ಬಲಿಷ್ಠವಾಗಲು ಮಕ್ಕಳು ಉತ್ತರಾಧಿಕಾರಿಗಳು. ಹಾಗಾಗಿ, ಮಕ್ಕಳಲ್ಲಿ ದೇಶದ ಕುರಿತು ಅಭಿಮಾನ ಮೂಡುವಂತ ಪಾಠಗಳನ್ನು ಶಾಲೆಗಳು ಹೇಳಿಕೊಡಬೇಕು. ಇದರ ಜೊತೆಗೆ ಪೋಷಕರು ಮನೆಯಲ್ಲಿ ದೇಶಾಭಿಮಾನ ಉಕ್ಕಿಸುವಂತ ಶ್ರೇಷ್ಠ ವ್ಯಕ್ತಿಗಳ ಕಥೆಗಳನ್ನು ಹೇಳಿಕೊಡಬೇಕು ಎಂದು ಪೋಷಕರಿಗೆ ಮತ್ತು ಶಾಲೆಗಳಿಗೆ ಸಲಹೆ ನೀಡಿದರು.
ಉನ್ನತ ಸಾಧನೆಗೆ ಅಧ್ಯಯನ ಒಂದೇ ಉತ್ತರ. ಸತತ ಪರಿಶ್ರಮ ಮತ್ತು ಅಧ್ಯಯನದಿಂದ ಮಾತ್ರ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ. ಮಕ್ಕಳಲ್ಲಿ ಪ್ರೌಢಶಾಲೆ ಹಂತದಿಂದಲೇ ಉನ್ನತ ಅವಕಾಶಗಳ ಕನಸು ಬಿತ್ತುವ ಅಗತ್ಯವಿದೆ ಎಂದು ಹೇಳಿದರು.
ಶಿವಮೊಗ್ಗ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀವಿನಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ರೇಖಾ ಚಂದ್ರಶೇಖರ್, ಡಾ. ಶ್ರುತಿ ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಡಿ.ಎಂ. ವೆಂಕಟರಮಣ ಸ್ವಾಗತಿಸಿದರು. ಶೋಭಾ ವೆಂಕಟರಮಣ ವಾರ್ಷಿಕ ವರದಿ ವಾಚಿಸಿದರು. ದರ್ಶನಕುಮಾರ್ ಹೆಗಡೆ ಮತ್ತು ಪ್ರಕೃತಿ ನಿರೂಪಿಸಿದರು. ಶಿಕ್ಷಕಿ ಲತಾ ವಂದಿಸಿದರು.
1400 ಮಕ್ಕಳಿಗೆ ಪ್ರಶಸ್ತಿ ವಿತರಣೆ
2013-14ನೇ ಶೈಕ್ಷಣಿಕ ವರ್ಷದ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಶಾಲೆಯ 1400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗುರುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮವನ್ನು ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಮಹೇಶ್ ಉದ್ಘಾಟಿಸಿದರು. ನಗರಸಭೆ ಸದಸ್ಯೆ ಸುನೀತಾ ಯೋಗೀಶ್, ಭಾರತಿ ಸಂಸ್ಕೃತಿ ಪ್ರತಿಷ್ಠಾನದ ಎಸ್.ವಿ. ನರಸಿಂಹಮೂರ್ತಿ ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನ ಸೇವಾ ಸಮಿತಿಗೆ ಆಯ್ಕೆ
ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ನ.ರಾ. ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಾಮಲಿಂಗಪ್ಪ, ಕಾರ್ಯದರ್ಶಿಯಾಗಿ ದತ್ತಾತ್ರಿ, ಖಜಾಂಚಿ ಎ.ವಿ. ಕೃಷ್ಣರಾಜ್, ಸಹ ಕಾರ್ಯದರ್ಶಿ ಸುಜಯಾ ಪ್ರಸಾದ್ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಎ.ಪಿ. ಅನಂತಪದ್ಮನಾಭ ಉಡುಪ, ಎಂ.ಹಾಲಪ್ಪ, ಎಂ.ಎ. ಕೃಷ್ಣಪ್ಪ, ಸಣ್ಣಮಲ್ಲಪ್ಪ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

