ಸ್ಲಂ ಸೃಷ್ಟಿಗೆ ಕಾಂಗ್ರೆಸ್ ಕಾರಣ: ನಾಗೇಂದ್ರ
ಕ.ಪ್ರ.ವಾರ್ತೆ ಶಿವಮೊಗ್ಗ ಜ.21
60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾವೇ ರಾಜ್ಯದಲ್ಲಿರುವ ಸ್ಲಂಗಳ ರೂವಾರಿ. ಸ್ಲಂ ಸೃಷ್ಟಿಗೆ ಕಾರಣವಾದ ಸರ್ಕಾರ ಅಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮಾತ್ರ ನಿರ್ಲಕ್ಷ್ಯತೋರಿಸಿತು ಎಂದು ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಅಧ್ಯಕ್ಷ ನಾಗೇಂದ್ರ ಟೀಕಿಸಿದ್ದಾರೆ.
ಬಿಜೆಪಿ ಸ್ಲಂ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟನೆ ನಂತರ ಮಾತನಾಡಿದ ಅವರು, ಸ್ಲಂ ಸೃಷ್ಟಿಸಿದ ಕಾಂಗ್ರೆಸ್ ಸರ್ಕಾರ ಅಲ್ಲಿನ ಜನರಿಗೆ ನಿವೇಶನ, ಸೂರು ಕೊಟ್ಟಿದ್ದರೆ ಸ್ಲಂ ಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ವೇದಿಕೆಗಳಲ್ಲಿ ಪದೇ ಪದೆ ಸಾಮಾಜಿಕ ನ್ಯಾಯ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಸ್ಲಂ ಅಭಿವೃದ್ಧಿಗೆ ಇಟ್ಟಿರುವ ಹಣದಲ್ಲಿ ಅರ್ಧದಷ್ಟು ಅಧಿಕಾರಿಗಳ ಸಂಬಳ, ಭತ್ಯೆ, ಸಾರಿಗೆಗೇ ಸಾಕು. ಇದು ಅವರ ಸಾಮಾಜಿಕ ನ್ಯಾಯದ ಕಳಕಳಿಯನ್ನು ತೋರಿಸುತ್ತದೆ ಎಂದು ಟೀಕಿಸಿದ ನಾಗೇಂದ್ರ, ಮುಂದಿನ ಬಜೆಟ್ನಲ್ಲಾದರೂ ಸ್ಲಂಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ತೆಗೆದಿರಿಸಲಿ ಎಂದು ತಿಳಿಸಿದರು.
ನೂಲ ಸೌಕರ್ಯ ಕಲ್ಪಿಸಲು ಹೋರಾಟ: ರಾಜ್ಯದಲ್ಲಿ 2972 ಸ್ಲಂಗಳಿವೆ. ಅದರಲ್ಲಿ 2500 ಸ್ಲಂಗಳನ್ನು ಸರ್ಕಾರ ಘೋಷಣೆ ಮಾಡಿದ್ದು, ಇನ್ನೂ 400 ಸಂಖ್ಯೆಯ ಸ್ಲಂಗಳನ್ನು ಘೋಷಿಸಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಸ್ಲಂ ಘೋಷಣೆಯಾದಲ್ಲೂ ಮೂಲ ಸೌಕರ್ಯ ಕೊಡುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸ್ಲಂ ಮೋರ್ಚಾ ಹೋರಾಟ ನಡೆಸಲಿದೆ ಎಂದರು.
