ಶಿವಮೊಗ್ಗ

ಬಿಎಸ್‌ವೈ-ಈಶ್ವರಪ್ಪ ವಿರುದ್ಧ ದೂರು

Published On :

ಶಿವಮೊಗ್ಗ: ಹುಣಸೇಕಟ್ಟೆ ಜಂಕ್ಷನ್ ಪ್ರದೇಶದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸೋಮವಾರ ನಗರದ ವಿಶೇಷ ಲೋಕಾಯುಕ್ತಕ್ಕೆ ಖಾಸಗಿ ದೂರು ದಾಖಲಿಸಲಾಗಿದೆ.
ವಕೀಲ ಬಿ.ವಿನೋದ್ ಈ ದೂರು ದಾಖಲಿಸಿದರು. ಈ ಹಿಂದೆ ವಿನೋದ್ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ಇದೇ ದೂರು ದಾಖಲಿಸಿದ್ದರು. ಭದ್ರಾವತಿಯ ಕಿನ ಹುಣಸೇಕಟ್ಟೆ ಬಳಿ 69 ಎಕರೆ ಭೂಮಿ ಅಕ್ರಮವಾಗಿ ಖರೀದಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ದೂರು ರದ್ದು: ಈ ಪ್ರಕರಣ ರದ್ದತಿಗೆ ಕೋರಿ ಬಿ.ಎಸ್.ವೈ. ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಬೆಂಗಳೂರು ಲೋಕಾ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರು ರದ್ದುಗೊಳಿಸಿ, ವಿನೋದ್‌ಗೆ ಶಿವಮೊಗ್ಗ ಲೋಕಾ ನ್ಯಾಯಾಲಯದಲ್ಲಿ ಖಾಸಗಿ ದೂರಿಗೆ ಅವಕಾಶ ಕಲ್ಪಿಸಿತ್ತು. ಜಮೀನು ಬಿಎಸ್‌ವೈ ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ಖರೀದಿಸಲಾಗಿದೆ. 2010-11ರ ವ್ಯಾಪ್ತಿಯಲ್ಲಿ ಇಲ್ಲಿನ 250 ಎಕರೆ ಅರಣ್ಯ ಭೂಮಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತಎ. ಈಗ ಹೈಕೋರ್ಟ್ ಸೂಚನೆಯಂತೆ ವಿನೋದ್ ಸೋಮವಾರ ವಿಶೇಷ ಲೋಕಾಯುಕ್ತ ನ್ಯಾಯಾಲಯಕೌ ಹಾಜರಾಗಿ ದೂರು ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ಫೆ.4ಕ್ಕೆ ಮಂದೂಡಲಾಗಿದೆ.

ಲೋಕಾಯುಕ್ತ ಕೋರ್ಟ್‌ಗೆ ದೂರು
ಶಿವಮೊಗ್ಗ: ಅಕ್ರಮ ಆಸ್ತಿ ಗಳಿಕೆ ಎಂಬ ಆರೋಪದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ನಗರದ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಸೋಮವಾರ ಮರುದೂರು ದಾಖಲಾಗಿದೆ.
ಈ ಹಿಂದೆ ವಕೀಲ ಬಿ. ವಿನೋದ್ ಅವರು ಇದೇ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆದರೆ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರಿಂದ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣದಿಂದ ಹೈಕೋರ್ಟ್ ವಜಾ ಮಾಡಿತ್ತು. ಅಭಿಯೋಜನೆ ಮಂಜೂರಾತಿ ಪಡೆದು ದಾಖಲಿಸಲು ಸೂಚಿಸಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರು.
ಡಿಸೆಂಬರ್ ಕೊನೆಯ ವಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ವಕೀಲ ಬಿ. ವಿನೋದ್ ಅವರಿಗೆ ಪತ್ರ ಬರೆದು, ಕೆ.ಎಸ್. ಈಶ್ವರಪ್ಪ ಅವರು ಈಗ ಸಾರ್ವಜನಿಕ ಸೇವಕರಲ್ಲದ ಕಾರಣ ಇವರ ವಿರುದ್ಧ ಕ್ರಮ ಕೈಗೊಳ್ಳಲು ಅಭಿಯೋಜನೆ ಮಂಜೂರಾತಿ ನೀಡುವ ಅಗತ್ಯವಿರುವುದಿಲ್ಲ. ಅರ್ಜಿದಾರರು ಕಾನೂನಿನನ್ವಯ ಮುಂದಿನ ಕ್ರಮ ಕೈಗೊಳ್ಳಬಹುದು ಎಂದಿದ್ದರು.
ಇದರನ್ವಯ ಬಿ. ವಿನೋದ್ ಅವರು ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಮರುದೂರು ದಾಖಲಿಸಿದ್ದಾರೆ. ನ್ಯಾಯಮೂರ್ತಿ ಶರಶ್ಚಂದ್ರ ಅಂಗಡಿ ಅವರು ಅರ್ಜಿಯನ್ನು ಸ್ವೀಕರಿಸಿ ಎರಡೂ ಪಕ್ಷಗಾರರಿಗೆ ವಾದ ಮಂಡಿಸುವಂತೆ ಸೂಚಿಸಿ ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.