ಕೆರೆಗೆ ಕುತ್ತಾದ ಕಲ್ಲು ಗಣಿಗಾರಿಕೆ
ಜಿ.ಆರ್. ಸತ್ಯನಾರಾಯಣ
ತೀರ್ಥಹಳ್ಳಿ: ಪಟ್ಟಣದ ನಡುವೆಯೇ ಇರುವ ಸೀಬಿನ ಕೆರೆ ಈಗ ನಿಧಾನವಾಗಿ ಅವನತಿಯತ್ತ ಸಾಗುತ್ತಿದೆ. ಇದನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊತ್ತವರು ಸುಮ್ಮನೆ ಕುಳಿತಿದ್ದಾರೆ. ಅಧಿಕಾರಿಗಳ ಮೆಳ್ಳಗಣ್ಣಿನ ಸೆಳೆತಕ್ಕೆ ಸಿಕ್ಕಿ ತನ್ನ ಜಲಮೂಲದ ಕಣ್ಣನ್ನೇ ಕಳೆದುಕೊಳ್ಳುತ್ತಿರುವ ಸೀಬಿನಕೆರೆ ಯಾವುದೇ ಕಾಯಕಲ್ಪ ಸಿಗದೆ ನಾಶವಾಗುತ್ತಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಈ ಕೆರೆಯ ಸಂಗ್ರಹ ಸಾಮರ್ಥ್ಯ 1 ಎಂಸಿಎಫ್ಟಿ. ನೂರಾರು ವರ್ಷಗಳಿಂದ 200 ಎಕರೆ ಜಮೀನುಗಳಿಗೆ ನೀರೊದಗಿಸುತ್ತಿತ್ತು. ಈಗ ಈ ಕೆರೆಯ ಅಚ್ಚುಕಟ್ಟು ಪ್ರದೇಶ ಬಹುತೇಕ ಇಲ್ಲವಾಗಿದೆ.
ಒಂದು ಕಾಲದಲ್ಲಿ ಎರಡು ಬೆಳೆ ಕೊಡುತ್ತಿದ್ದ ಈ ಜಮೀನುಗಳು ನಿವೇಶನವಾಗಿ ಬದಲಾಗುತ್ತಿವೆ. ದಂಡೆಯ ಪಕ್ಕದಲ್ಲಿರುವ ತರಿ ಜಮೀನು ಕೂಡ ಇದಕ್ಕೆ ಹೊರತಲ್ಲ. ಹಾಗಾಗಿ ಕೆರೆಯ ಎರಡೂ ತೂಬುಗಳನ್ನು ಈಗ ಮುಚ್ಚಲಾಗಿದೆ. ಕೃಷಿ ಸಂಸ್ಕೃತಿ ಈಗ ನಿವೇಶನ ಸಂಸ್ಕೃತಿಯಾಗುತ್ತಿದೆ.
ಈಗಲೂ ಅಪರೂಪದ ಸಾವಿರಾರು ಪಕ್ಷಿಗಳು ಈ ಕೆರೆಯತ್ತ ಬರುತ್ತವೆ. ಪಕ್ಕದಲ್ಲೇ ಕೇದಿಗೆ ಬನ ಇದೆ. ನೈಸರ್ಗಿಕವಾಗಿ ಅಪಾರ ಮೌಲ್ಯ ಹೊಂದಿರುವ ಕೆರೆಯನ್ನು ಉಳಿಸುವಲ್ಲಿ, ಕೆರೆ ಸಾಯುತ್ತಿರುವ ಮೂಲ ಕಾರಣವನ್ನು ಪತ್ತೆ ಮಾಡುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ.
ಅಪಾಯಗಳು: ಕೆರೆಯ ಪಕ್ಕದಲ್ಲಿರುವ ಬಂಡೆಯನ್ನು ಒಡೆಯುತ್ತಿರುವುದು ದೊಡ್ಡ ಅಪಾಯ. ವೈಜ್ಞಾನಿಕವಾಗಿ ಬಂಡೆಕಲ್ಲುಗಳು ಜಲಮೂಲಗಳು. ಬಂಡೆಗಳಿವೆ ಎಂದರೆ ಅಕ್ಕಪಕ್ಕದ ಕೆರೆಕಟ್ಟೆಗಳು ಸಮೃದ್ಧವಾಗಿವೆ ಎಂದೇ ಅರ್ಥ.
ಈ ಕಲ್ಲು ಬಂಡೆಯ ನಿಕ್ಷೇಪವನ್ನು ಯಂತ್ರ ಬಳಸಿ ಒಡೆಯಲಾಗುತ್ತಿದೆ. ಇದಕ್ಕಾಗಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರ ಪರಿಣಾಮ ಕಲ್ಲು ಬಂಡೆಯ ಕಂಪನದಿಂದಾಗಿ ಕೆರೆಯ ಜಲಮೂಲಕ್ಕೆ ಭಾರಿ ಅಪಾಯ ಬಂದಿದೆ.
ಜಲದ ಕಣ್ಣು ಸಡಿಲಗಂಡು ಕೆರೆಯಲ್ಲಿ ಇರಬೇಕಾದ ನೀರು ಬಂಡೆ ಒಡೆಯುತ್ತಿರುವ ಜಾಗದಲ್ಲಿ ಸಂಗ್ರಹವಾಗುತ್ತಿದೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರೂ ಉಪಯೋಗವಾಗಿಲ್ಲ.
