ರಾಷ್ಟ್ರಮಟ್ಟದ ಅಂಚೆ ಚೀಟಿ, ನಾಣ್ಯ-ನೋಟು ಪ್ರದರ್ಶನ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.10
ಚರಿತ್ರೆಯ ಕಾಲಘಟ್ಟವನ್ನು ಮೆಲುಕು ಹಾಕಲು ಅವಕಾಶ ಕಲ್ಪಿಸುವ ಬಲು ಅಪರೂಪದ ರಾಷ್ಟ್ರಮಟ್ಟದ ನಾಣ್ಯ ನೋಟು ಹಾಗೂ ಅಂಚೆ ಚೀಟಿ ಪ್ರದರ್ಶನ ಮತ್ತು ಸಮ್ಮೇಳನ ಶುಕ್ರವಾರ ವಿದ್ಯುಕ್ತವಾಗಿ ಆರಂಭವಾಗಿದ್ದು, ಇನ್ನೆರಡು ದಿನ ಮುಂದುವರಿಯಲಿದೆ.
ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಕಾರರ ಸಂಘವು ಹಮ್ಮಿಕೊಂಡ ಈ ಪ್ರದರ್ಶನವು ಕೇವಲ ಹಳೆಯ ನಾಣ್ಯ-ನೋಟುಗಳನ್ನಷ್ಟೇ ತೋರಿಸುತ್ತಿಲ್ಲ. ಬದಲಿಗೆ ಈ ಸಂಪತ್ತಿನಲ್ಲಿರುವ ಅನೇಕ ಅಚ್ಚರಿ, ವಿಸ್ಮಯಗಳನ್ನು ಸವಿಯುವ ಅವಕಾಶ ಮಾಡಿಕೊಟ್ಟಿದೆ.
ವಿಶೇಷತೆಗಳು...
ಕನ್ನಡ ನಾಡಿನ ಗಂಗ, ಕದಂಬ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯ ಆದಿಯಾಗಿ, ರೋಮನ್, ಗ್ರೀಕ್, ದೆಹಲಿ ಅರಸರ ನಾಣ್ಯಗಳಿಂದ ಹಿಡಿದು ಬ್ರಿಟಿಷ್ ಆಡಳಿತದ ನೋಟುಗಳ ವರೆಗೆ ಎಲ್ಲ ರಾಜರು, ಆಡಳಿತಗಳ ನಾಣ್ಯ-ನೋಟುಗಳನ್ನು ಇಲ್ಲಿ ಕಾಣುವ ಅವಕಾಶವುಂಟು.
ಚಿನ್ನ, ಬೆಳ್ಳಿ, ತಾಮ್ರದಿಂದ ಸಿದ್ಧವಾದ ನಾಣ್ಯವನ್ನು ಒಂದೇ ಕಡೆ ವೀಕ್ಷಿಸುವ ಅವಕಾಶ.
ವಿಶ್ವದ ವಿವಿಧ ದೇಶಗಳ ವಿವಿಧ ಕಾಲದ ನೋಟುಗಳು, ಪ್ಲಾಸ್ಟಿಕ್ ನೋಟುಗಳು, ಬಂಗಾರ ಲೇಪಿತ ನೋಟುಗಳು, ಕ್ರಮಾಂಕ ನೋಟುಗಳು, ಹೇರ್ಪಿನ್ ಬೆಳ್ಳಿ ನಾಣ್ಯ, 1 ಕೆಜಿ ತೂಕದ ಬೆಳ್ಳಿ ನಾಣ್ಯಗಳೂ ಸಹ ಇವೆ. ಚೀನಾದ ಕೃಷಿ ಪರಿಕರ ಆಕೃತಿಯ ನಾಣ್ಯಗಳು ವಿಶೇಷ ಆಕರ್ಷಣೆ.
