ಪಾ.ಪು.ಗೆ ಗುರುಬಸವಶ್ರೀ ಪ್ರಶಸ್ತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.9
ಗುರುಬಸವ ಸ್ವಾಮಿಯವರ 102ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ ಜ.16 ಮತ್ತು 17ರಂದು ಶಿವಮೊಗ್ಗದ ಗುರುಬಸವ ಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಪಾಟೀಲ್ ಪುಟ್ಟಪ್ಪ ಅವರಿಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಡಿಸೋಜ ಅವರನ್ನು ಸನ್ಮಾನಿಸಲಾಗುತ್ತಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ, ಬೆಕ್ಕಿನ ಕಲ್ಮಠ ಸ್ಥಾಪಕರು ಹಾಗೂ ಸಮಾಜ ಧಾರ್ಮಿಕ, ಶಿಕ್ಷಣ ಕ್ಷೇತ್ರದಲ್ಲಿ ಜನಕಲ್ಯಾಣ ಕಾರ್ಯಮಾಡಿದ ಲಿಂ.ಶ್ರೀ ಗುರುಬಸವ ಮಹಾಶಿವಯೋಗಿಯವರ 102ನೇ ಪುಣ್ಯ ಸ್ಮರಣೋತ್ಸವವನ್ನು ವೈವಿದ್ಯಮಯ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಶರಣ ಸಾಹಿತ್ಯ ಸಮ್ಮೇಳನ: ಪುಣ್ಯ ಸ್ಮರಣೋತ್ಸವ ನಿಮಿತ್ತವಾಗಿಟ್ಟುಕೊಂಡು ಶ್ರೀಮಠ ಕಳೆದ 3 ದಶಕಗಳಿಂದ ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನ ನಡೆಸಿಕೊಂಡು ಬರುತ್ತಿದೆ. ಪೂಜ್ಯರ ಪೀಠಾರೋಹಣ ರಜತಮಹೋತ್ಸವ ಸವಿನೆನಪಿಗಾಗಿ ಗುರುಬಸವಶ್ರೀ ಪ್ರಶಸ್ತಿಯನ್ನು ಶ್ರೀಮಠ ನೀಡುತ್ತಿದೆ. ನಾಡು- ನುಡಿ, ಶಿಕ್ಷಣ, ಸಾಹಿತ್ಯ, ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರದಾನ ಮಾಡಲಾಗುತ್ತಿದೆ. ಈ ಬಾರಿ ಪಾಟೀಲ್ ಪುಟ್ಟಪ್ಪನವರಿಗೆ ನೀಡಲಾಗುತ್ತಿದೆ ಎಂದರು.
ಇಂದು ಎಲ್ಲಾ ಕ್ಷೇತ್ರ ಕಲುಷಿತಗೊಳ್ಳುತ್ತಿದ್ದು, ಪರೀಕ್ಷೆಗೊಳಪಡುವ ಅಗತ್ಯವಿದೆ. ಜೊತೆಗೆ ಆತ್ಮ ವಿವೇಚನೆ ಮಾಡಿಕೊಳ್ಳುವ ಸಂದರ್ಭ. ಧಾರ್ಮಿಕ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಇಂದಿಗೂ ತಪ್ಪು ಆಚರಣೆ, ಕಲ್ಪನೆ, ಮೂಢನಂಬಿಕೆ, ಅಂಧಾನುಕರಣೆಯಲ್ಲಿರುವ ಸಮಾಜದಲ್ಲಿ ಸಂಕುಚಿತ ಮನೋಭಾವನೆ ಹೋಗಲಾಡಿಸಿ, ವೈರುದ್ಯಗಳಿಗೆ ಅವಕಾಶ ಕೊಡದೇ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮಠದ ಆಶಯ. ಈ ನಿಟ್ಟಿನಲ್ಲಿ ಭಾವೈಕ್ಯ ಸಮ್ಮೇಳನ, ಶಿವಾನುಭವ ಗೋಷ್ಠಿ ಮುಂತಾದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯಕ್ರಮ ವಿವರ: ಶರಣ ಸಾಹಿತ್ಯ ಸಮ್ಮೇಳನ ಮತ್ತು 408ನೇ ಮಾಸಿಕ ಶಿವಾನುಭವಗೋಷ್ಠಿ ಜನವರಿ 16ರಂದು ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಯವರು ಸಮ್ಮುಖದಲ್ಲಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಉಪಸ್ಥಿತರಿರುವರು.
ಉಪನ್ಯಾಸ: ಇದೇ ಸಂದರ್ಭದಲ್ಲಿ ಡಾ.ನಾ. ಡಿಸೋಜ ಅವರನ್ನು ಸನ್ಮಾನಿಸಲಾಗುತ್ತಿದೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಅವರು ವಚನ ಸಂಸ್ಕೃತಿಯ ಸಾಮಾಜಿಕ ಆಯಾಮಗಳ ಕುರಿತು ಉಪನ್ಯಾಸ ನೀಡುವರು.
17ರಂದು ಭಾವೈಕ್ಯ ಸಮ್ಮೇಳನ ನಡೆಯಲಿದ್ದು, ಚಿತ್ರದುರ್ಗ ಕಬೀರಾಶ್ರಮದ ಶಿವಲಿಂಗಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಉಪ ಕುಲಪತಿ ಪ್ರೊ. ಎಸ್.ಎ.ಬಾರಿ, ಎನ್ಡಿವಿ ಹಾಸ್ಟೆಲ್ ಅಧ್ಯಕ್ಷ ಎಸ್. ರುದ್ರೇಗೌಡ ಉಪಸ್ಥಿತರಿರುವರು. ಡಾ. ಪಾಟೀಲ್ ಪುಟ್ಟಪ್ಪ ಅವರಿಗೆ ಗುರು ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಂಜನಾದರ್ಜಾ ಉಪನ್ಯಾಸ ನೀಡುವರು.
ಸ್ಪರ್ಧೆ: ಶರಣಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನದ ಅಂಗವಾಗಿ ಜ.16ರಂದು ವಚನ ಗಾಯನ, ವಚನ ಕಂಠಪಾಠ ಸ್ಪರ್ಧೆ, 17ರಂದು ಜಾನಪದ ಗೀತೆ, ಭಕ್ತಿಗೀತೆ, ರಂಗೋಲಿ ಸ್ಪರ್ಧ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸ್ಮರಣೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಬಿ. ಶಿವಪ್ಪ, ಜಿ.ಡಿ. ಬೆನಕಪ್ಪ, ಡಾ. ಮಲ್ಲೇಶ್ ಹುಲ್ಲಮನಿ, ಕೆ.ಆರ್. ಲಿಂಗಪ್ಪ, ಸಿ.ಬಿ. ಶಾಂತವೀರಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