ಕೆರೆಯ ಪಕ್ಕದಲ್ಲಿಯೇ ಇರುವ ಕೆರೆಯ ಅಂಗಳ ಸರ್ಕಾರಿ ಜಾಗ. ಕೆರೆಗೆ ತೊಂದರೆಯಾಗಬಾರದೆಂದು ಇದನ್ನು ಹಾಗೆಯೇ ಉಳಿಸಲಾಗುತ್ತದೆ. ಈ ಅಂಗಳ ಸಹ ಒತ್ತುವರಿಯಾಗುತ್ತಿರುವುದು ಅಪಾಯಕಾರಿ.
ಗಲೀಜು ನೀರು: ಹಿಂದಮ್ಮೆ ಮೀನು ಸಾಕಲಾಗುತ್ತಿದ್ದ ಈ ಕೆರೆ ಇಂದು ಗಬ್ಬು ನಾರುತ್ತಿದೆ.
ಇದಕ್ಕೆ ಪಟ್ಟಣ ಪಂಚಾಯ್ತಿಯ ಹದಗೆಟ್ಟ ಚರಂಡಿ ವ್ಯವಸ್ಥೆ ನೇರ ಕಾರಣ. ಕಲ್ಮಶಗಳು ನೇರವಾಗಿ ಈ ಕೆರೆಯ ಒಡಲು ಸೇರುತ್ತದೆ.
ಕೆರೆಯಲ್ಲಿ ಹೂಳು ತುಂಬುತ್ತಿರುವುದರಿಂದ ಆಮ್ಲಜನಕ ಅಂಶ ಕಡಿಮೆಯಾಗಿ ನಿಧಾನವಾಗಿ ಉಸಿರುಗಟ್ಟುತ್ತಿದೆ. ಒಂದು ಕಾಲದಲ್ಲಿ ಮೀನು ಸಾಕಾಣಿಕೆಗೆ ಅವಕಾಶ ಮಾಡಿಕೊಡುತ್ತಿದ್ದ ಕೆರೆಯಲ್ಲಿ ಈಗ ಈ ಪ್ರಕ್ರಿಯೆ ಇಲ್ಲ. ಇನ್ನೊಂದಿಷ್ಟು ದಿನ ಬಿಟ್ಟರೆ ಹೂಳಿನಿಂದಲೇ ಕೆರೆ ಮುಚ್ಚಿಹೋಗುವುದರಲ್ಲಿ ಅನುಮಾನವಿಲ್ಲ.
ಪಟ್ಟಣದ ನಡುವೆ ಕೆರೆ ಇರುವುದು ಅಪರೂಪ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಜನಪ್ರತಿನಿಧಿಗಳು ಸುಮ್ಮನೆ ಕುಳಿತಿದ್ದಾರೆ. ಕೆರೆ ಇರುವ ಪ್ರದೇಶವನ್ನು ಪಟ್ಟಣ ಪಂಚಾಯ್ತಿಯಲ್ಲಿ ಪ್ರತಿನಿಧಿಸುವ ನವೀನ್, ಕೆರೆಯನ್ನು ಅಭಿವೃದ್ಧಿಪಡಿಸಿ ಬೋಟಿಂಗ್ ಅವಕಾಶ ನೀಡಿದರೆ ಪ್ರವಾಸೋದ್ಯವವಾಗಿಯೂ ಬೆಳೆಯಬಹುದು. ಪಟ್ಟಣ ಪಂಚಾಯ್ತಿಗೂ ಆದಾಯ ಬರುತ್ತದೆ ಎನ್ನುತ್ತಾರೆ. ಇದಕ್ಕಾಗಿ 1 ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿರುವುದಾಗಿ ಹೇಳುತ್ತಾರೆ.
ಅವರು ಹೇಳುತ್ತಿರುವ ಕೆಲಸ ಎಷ್ಟು ಬೇಗ ಆಗುತ್ತದೆಯೇ ಅಷ್ಟು ಬೇಗ ಈ ಕೆರೆಗೆ ಜೀವಕಳೆ ಬರುತ್ತದೆ.
ಏನಾಗಬೇಕು?
ಕೆರೆಯ ಪಕ್ಕದ ಬಂಡೆ ಸ್ಫೋಟಿಸುವುದನ್ನು, ಕದಲಿಸುವುದನ್ನು ತಕ್ಷಣ ನಿಲ್ಲಿಸಬೇಕು.
ಕೆರೆ ಹೂಳೆತ್ತಲು ಕ್ರಮ
ಕೈಗೊಳ್ಳಬೇಕು.
ಕೆರೆಯ ಜಲಾನಯನ ಪ್ರದೇಶ ಸಂರಕ್ಷಣೆ ಆಗಬೇಕು.
ಕೆರೆಗೆ ಕೊಳಚೆ ನೀರು
ಸೇರುವುದನ್ನು ತಡೆಯ
ಬೇಕು.
ಕೆರೆ ದಂಡೆಯನ್ನು ಇನ್ನಷ್ಟು ಭದ್ರಪಡಿಸಿ ನೀರು ಸೋರಿಹೋಗದಂತೆ ನೋಡಬೇಕು.
ಬೋಟಿಂಗ್ ಜತೆ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