ಅಂಚೆ ಚೀಟಿಗಳಂತೂ ಒಂದಕ್ಕಿಂತ ಒಂದು ವಿಭಿನ್ನ. 40ಕ್ಕೂ ಹೆಚ್ಚು ರಾಷ್ಟ್ರಗಳ ಅಂಚೆ ಚೀಟಿ, ಭಾವಚಿತ್ರಗಳಿರುವ ಅಂಚೆ ಚೀಟಿಗಳು ಇಲ್ಲಿವೆ. ಮಲ್ಲಿಗೆ, ಸಂಪಿಗೆ, ಗುಲಾಬಿ, ಶ್ರೀಗಂಧ ಇತ್ಯಾದಿ 8 ವಿವಿಧ ಸುಗಂಧವನ್ನು ಸೂಸುವ ಅಂಚೆ ಚೀಟಿ ಪರಿಮಳ ಪ್ರದರ್ಶನದಲ್ಲಿ ಘಮಿಸುತ್ತಿವೆ.
ಅಂಧರಿಗೆ ಬ್ರೈಲ್ ಲಿಪಿ ಪರಿಚಯಿಸಿದ ಲೂಯಿಸ್ ಬ್ಪೈಲ್ ಅವರ ಭಾವಚಿತ್ರವಿರುವ ವಿಶೇಷ ಅಂಚೆ ಚೀಟಿ ಇಲ್ಲಿವೆ. ಇದರಲ್ಲಿ ಬ್ರೈಲ್ಲಿಪಿ ಇರುವುದರಿಂದ ಅಂಧರೂ ಇದನ್ನು ಮುಟ್ಟಿ ವಿವರಣೆ ಪಡೆಯಬಹುದು.
ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಸುಭಾಶ್ಚಂದ್ರ ಬೋಸ್ ಸೇದಂತೆ ಸಿನಿಮಾ ತಾರೆಯರಾದ ರಾಜ್ಕುಮಾರ್, ವಿಷ್ಣುವರ್ಧನ್, ಕಿಶೋರ್ಕುಮಾರ್, ಇತ್ತೀಚೆಗೆ ಬಿಡುಗಡೆಯಾದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾವಚಿತ್ರದ ಅಂಚೆ ಚೀಟಿ, ಅಪರೂಪದ ಶಿರಡಿ ಸಾಯಿಬಾಬಾ ಚಿತ್ರವಿರುವ ಅಂಚೆ ಚೀಟಿ ಇಲ್ಲಿ ವೀಕ್ಷಿಸಬಹುದು.
ಸಾಂಬಾರ ಪದಾರ್ಥಗಳು, ದಸರಾ ಉತ್ಸವ, ದಶಾವತಾರ, ಕುಟುಂಬ ಯೋಜನೆ, ಉಪಗ್ರಹ ಉಡಾವಣೆ, ಹೀಗೆ ದೇಶವನ್ನು ಪರಿಚಯಿಸುವ ಅಂಚೆ ಚೀಟಿಗಳಿವೆ.
ಬರೇ ನಾಣ್ಯ, ನೋಟು, ಅಂಚೆ ಚೀಟಿಗಳಿಲ್ಲ. ನೂರಾರು ವರ್ಷಗಳ ಹಿಂದೆ ಬಳಸುತ್ತಿದ್ದ ಕ್ಯಾಮರಾ, ದೂರದರ್ಶಕ, ಅಡಕೆ ಕತ್ತರಿಸುವ ಸಾಧನ, ಕಡಗ, ಸುಣ್ಣದ ಡಬ್ಬಿ ಅಲ್ಲದೇ ಉರ್ದುವಿನಲ್ಲಿರುವ ರಾಮಾಯಣ ಭಾರತ ಪುಸ್ತಕಗಳು ಇವೆ.
ಕರೆನ್ಸಿ ಓದುವ ಕ್ರಮದಿಂದಾಗಿ ಮಹಾತ್ಮ ಗಾಂಧಿ ಹುಟ್ಟಿದ ದಿನ, ಪ್ರಧಾನಿ ಜನ್ಮ ದಿನಾಂಕ, ಸಚಿನ್ ತೆಂಡೂಲ್ಕರ್ ಸ್ಕೋರ್ ತೋರಿಸುವ ವಿಸ್ಮಯವೂ ಇಲ್ಲುಂಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

