ಶಿವಮೊಗ್ಗ

ಶ್ರೀರಾಮಲಿಂಗೇಶ್ವರ ಮಠ ಸಮಸ್ಯೆ ಶೀಘ್ರ ಪರಿಹಾರ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಜ.14
ಇತಿಹಾಸ ಪರಂಪರೆ ಹೊಂದಿದ ಶ್ರೀರಾಮಲೀಗೇಶ್ವರ ಮಠದ ನಿಜವಾದ ಶ್ರೀಗಳು ಯಾರೆಂಬುದನ್ನು ಶೀಘ್ರದಲ್ಲಿ ಗೊತ್ತಾಗುವುದು ಎಂದು ಬಾಳೆಹೊನ್ನೂರು ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಹಾರನಹಳ್ಳಿ ರಾಮಲಿಂಗೇಶ್ವರ ಮೂಲಮಠದಲ್ಲಿ ಆಯೋಜಿಸಿದ ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಾಚೀನ ಇತಿಹಾಸ ಪರಂಪರೆ ಹೊಂದಿದ ಶ್ರೀರಾಮಲಿಂಗೇಶ್ವರ ಮಠ ಹಲವು ಸಮಸ್ಯೆಗಳಿಂದ ತೊಳಲಾಡುತ್ತಿದೆ. ಅಪಾರ ಸಂಪನ್ಮೂಲವಿರುವ ಶ್ರೀಮಠದ ಹೆಸರಿನಲ್ಲಿ ಸ್ವಯಂಘೋಷಿತ ಅನೇಕ ಶ್ರೀಗಳು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿರುವುದು ಪೀಠಗಳ ಗಮನಕ್ಕೆ ಬಂದಿದೆ. ಆ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ ಕಂಡುಹಿಡಿಯುವ ಸದುದ್ದೇಶದಿಂದ ಉಭಯ ಜಗದ್ಗುರುಗಳ ಆಗಮನವಾಗಿದೆ ಎಂದರು.
ಭಕ್ತರ ಅಪೇಕ್ಷೆ: ಶ್ರೀಮಠ ಪುನರ್ನಿರ್ಮಾಣಗೊಂಡು ಅಭಿವೃದ್ಧಿಯಾಗಬೇಕೆಂಬುದೇ ಭಕ್ತರ ಅಪೇಕ್ಷೆಯಾಗಿದೆ ಹೊರತು ಬೇರೇನೂ ಇಲ್ಲ. ಇದಕ್ಕೆ ಸಂಬಂಧಿಸಿದವರೆಲ್ಲರ ಸಹಕಾರವಿದ್ದರೆ ಬೇಗನೆ ಪರಿಹಾರ ಕೈಗೊಳ್ಳಲು ಸಾಧ್ಯ. ಶ್ರೀರಾಮಲಿಂಗೇಶ್ವರ ಮಠದ ಸಮಸ್ಯೆ ಪರಿಹಾರಗೊಂಡ ಸಂದರ್ಭದಲ್ಲಿ ಹಾರನಹಳ್ಳಿಯನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸಲಾಗುವುದೆಂದರು.
ಅಭಿವೃದ್ಧಿ ಆಗಿಲ್ಲ: ಸಾನ್ನಿಧ್ಯ ವಹಿಸಿದ್ದ ಶ್ರೀಮದ್ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀರಾಮಲಿಂಗೇಶ್ವರ ಮಠದಿಂದ ಕೆಲವರು ಆರ್ಥಿಕವಾಗಿ ಬೆಳೆದರೆ ಹೊರತು ಮೂಲಮಠದ ಪರಿಸರದಲ್ಲಿ ಏನೊಂದೂ ಅಭಿವೃದ್ಧಿ ಕಾರ್ಯ ಮಾಡದಿರುವುದು ವಿಷಾದ ತಂದಿದೆ. ಈ ಸಮಸ್ಯೆಗಳ ಪರಿಹಾರಕ್ಕೆ 15 ಜನರ ಸತ್ಯಶೋಧನಾ ಸಮಿತಿ ರಚಿಸಿ ಮಠಕ್ಕಿರುವ ಸ್ವತ್ತು, ಸಂಪನ್ಮೂಲಗಳ ಬಗೆಗೆ ವಿಚಾರ ಸಂಗ್ರಹಿಸಲಾಗುವುದು. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವ ಎಷ್ಟು ಜನ ಶ್ರೀಗಳು ಇದ್ದಾರೆ, ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ. ಈ ದಿಶೆಯಲ್ಲಿ ರಂಭಾಪುರೀ ಜಗದ್ಗುರುಗಳ ಸಹಕಾರ ಸದಾ ಇರಲೆಂದು ಬಯಸಿದರು.  
ಕುಪ್ಪೂರು ಗದ್ದಿಗೆಮಠದ ಡಾ. ಯತೀಶ್ವರ ಶಿವಾಚಾರ್ಯರು, ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗ್ರಾಪಂ ಅಧ್ಯಕ್ಷ ಸುರೇಶ ಕಶೆಟ್ಟಿ, ಪಾಪ್ಯುಲರ್ ವಿರೂಪಾಕ್ಷಪ್ಪ, ಆಯನೂರು ಶಿವಾನಂದಪ್ಪ, ಟಿ.ಜಿ. ಮೃತ್ಯುಂಜಯ, ನ್ಯಾಯವಾದಿ ನಿಂಗಪ್ಪ, ಟಿ.ವಿ. ಈಶ್ವರಯ್ಯ ಹಾಗೂ ಜಿಪಂ ಸದಸ್ಯರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.