ಅರಮನೆ ಜಾಗ ಅತಿಕ್ರಮಣಕ್ಕೆ ಆಕ್ಷೇಪ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 8
ಶಿವಪ್ಪ ನಾಯಕ ಅರಮನೆ ಪಕ್ಕದಲ್ಲಿ ಕಲ್ಯಾಣ ಮಂದಿರ, ಯಾಗಶಾಲೆ, ಊಟಮನೆ ನಿರ್ಮಿಸುವ ಪ್ರಯತ್ನ ನಡೆದಿದ್ದು, ಇದರಿಂದ 400 ವರ್ಷ ಪುರಾತನ ಅರಮನೆಗೆ ಧಕ್ಕೆಯಾಗಲಿದೆ. ಇದಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಇತಿಹಾಸ ತಜ್ಞರು ಒತ್ತಾಯಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕವು ಈ ಬಗ್ಗೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ ಯಾವುದೇ ಸ್ಮಾರಕದ 100 ಮೀಟರ್ ಪರಿಧಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಬಾರದು ಎಂಬ ಕಾನೂನು ಇದ್ದು, ಯಾವ ಕಾರಣಕ್ಕೂ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂಬ ನಿಯಮವಿದೆ.
ಆಯುಕ್ತರ ಬೆಂಬಲ: ಶಿವಪ್ಪ ನಾಯಕ ಅರಮನೆ ಪಕ್ಕದಲ್ಲಿಯೇ ರಾಜಪೂಜಿತ ಕೋಟೆ ಆಂಜನೇಯ ದೇವಾಲಯವಿದೆ. ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯಕ್ಕೆ ಕಳೆದ ವಾರ ಭೇಟಿ ನೀಡಿದ್ದ ಮುಜರಾಯಿ ಆಯುಕ್ತರು ಹೇಳಿಕೆ ನೀಡಿ, ಅರಮನೆ ಆವರಣ ಪಕ್ಕದಲ್ಲಿಯೇ ಕಲ್ಯಾಣ ಮಂದಿರ, ಯಾಗಶಾಲೆ, ಊಟದ ಮನೆ ನಿರ್ಮಿಸಲು ಪುರಾತತ್ವ ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆಯಲಾಗುವುದು ಎಂದಿದ್ದಾರೆ.
ಒಂದು ವೇಳೆ ಉದ್ದೇಶಿತ ಕಟ್ಟಡ ನಿರ್ಮಾಣ ಆದರೆ ಪ್ರಾಚೀನ ಪರಂಪರೆಯ ಶಿವಪ್ಪನಾಯಕ ಅರಮನೆಯ ಅಸ್ತಿತ್ವಕ್ಕೆ ಧಕ್ಕೆ ಆಗಲಿದೆ. ಆದ್ದರಿಂದ ಮುಜರಾಯಿ ಇಲಾಖೆ ಆಯುಕ್ತರಿಗೆ, ಕೋಟೆ ಆಂಜನೇಯ ದೇವಾಲಯದ ಪೂಜಾರಿಗಳಿಗೆ, ಆಡಳಿತ ಮಂಡಳಿಗೆ ಅರಮನೆ ಪಕ್ಕ ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ತಡೆಯಾಜ್ಞೆ ನೀಡಬೇಕು. ಪ್ರಾಚೀನ ಪರಂಪರೆಯ ಕಟ್ಟಡಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸಬೇಕಾದುದ್ದು ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಜಯದೇವಪ್ಪ ಜೈನಕೇರಿ ಅವರು ಕೋರಿದ್ದಾರೆ.
ತೆರವು ಮಾಡಿ: ಈಗಾಗಲೇ ಆದೇಶವಾಗಿರುವಂತೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕರು ಆದಷ್ಟು ಬೇಗ ಸ್ಥಳ ಪರಿಶೀಲನೆ ಮಾಡಿ ಪ್ರಾಚೀನ ಪರಂಪರೆಯ ಕಟ್ಟಡಕ್ಕೆ ಧಕ್ಕೆಯಾಗದಂತೆ ಧ್ವಾರಬಾಗಿಲಿನ ಪಕ್ಕದ ವಿವಾದಿತ ಸ್ಥಳ ತೆರವು ಮತ್ತು ಪೂರ್ವಾಭಿಮುಖವಾಗಿರುವ ಅರಣ್ಯ ಇಲಾಖೆಗೆ ಸೇರಿದ ಎರಡು ಮನೆ ತೆರವು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಕಾಡೆಮಿ ಒತ್ತಾಯಿಸಿದೆ.
ಈ ಕುರಿತು ಅಕಾಡೆಮಿಯ ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೂ ಪತ್ರ ಬರೆದಿದ್ದಾರೆ.
ಅರಮನೆ ಇತಿಹಾಸ
- ಕೆಳದಿ ಅರಸರ ಕಾಲದ ಕಟ್ಟಡ. 400 ವರ್ಷಗಳ ಹಿಂದೆ ನಿರ್ಮಾಣ. ಶಿವಪ್ಪ ನಾಯಕರೇ ನಿರ್ಮಿಸಿದ್ದೆಂಬುದಕ್ಕೆ ಸಾಕ್ಷ್ಯವಿಲ್ಲ.
- ಈ ಕಟ್ಟಡವು 1980ರ ವರೆಗೂ ಅರಣ್ಯ ಇಲಾಖೆಯ ದಾಸ್ತಾನು ಕೋಠಿಯಾಗಿತ್ತು.
- 1982ರಲ್ಲಿ ಮುಖ್ಯಮಂತ್ರಿ ಗುಂಡೂರಾವ್ ಸಚಿವ ಸಂಪುಟ ನಿರ್ಣಯ ಮಾಡಿ ಅರಣ್ಯ ಇಲಾಖೆಯಿಂದ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಿತ್ತು.
- ಪುರಾತತ್ವ ವಿಜ್ಞಾನಿ ಆ. ಸುಂದರ ಅವರ ನೇತೃತ್ವದಲ್ಲಿ ಸಂರಕ್ಷಣೆ ಕಾರ್ಯ ನಡೆದು, 1984ರಲ್ಲಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು.
- ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಿರ್ವಹಣೆಗೆ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡಲು ಆದೇಶ.
- ಈ ಅರಮನೆಯಲ್ಲಿ ಹಲವು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗಳು ನಡೆದಿವೆ. ದಸರಾ ಕಾರ್ಯಕ್ರಮ, ವಿಚಾರ ಸಂಕಿರಣ ಸೇರಿದಂತೆ ಹಲವು ಕಾರ್ಯಕ್ರಮ ನಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

