ಬಳಕೆಗೆ ಮುನ್ನವೇ ಟ್ಯಾಂಕ್ ಸೋರಿಕೆ
ರವಿ ಬಿದನೂರು
ಹೊಸನಗರ: ತಾಲೂಕಿನ ಮೇಲಿನಬೆಸಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ತುರ್ತು ಅಗತ್ಯ ಕಂಡುಬಂದು ಎರಡು ವರ್ಷದ ಹಿಂದೆ ಪೈಪ್ಲೈನ್ ಸೇರಿದಂತೆ 10 ಲಕ್ಷ ವೆಚ್ಚದಲ್ಲಿ ಕಾಮಗಾರಿಯಾಯಿತು. ಆದರೆ ತುರ್ತು ಬೇಡಿಕೆಗೆ ಇಂದಿಗೂ ಮುಕ್ತಿ ಸಿಗದೆ ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ.
ಕಾಮಗಾರಿ ಮುಗಿದು ಸುಮಾರು 6 ತಿಂಗಳು ಕಳೆದಿದೆ. ಆದರೆ ಚಾಲನೆ ನೀಡಲು ಮಾತ್ರ ಮೀನಾಮೇಷ ಎಣಿಸುತ್ತಿರುವುದು ಏಕೆ ಎಂಬುದಕ್ಕೆ ಅಧಿಕಾರಿಗಳ ಬಳಿಯೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಮೇಲಿನಬೆಸಿಗೆ, ಸಾಲಗೇರಿ, ಗಂಗನಕೊಪ್ಪ ಮತ್ತು ರಾಮಚಂದ್ರಾಪುರ ಪ್ರದೇಶದ ಸುಮಾರು 500ಕ್ಕು ಹೆಚ್ಚು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹಿನ್ನೆಲೆಯಲ್ಲಿ ಜಿಪಂ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಂದೊ ನಾಳೆಯೋ ಶುದ್ಧ ನೀರು ಮನೆಬಾಗಿಲಿಗೆ ಬರುತ್ತದೆ ಎಂದು ಕಾಯುತ್ತಿರುವ ಗ್ರಾಮಸ್ಥರಲ್ಲಿ ಇದು ಅಸಮಾಧಾನಕ್ಕೆ ಕಾರಣವಾಗಿದೆ.
ಸೋರುತ್ತಿದೆ ಟ್ಯಾಂಕ್: ಟ್ಯಾಂಕ್ ಕಾಮಗಾರಿ ನಿರ್ಮಾಣಕಂಡಿದ್ದು, ಆರಂಭಿಕ ಹಂತದಲ್ಲೇ ಸೋರಿಕೆ ಕಂಡು ಬಂದಿದೆ. ಈ ಬಗ್ಗೆ ಗ್ರಾಪಂ ಮಟ್ಟದಲ್ಲಿ ಚರ್ಚೆ ನಡೆದು ಜಿಪಂ ಎಂಜನಿಯರ್ ಗಮನಕ್ಕೆ ತಂದಿದ್ದು, ಕೂಡಲೆ ಸರಿ ಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆರಂಭದಲ್ಲೆ ಸೋರಿದರೆ ಬಾಳಿಕೆ ಹೇಗೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಎದುರಾಗಿದೆ.
ಸಭೆಯಲ್ಲಿ ಚರ್ಚೆ: ನೀರು ಸರಬರಾಜು ಯೋಜನೆ ಸಾರ್ವಜನಿಕವಾಗಿ ಮುಕ್ತಗೊಳಿಸಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮೇಲಿನಬೆಸಿಗೆ (ಜಯನಗರ) ಗ್ರಾಪಂನ ಗ್ರಾಮಸಭೆ, ಜಮಾಬಂದಿಯಲ್ಲಿ ಚರ್ಚೆ ನಡೆದಿದ್ದು, ಸಭೆಗೆ ಆಗಮಿಸಿದ್ದ ಜಿಪಂ ಅಧಿಕಾರಿಗಳಿಂದ ಕಾರಣ ಕೇಳಲಾಗಿತ್ತು. ಇಲ್ಲವೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಹೇಳಿ 3 ತಿಂಗಳು ಕಳೆದರೂ ಪರಿಸ್ಥಿತಿ ಹಾಗೆ ಮುಂದುವರೆದಿದೆ.
ಕಾಮಗಾರಿ ಮುಗಿದಿದೆ. ಸೋರಿಕೆ ಕಂಡು ಬಂದಿದ್ದು, ಅದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು.
ಮಂಜುನಾಥ ದೇಸಾಯಿ, ಎಇಇ ಜಿಪಂ
ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ವಿಳಂಬ ಸಲ್ಲ. ಆದರೆ ವಿಳಂಬ ಯಾಕೆ ಎಂಬ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಕಾಮಗಾರಿ ಮುಗಿದಿದೆ ಎಂದ ಮೇಲೆ ಗ್ರಾಪಂಗೆ ಹಸ್ತಾಂತರಿಸಲು ತಡವೇಕೆ. ಸಂಬಂಧ ಪಟ್ಟ ಇಲಾಖೆ ಕೂಡಲೆ ಕ್ರಮ ಕೈಗೊಳ್ಳಬೇಕು.
- ಧರ್ಮಪ್ಪ, ಗ್ರಾಪಂ ಸದಸ್ಯ
ಜಯನಗರ ಗ್ರಾಪಂ ವ್ಯಾಪ್ತಿಯಲ್ಲಿ ಜನರ ಹಿತದೃಷ್ಟಿಯಿಂದ ತುರ್ತು ಮತ್ತು ಶುದ್ಧ ನೀರಿಗಾಗಿ ಕಾಮಗಾರಿ ಕೈಗೊಂಡಿರುವುದೇನೊ ಸರಿ. ಎರಡು ವರ್ಷದ ಹಿಂದೆ ಇದ್ದ ನೀರಿನ ತುರ್ತಿಗೆ ಇನ್ನೂ ಸ್ಪಂದಿಸಲು ಸಾಧ್ಯವಿಲ್ಲ ಎಂದಾದರೆ ಕಾಮಗಾರಿ ಔಚಿತ್ಯ ಏನು?
- ಉಮೇಶ್, ಗ್ರಾಪಂ ಸದಸ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

