ಶಿವಮೊಗ್ಗ

ತೀರ್ಪು ಅನುಷ್ಠಾನಕ್ಕೆ ವಿಳಂಬ ನೀತಿ

Published On :

ಕ.ಪ್ರ.ವಾರ್ತೆ    ಶಿವಮೊಗ್ಗ    ಜ. 18
ಸರ್ವೋಚ್ಚ ನ್ಯಾಯಾಲಯ ಅನುದಾನಿತ ನೌಕರರ ಪರವಾಗಿ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸುವಲ್ಲಿ ಅನುಸರಿಸುತ್ತಿರುವ ನೀತಿ ನ್ಯಾಯಾಂಗದ ವಿರುದ್ಧವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ. ಭಟ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಆಯೋಜಿಸಿದ್ದ ಅನುದಾನ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿದ ಇತ್ತೀಚಿನ ತೀರ್ಪು, ಸರ್ಕಾರ ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ನೀತಿ ವಿಷಯವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಂಗ ನಿಂದನೆ: ಇಂದಿನ ರಾಜಕಾರಣಿಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಸರ್ಕಾರದ ಅಧಿಕಾರಿಗಳಿಗೆ ತಮ್ಮ ಕೆಲಸ ನಿರ್ವಹಿಸುವ ತವಕ ಇಲ್ಲದೆ ಇರುವುದು ಇಂತಹ ನ್ಯಾಯಾಂಗ ನಿಂದನೆಯಂಥ ಕೆಲಸಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಉದ್ಧಟತನ: ನ್ಯಾಯಾಲಯ ಒಬ್ಬ ವ್ಯಕ್ತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದರೂ ಅದು ಇಡೀ ಸಮಾಜಕ್ಕೆ ಅನ್ವಯಿಸುತ್ತದೆ ಎಂಬುದನ್ನು ಸರ್ಕಾರ, ಅಧಿಕಾರಿಗಳು ರಾಜಕಾರಣಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶ ನೋಡಿದರೆ ಅಧಿಕಾರಿಗಳ ಸೋಮಾರಿತನ, ಉದ್ಧಟತನದ ಪರಮಾವಧಿ ಗೋಚರವಾಗುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಸರ್ಕಾರ ಜಾಣ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ತಿಳಿಸಿದರು.
ತಾರತಮ್ಯ: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಮಾತನಾಡಿ, ರಾಜ್ಯದಲ್ಲಿ ಅನುದಾನಿತ ಸಂಸ್ಥೆಗಳು ಮಲತಾಯಿ ಧೋರಣೆ ಅನುಭವಿಸುವಂತಾಗಿದೆ. ಸರ್ಕಾರಿ ಹಾಗೂ ಅನುದಾನಿತ ನೌಕರರ ನಡುವೆ ಸರ್ಕಾರದಿಂದ ಇನ್ನಿಲ್ಲದ ತಾರತಮ್ಯವಾಗುತ್ತಿದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಘ ಸಂಬಂಧಿಸಿದವರ ಜತೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಡಾ. ಕೆ.ಎಚ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ, ಅನುದಾನಿತ ನೌಕರರರು ಸಂಘದ ಸದಸ್ಯತ್ವ ಪಡೆದು ಸಂಘವನ್ನು ಬಲಪಡಿಸಬೇಕು. ಸಮಸ್ಯೆ ಪರಿಹರಿಸಿಕೊಳ್ಳಲು ಸಹಕರಿಸಬೇಕು ಎಂದು ವಿನಂತಿಸಿದರು.
ಗೌರವಾಧ್ಯಕ್ಷ ಡಾ. ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಚಾಲಕ ಅಮೀರಜಾನ್, ಖಜಾಂಚಿ ಯೋಗೀಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ.ಎಲ್. ಭೋಜರಾಜ್, ಮಂಜುನಾಥ್, ಸತೀಶ್, ಮರುಳುಸಿದ್ಧಾರಾದ್ಯ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.