10ರಿಂದ ನಾಣ್ಯ-ನೋಟು, ಅಂಚೆ ಚೀಟಿ ಪ್ರದರ್ಶನ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.7
ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ರಾಜ ಮಹಾರಾಜರ ಕಾಲದ ಅಪರೂಪದ ನಾಣ್ಯ- ನೋಟುಗಳು ಹಾಗೂ ಅಂಚೆ ಚೀಟಿಗಳ ಪ್ರದರ್ಶನ ಮತ್ತು ಸಮ್ಮೇಳನವನ್ನು ಜ.10ರಿಂದ 12ರ ವರೆಗೆ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ.
ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಕರ ಸಂಘವು ಆಯೋಜಿಸಿರುವ ಈ ಪ್ರದರ್ಶನದಲ್ಲಿ ದೆಹಲಿ, ಕೊಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ವಿವಿಧೆಡೆಯಿಂದ ಆಗಮಿಸಿದ 50ಕ್ಕೂ ಹೆಚ್ಚು ಅಪರೂಪದ ನಾಣ್ಯ- ನೋಟುಗಳ ಸಂಗ್ರಾಹಕರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ದೇವದಾಸ್ ಎನ್. ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಕಾಂತ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು.
ಪ್ರಥಮ ನಾಣ್ಯ: ಮುಖ್ಯವಾಗಿ ಭಾರತದ ಪ್ರಥಮ ನಾಣ್ಯಗಳಾದ ಮೌರ್ಯರ ಪಂಚ್ ಮಾರ್ಕ್ ಕಾಯಿನ್ಸ್, ಕುಶಾನರು, ಗುಪ್ತರು, ಮುಘಲರು, ದೆಹಲಿ ಸುಲ್ತಾರು ಹಾಗೂ ಕರ್ನಾಟಕದ ವಿಜಯನಗರ, ಕದಂಬ, ಮೈಸೂರು, ಹೊಯ್ಸಳರು, ಚಾಲುಕ್ಯರು, ರಾಷ್ಟ್ರಕೂಟರು, ಅಳುಪರು, ದೇವಗಿರಿ ಯಾದವರು, ಶಾತವಾಹನರು ಮುಂತಾದವರ ಅಪರೂಪದ ನಾಣ್ಯಗಳು ಪ್ರದರ್ಶನದಲ್ಲಿರುತ್ತವೆ. ಹಾಗೆಯೇ ಬಂಗಾರ ಲೇಪಿತ ಅಂಚೆಚೀಟಿಗಳು ಮತ್ತು ದೇಶವಿದೇಶಗಳ ಬೆಳ್ಳಿಯ ಮತ್ತು ನಿಕ್ಕಲ್ ನಾಣ್ಯಗಳು, ನೋಟುಗಳು ಇರುತ್ತವೆ.
ಪ್ರಶಸ್ತಿ ಪ್ರದಾನ: ಈ ಸಂದರ್ಭದಲ್ಲಿ ಭಾರತದ ಪ್ರಸಿದ್ಧ ನಾಣ್ಯ ಸಂಗ್ರಾಹಕರಾದ ಮುಂಬೈನ ಕಿಶೋರ್ ಜುಂಜುವಾಲ, ಮೂಡಬಿದರೆಯ ನಿತ್ಯಾನಂದ ಪೈ ಹಾಗೂ ಸಾಗರದ ಶ್ರೀನಿವಾಸರಾವ್ ಅವರಿಗೆ ಕ್ರಮವಾಗಿ ಚಂದ್ರಗುಪ್ತ ಮೌರ್ಯ, ಶ್ರೀಕೃಷ್ಣ ದೇವರಾಯ ಹಾಗೂ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಜ.10ರ ಬೆಳಿಗ್ಗೆ 10.30ಕ್ಕೆ ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ನಾಣ್ಯ ಪ್ರದರ್ಶನವನ್ನು, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ನೋಟು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಜ.11ರ ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭವಿದ್ದು, ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡುವರು. ಜೆಡಿಎಸ್ ಮುಖಂಡರು, ಶಾಸಕರೂ ಆದ ವೈಎಸ್ವಿ ದತ್ತ, ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರುಗಳು ಹಾಗೂ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಉಪಸ್ಥಿತರಿರುವರು.
ಸಮಾರೋಪ: ಜ. 12ರ ಸಂಜೆ 5.30ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಕೇಂದ್ರದ ಭೂಸಾರಿಗೆ ಮತ್ತು ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೂರು ದಿನಗಳ ಸಮಾರಂಭದಲ್ಲಿ ಸಂಸದರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಬಿ.ವೈ. ರಾಘವೇಂದ್ರ ಉಪಸ್ಥಿತರಿರುವರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಉಚಿತವಾಗಿ ಈ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ವಿ.ಕೆ. ಜೈನ್, ಸಹಕಾರ್ಯದರ್ಶಿ ಎಲ್. ಸುಬ್ರಹ್ಮಣ್ಯ, ಸದಸ್ಯರಾದ ಬಿ.ಜಿ. ಮಹೇಶ್, ಶೇಷಗಿರಿರಾವ್, ಕಮಲಾಕ್ಷ ಡಿ. ಶೇಟ್, ಓಂ ಪ್ರಕಾಶ್ಶೇಟ್, ಬಸವರಾಜ್, ರಾಘವೇಂದ್ರ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