ಸರ್ಕಾರ ಮಲಗಿದೆಯೇ? ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ಹಿಂದಿನ ಸರ್ಕಾರಗಳಿಗೆ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಕೊಡಲು ಸಾಧ್ಯವಾಗಿರಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಅಗತ್ಯ ಕಾಯ್ದೆ ರೂಪಿಸಿ ಹಕ್ಕುಪತ್ರ ಕೊಡುವ ಪ್ರಕ್ರಿಯೆ ನಡೆದಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಒಂದೇ ಒಂದು ಕುಟುಂಬಕ್ಕೆ ಹಕ್ಕುಪತ್ರ ಕೊಡಲಿಲ್ಲ. ಸರ್ಕಾರ ಮಲಗಿದೆಯೇ ಎಂದು ಕೇಳುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಹಕ್ಕುಪತ್ರ ಕೊಟ್ಟಿರುವ ಕಡೆಗಳಲ್ಲೂ ಸರ್ಕಾರ ಮೂಲ ಸೌಕರ್ಯ ಕಲ್ಪಿಸಲು ಮನಸ್ಸು ಮಾಡಿಲ್ಲ, ಖಾತೆ ಮಾಡಿಕೊಟ್ಟಿಲ್ಲ, ಖಾತೆ ಆಗಿರುವ ಕಡೆ ಮನೆ ಕೊಟ್ಟಿಲ್ಲ. ಹಾಗಿದ್ದರೆ ಸರ್ಕಾರದ ಕೆಲಸವೇನು ಎಂದು ಪ್ರಶ್ನಿಸಿದರು.
ಹೋರಾಟ: ಈಗಲೂ ಹಿಂದುಳಿದವರ ಪರ, ದಲಿತರ ಪರ, ಅಲ್ಪಸಂಖ್ಯಾತರ ಎಂದು ಮಾತಿನಲ್ಲೇ ಸರ್ಕಾರ ನಡೆದಿದೆ. ಅವರು ಮಾತನಾಡುತ್ತಲೇ ಇರಲಿ. ಬಡವರಿಗೆ ಸಾಮಾನ್ಯ ಸೌಲಭ್ಯವನ್ನು ಕೊಡಿಸುವ ದಿಕ್ಕಿನಲ್ಲಿ ಬಿಜೆಪಿ ಮುನ್ನಡೆಯುತ್ತದೆ, ಓಟು ಕೇಳಲಷ್ಟೇ ಸ್ಲಂ ಮೋರ್ಚಾ ಬೇಡ. ಅಲ್ಲಿನ ಸಮಸ್ಯೆಗಳ ಪರಿಹಾರ ಮಾಡಬೇಕಾಗಿದೆ. ಪರಿಹಾರ ಆಗುವವರೆಗೂ ಹೋರಾಟ ಮಾಡೋಣ. ಅವರ ಸಮಸ್ಯೆ ಬಗೆಹರಿಸೋಣ ಎಂದು ಕರೆ ನೀಡಿದರು.
ಸ್ಲಂ ಮೋರ್ಚಾ ಮುಖಂಡರಾದ ರಾಮಮೂರ್ತಿ, ಪರಂಧಾಮ ರೆಡ್ಡಿ, ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಶಶಿಧರ್, ಸ್ಲಂ ಮೋರ್ಚಾ ಪ್ರಭಾರಿ ಎಂ. ಶಂಕರ್, ವೆಂಕಟೇಶ್ ಮತ್ತಿತರರು ಇದ್ದರು.
ಮಂತ್ರಿ ಸ್ಥಾನವೇಕೆ?
ವಸತಿ ಸಚಿವ ಅಂಬರೀಷ್ ಅವರೇ, ಬಡವರಿಗೆ ಮನೆ ಕಟ್ಟಿಸಿಕೊಡಲಾಗಲ್ಲ ಎಂದು ಏಕೆ ಕೈಚೆಲ್ಲಿ ಕುಳಿತುಕೊಳ್ಳುತ್ತೀರಾ, ನಿಮಗೆ ಸರ್ಕಾರದಿಂದ ಅಗತ್ಯವಾದಷ್ಟು ಹಣ ತರುವ ಶಕ್ತಿ ಇದ್ದರೆ ಮಂತ್ರಿಯಾಗಿ ಮುಂದುವರಿಯಿರಿ, ಇಲ್ಲವಾದರೆ ಏಕೆ ಮುಂದುವರಿಯುತ್ತೀರಾ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಅಗತ್ಯವಾದಷ್ಟು ಹಣ ತಂದು ಬಡವರಿಗೆ ಮನೆಕೊಡಲಾಗಲಿಲ್ಲ ಎಂದಾದರೆ ನಿಮಗೂ ಕೆಟ್ಟ ಹೆಸರು, ಬಡವರಿಗೂ ಸಂಕಷ್ಟ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

