ಪ್ರೊ. ಶಂಕರ ಬಟ್ಟಗೆ ಪಂಪ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜ.20
ಕನ್ನಡಕ್ಕೆ ಹೊಸ ಭಾಷೆಯನ್ನು ಕೊಟ್ಟ, ಹೊಸ ವ್ಯಾಕರಣವನ್ನೇ ನೀಡಿದ ಪ್ರೊ. ಡಿ.ಎನ್. ಶಂಕರ ಬಟ್ಟ ಅವರಿಗೆ ಸಾಗರ ತಾಲೂಕಿನ ಮುಂಗಾರುವಳ್ಳಿ ಗ್ರಾಮದಲ್ಲಿರುವ ಅವರ ಮನೆಯಲ್ಲಿಯೇ ನಡೆದ ಸರಳ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ 25ನೇ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಶಂಕರ ಬಟ್ ಅವರು ಮಾತನಾಡಿ, 'ನಾನು ಹಲವು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೆಚ್ಚಿಗೆ ಭಾಷಣ ಮಾಡಲು ಬರುವುದಿಲ್ಲ. ಕ್ಷಮಿಸಿ ಎಂದಷ್ಟೇ ಹೇಳಿ' ಮಾತು ಮುಗಿಸಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿ'ಸೋಜಾ ಮಾತನಾಡಿ, 'ಶಂಕರ ಬಟ್ಟ ಅವರು ಪುತ್ತೂರಿನವರಾದರೂ ಮಲೆನಾಡಿಗೆ ಬಹುದೊಡ್ಡ ಗೌರವ ತಂದುಕೊಟ್ಟಿದ್ದಾರೆ. ಭಾಷೆ ತನ್ನದೇ ಆದ ವಿಶೇಷತೆ, ವಿಸ್ಮಯ, ವಿಚಿತ್ರ ಇಟ್ಟುಕೊಂಡ ಒಂದು ಸಾಧನ. ಒಂದೊಂದು ಶಬ್ದ ಹೇಳಿದಾಗ ಮನಸಿನಲ್ಲಿ ಭಾವನೆ ಹುಟ್ಟುತ್ತದೆ. ಇಂತಹ ಭಾಷೆಯ ಬಗ್ಗೆ ಅಧ್ಯಯನಶೀಲರಾಗಿರುವುದು ಶ್ಲಾಘನೀಯ' ಎಂದರು.
ರಂಗಕರ್ಮಿ ಕೆ.ವಿ. ಅಕ್ಷರ, ಶಂಕರ ಬಟ್ಟ ಅವರು ಮಾತನಾಡಿ, 'ಋಷಿ ಸದೃಶ ವ್ಯಕ್ತಿತ್ವ. ಅವರೆಂದಿಗೂ ನಮಗೆ ಧರ್ಮ ಮತ್ತು ನೀತಿಯ ಬಗ್ಗೆ ಹೇಳಲಿಲ್ಲ. ಭಾಷೆಯ ವಿಚಾರ ಹೇಳುತ್ತಾ ಬಂದರು. ಹೇಗೆ ಬದುಕಬೇಕು ಎಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ. ಅವರ ಜೀವನ ಶೈಲಿಯೇ ಒಂದು ಮಾದರಿ. ಇವತ್ತಿನ ಪರಿಸ್ಥಿತಿಯಲ್ಲಿ ವಾನಪ್ರಸ್ಥ ಹೇಗಿರಬೇಕು ಎಂಬುದು ಅವರು ತೋರಿಸಿಕೊಟ್ಟಿದ್ದಾರೆ' ಎಂದರು.
ನಾಡಿಗೇ ಗೌರವ: ಸಚಿವೆ ಉಮಾಶ್ರೀ ಮಾತನಾಡಿ, ಸದ್ದುಗದ್ದಲವಿಲ್ದೇ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದ ಶಂಕರ ಬಟ್ಟ ಅವರು ಪ್ರಶಸ್ತಿ ಸ್ವೀಕರಿಸಿ ನಾಡಿನ ಗೌರವ ಹೆಚ್ಚಿದ್ದಾರೆ. ಸದ್ದು ಮಾಡಿ ಪ್ರಶಸ್ತಿ ಪಡೆಯುವವರಿದ್ದಾರೆ. ಆದರೆ ಕೆಲವರನ್ನು ಸದ್ದು ಮಾಡದೇ ಪ್ರಶಸ್ತಿಗಳು ಬರುತ್ತವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

