ನಿರ್ಣಯ ಪರಿಶೀಲಿಸ್ತೀವಿ ಅಂದ್ರು ಉಮಾಶ್ರೀ...
ವಿಶೇಷ ವರದಿ
ಶಿವಮೊಗ್ಗ: ಕೊಡಗಿನಲ್ಲಿ ಇತ್ತೀಚಿಗಷ್ಟೇ ಮುಗಿದ 80ನೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು, ಅಲ್ಲಿ ಮಾಡಿದ ಕನ್ನಡಪರ ಚರ್ಚೆಗಳು ಹೊಳೆಗೆ ಹುಣಸೆಹಣ್ಣು ಹಿಂಡಿದಂತೆಯೇ ಎಂಬ ಜಿಜ್ಞಾಸೆ ಕಾಡಲಾರಂಭಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಹೇಳಿಕೆ ಈ ಊಹಾಪೋಹಕ್ಕೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ, ಅಲ್ಲಿ ಕೈಗೊಂಡ ನಿರ್ಣಗಳು, ಅಲ್ಲಾದ ಚರ್ಚೆಯ ಬಗ್ಗೆ ಸಚಿವರು ಬಹಿರಂಗವಾಗಿ ಉದಾಸೀನ ತೋರ್ಪಡಿಸಿದ್ದು, ತಮಗೂ ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧವೇ ಇಲ್ಲ ಎಂಬಂತೆ ಮಾತನಾಡಿದ್ದಾರೆ.
ಘಟನೆ ಹೀಗೆ ನಡೆಯಿತು. ಸೋಮವಾರ ಸಾಗರ ತಾಲೂಕು ಮುಂಗರವಳ್ಳಿಯಲ್ಲಿ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಇದಾದ ನಂತರ ಪತ್ರಕರ್ತರು ಸಚಿವ ಉಮಾಶ್ರೀಯವರನ್ನು ಪ್ರಶ್ನೆಗಳೊಂದಿಗೆ ಮುತ್ತಿದರು. ಹೀಗೆ ಪ್ರಶ್ನೋತ್ತರ ನಡೆಯುತ್ತಿದ್ದ ವೇಳೆ ಅಂತಿಮ ಹಂತದಲ್ಲಿ ಕನ್ನಡ ಸಾಹಿತ್ಯ ವಿಚಾರದ ಪ್ರಶ್ನೆಗಳು ತೂರಿಬಂದವು.
ಹೀಗಿತ್ತು ಪ್ರಶ್ನೆ. ಸಚಿವರೇ, ಕನ್ನಡ ಭಾಷೆ ಕುರಿತಾಗಿನ ವರದಿಗಳು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಕಥೆ ಏನು? ಅವು ಅನುಷ್ಠನಾನವಾಗುತ್ತಿಲ್ಲ ಏಕೆ?
ಈ ಪ್ರಶ್ನೆ ಬರುತ್ತಿದ್ದಂತೆ ಮುಖಹುಳ್ಳಗೆ ಮಾಡಿಕೊಂಡ ಸಚಿವರು, ಈ ಪ್ರಶ್ನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೇ ಕೇಳಿ ಎಂದು ಉತ್ತರಿಸಿದರು.
ಈ ಪ್ರಶ್ನೋತ್ತರ ಇಷ್ಟಕ್ಕೆ ಸೀಮಿತವಾಗಲಿಲ್ಲ. ಕೊಡಗು ಸಾಹಿತ್ಯ ಸಮ್ಮೇಳನಕ್ಕೆ ಮುಂಚಿತವಾಗಿ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಸರ್ಕಾರಕ್ಕೆ ಕೋರಿಕೆಯೊಂದನ್ನು ಮುಂದಿಟ್ಟಿದ್ದರು. ಸರ್ಕಾರ ಸಮ್ಮೇಳನಕ್ಕೆ ದುಡ್ಡು ಕೊಟ್ಟರೆ ಸಾಲದು, ಸಮ್ಮೇಳನದಲ್ಲಿ ಕನ್ನಡ ಭಾಷೆ, ನಾಡು ನುಡಿಯ ಬಗ್ಗೆ ವಿಷಯಗಳು ಚರ್ಚೆಗೆ ಬರುತ್ತವೆ. ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಈ ವಿಚಾರಗಳು ಸರ್ಕಾರದ ಗಮನಕ್ಕೆ ಬರಬೇಕು, ಹೀಗಾಗಿ ಅಧಿಕಾರಿಯೊಬ್ಬರನ್ನು ನೇಮಿಸಿ ದಾಖಲೀಕರಣ ಮಾಡುವಂತೆ ಸಲಹೆ ನೀಡಿದ್ದರು.
ಈ ವಿಚಾರ ಸಚಿವರ ಮುಂದೆ ಬಂತು. ಅದಕ್ಕವರು ಮುಂದೆ ಪರಿಶೀಲಿಸೋಣ ಎಂದು ಉದಾಸೀನವಾಗಿ ಉತ್ತರ ನೀಡಿದರು. ಈ ಸಂದರ್ಭಕ್ಕೆ ಸಾಕ್ಷಿಯಾದವರು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ.ಡಿಸೋಜ ಅವರು ಉಮಾಶ್ರೀಯವರ ಪಕ್ಕದಲ್ಲಿಯೇ ಆಸೀನರಾಗಿದ್ದರು.
ಇಷ್ಟಾದ ಮೇಲೆ ಸೀಟಿನಿಂದ ಮೇಲೆದ್ದು ಉಮಾಶ್ರೀಯವರು ಹೊರಟುನಿಂತರು. ಈ ಘಟನೆ ಕುರಿತು ಒಂದಿನಿತು ನಾ.ಡಿಸೋಜ ಅವರು ಪ್ರತಿಕ್ರಿಯಿಸದೇ ಹೋದರು. ಕೈ ಸನ್ನೆ ಮೂಲಕವೇ ವ್ಯವಸ್ಥೆಯೇ ಇಷ್ಟೆಂಬಂತೆ ನಿಧಾನವಾಗಿ ಹೆಜ್ಜೆ ಮುಂದಿಟ್ಟರು. ಆದರೆ ಅಲ್ಲೇ ಇದ್ದ ಸಾಹಿತ್ಯಾಭಿಮಾನಿಗಳು ಮಾತ್ರ ಉಮಾಶ್ರೀಯವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

