ಶಿವಮೊಗ್ಗ

ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲಿ

Published On :

ಶಿವಮೊಗ್ಗ ನಗರದಲ್ಲಿ ದಿನದಿಂದ ದಿನಕ್ಕೆ ಪಾರ್ಕಿಂಗ್ ವ್ಯವಸ್ಥೆ ಹದಗೆಡುತ್ತಿದೆ. ಪಾರ್ಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ವಿಚಾರದಲ್ಲಿ ಸಂಚಾರಿ ಪೊಲೀಸರು ಏನು ಮಾಡುತ್ತಿಲ್ಲ ಎನಿಸುತ್ತಿದೆ. ಟೈಗರ್ ವಾಹನ ತಂದು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾದ ವಾಹನಗಳನ್ನು ಎತ್ತಿಕೊಂಡು ಹೋಗಿ ದಂಡ ಹಾಕುವುದಷ್ಟೇ ನಮ್ಮ ಕೆಲಸ ಎಂದು ಭಾವಿಸಿದಂತಿದೆ.
    ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವ ಸಾರ್ವಜನಿಕರಿಗೆ ತಿಳಿಹೇಳುವ ಕೆಲಸವೂ ಆಗಬೇಕು. ಪ್ರಮುಖವಾಗಿ ಬಿ.ಎಚ್. ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ, ಗಾಂಧಿಬಜಾರ್, ಆರ್‌ಟಿಓ ಕಚೇರಿ ಸುತ್ತಮುತ್ತ ಸೇರಿದಂತೆ ಪ್ರಮುಖ ಕಡೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಶಿಸ್ತು ಮೂಡಿಸುವ ಕಾರ್ಯವನ್ನು ಪೊಲೀಸರು ಮಾಡಬೇಕಾಗಿದೆ.
               - ಸಂಗಮೇಶ, ಶಿವಮೊಗ್ಗ

ಫುಟ್‌ಪಾತ್ ಅವ್ಯವಸ್ಥೆ
ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿ ಎರಡೂ ಬದಿಯ ಫುಟ್‌ಪಾತ್‌ಗಳನ್ನು ಸಾರ್ವಜನಿಕರ ತೆರಿಗೆ ಹಣದಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ. ಆದರೆ, ಪದೇ ಪದೇ ಅಲ್ಲಲ್ಲಿ ಫುಟ್‌ಪಾತ್ ಕಿತ್ತು ಹಾಕುವ ಕೆಲಸ ಕಂಡುಬರುತ್ತಿದೆ. ಮೊಬೈಲ್ ಕಂಪನಿಗಳಿಗೆ ಕೇಬಲ್ ಅಳವಡಿಕೆಗೋ ಅಥವಾ ಫ್ಲೆಕ್ಸ್ ಅಳವಡಿಸುವ ಉದ್ದೇಶದಿಂದಲೋ ಫುಟ್‌ಪಾತ್ ಟೈಲ್ಸ್ ಕಿತ್ತು ಹಾಕುತ್ತಿದ್ದಾರೆ. ಕೆಲಸ ಮುಗಿದ ಮೇಲೆ ಅದನ್ನು ಮೊದಲಿನ ರೀತಿ ಸರಿಪಡಿಸುವ ಕಾರ್ಯ ಮಾಡುತ್ತಿಲ್ಲ. ಇದರಿಂದ ಫುಟ್‌ಪಾತ್ ಅಂದಗೆಟ್ಟಿದೆ. ಗಂಭೀರ ಸ್ವರೂಪದ ಘಾಸಿಯಾಗಿದ್ದು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ನಗರಸಭೆ ಇದು ತನ್ನ ವಿಚಾರವೇ ಅಲ್ಲವೆಂಬಂತೆ ವರ್ತಿಸುತ್ತಿದೆ. ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ.
                                                                - ಪ್ರಕಾಶ್, ರಾಗಿಗುಡ್ಡ


ತುಂಗಾ ನದಿ ಸ್ವಚ್ಛ ಮಾಡಿ
ಶಿವಮೊಗ್ಗ ನಗರದೊಳಗೆ ಹಾದುಹೋಗುವ ತುಂಗಾ ನದಿಯು ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದೆ. ಇದೇ ನದಿ ನೀರನ್ನು ಮುಂದಿನ ಊರುಗಳ ಜನತೆ ಕುಡಿಯಲು ಬಳಸುತ್ತಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ಕಸ, ನಗರದ ಗಲೀಜನ್ನು ಹೊಳೆಗೆ ಹಾಕಲಾಗುತ್ತಿದ್ದು, ಗಬ್ಬು ನಾರುತ್ತಿದೆ. ತುಂಗಾ ನದಿಯ ಸ್ವಚ್ಛತೆ ನಮ್ಮ ಕಾಳಜಿಯಲ್ಲ ಎಂಬಂತೆ ಅನೇಕ ಸಾರ್ವಜನಿಕರೂ ವರ್ತಿಸುವುದು ಬೇಸರ ತರಿಸುವುದು ವಿಷಾದದ ಸಂಗತಿ. ಮಾಂಸ- ಕಸಾಯಿಖಾನೆಗಳ ಕಸವನ್ನೂ ಇಲ್ಲಿಗೆ ತಂದು ಹಾಕುತ್ತಿದ್ದು, ಇದು ರೋಗ- ರುಜಿನಗಳ ಹರಡಲು ಕಾರಣವಾದೀತು. ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವುದು ಒಳಿತು.
                                    - ರವಿ,   
                             ವಿನೋಬನಗರ

ಹಾರನ್‌ನಿಂದ ಕಿರಿಕಿರಿ
ಶಿವಮೊಗ್ಗ- ಚಿತ್ರದುರ್ಗ ಹಾಗೂ ಶಿವಮೊಗ್ಗ- ಸಾಗರ ನಡುವೆ ಸಂಚರಿಸುವ ಸಾಕಷ್ಟು ಖಾಸಗಿ ಬಸ್‌ಗಳಲ್ಲಿ ಅಳವಡಿಸಿರುವ ಹಾರನ್‌ಗಳು ಸಾರ್ವಜನಿಕರನ್ನು ಕಿರಿಕಿರಿ ಉಂಟುಮಾಡುತ್ತಿವೆ. ವಿಚಿತ್ರ ಬಗೆಯ ಹಾರನ್‌ಗಳನ್ನು ಚಾಲಕರು ಬಳಸಿದಾಗ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಾರೆ. ಹಾಗೆಯೇ ನಗರ ಪ್ರದೇಶದೊಳಗೆ ಅನಗತ್ಯವಾಗಿ ಅತಿಯಾಗಿ ಹಾರನ್ ಬಳಸುತ್ತಿದ್ದು, ಪೊಲೀಸರು, ಆರ್‌ಟಿಓ ಅಧಿಕಾರಿಗಳು ಗಮನಿಸಬೇಕು.
                      - ಹರೀಶ್,
                   ಬಾಪೂಜಿ ನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.