ಇನ್ನು ವಿಷಾಣು ನಾಶ ಕಾರ್ಯಾಚರಣೆ!
ವಿಶೇಷ ವರದಿ
ಶಿವಮೊಗ್ಗ: ವ್ಯಾಪಕ ಪೋಲಿಯೊ ಲಸಿಕಾ ಅಭಿಯಾನದ ಮೂಲಕ ಪೋಲಿಯೊ ವ್ಯಾಧಿಗ್ರಸ್ತ ರಾಷ್ಟ್ರಗಳ ಪಟ್ಟಿಯಿಂದ ಭಾರತ ಹೊರಬಂದಿದೆ. ಆದರೆ, ಲ್ಯಾಬ್ಗಳಲ್ಲಿರುವ ಪೋಲಿಯೊ ವಿಷಾಣುವನ್ನು ನಾಶ ಮಾಡುವ ಕಾರ್ಯಾಚರಣೆ ರಾಜ್ಯದಲ್ಲಿ ಇದೀಗ ಆರಂಭವಾಗಿದೆ!
ಪೋಲಿಯೊ ಸಂಪೂರ್ಣ ನಿರ್ಮೂಲನೆ ದೃಢೀಕರಣ ಪತ್ರ ಪಡೆಯಲು ಎಲ್ಲಾ ಜೀವ ವೈದ್ಯಕೀಯ ಪ್ರಯೋಗಶಾಲೆಯಲ್ಲಿ ಇರಬಹುದಾದ ವೈಲ್ಡ್ ಪೋಲಿಯೊ ವಿಷಾಣುಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ಸಂಬಂಧ ರಾಜ್ಯದಲ್ಲಿ ಕಾರ್ಯಪಡೆ ರಚಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ನಿರ್ದೇಶನ ನೀಡಿತ್ತು. ಅದರಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾರ್ಯಪಡೆ ರಚನೆಯಾಗಿದ್ದು, ಕಾರ್ಯಾಚರಣೆ ಆರಂಭವಾಗಿದೆ.
ರಾಜ್ಯಮಟ್ಟದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪಶುಸಂಗೋಪನೆ, ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರಿರುವ 26 ಸದಸ್ಯರಿರುವ ಸಮಿತಿ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆ ರಚನೆಯಾಗಿದ್ದು, ಅದರಲ್ಲಿ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಖಾಸಗಿ ನರ್ಸಿಂಗ್ ಹೋಮ್- ಆಸ್ಪತ್ರೆಗಳ ಸಂಘದ ಅಧ್ಯಕ್ಷರು, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು, ಜಿಲ್ಲಾ ರೋಟರಿ, ಸ್ವಯಂಸೇವಾ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆಯಾಗುತ್ತಿದೆ.
ಏಕಾಗಿ ಈ ಕ್ರಮ?
ವಿಶ್ವಸಂಸ್ಥೆಯ ವರದಿಯಂತೆ ಈಗಾಗಲೇ ಪೋಲಿಯೊ ವ್ಯಾಧಿಗ್ರಸ್ತ ದೇಶಗಳ ಪಟ್ಟಿಯಿಂದ ಭಾರತ ಹೊರತಾಗಿದೆ. ಆದರೆ, ಭಾರತ ಹಾಗೂ ಏಷ್ಯಾ ದೇಶಗಳು ಪೋಲಿಯೊ ಸಂಪೂರ್ಣ ನಿರ್ಮೂಲನೆಯ ದೃಢೀಕರಣ ಪತ್ರ ಪಡೆಯಲು ಎಲ್ಲಾ ಜೀವ ವೈದ್ಯಕೀಯ ಪ್ರಯೋಗ ಶಾಲೆಗಳಲ್ಲಿ ಇರಬಹುದಾದ ವೈಲ್ಡ್ ಪೋಲಿಯೊ ವಿಷಾಣು ಸಂಪೂರ್ಣ ನಿರ್ಮೂಲನೆಗಳಿಸಬೇಕಾಗುತ್ತದೆ. ಈ ಕೆಲಸವಾದಲ್ಲಿ ಮಾತ್ರ ಪೋಲಿಯೊ ನಿರ್ಮೂಲನೆ ಪತ್ರ ಪಡೆಯಲು ಸಾಧ್ಯ.
ಕಾರ್ಯಾಚರಣೆ
ಎಲ್ಲಾ ಜೀವ ವೈದ್ಯಕೀಯ ಪ್ರಯೋಗಾಲಯಗಳ ಪಟ್ಟಿ ಸಿದ್ಧಪಡಿಸಿ, ನಂತರ ವೈಲ್ಡ್ ಪೋಲಿಯೊ ವೈರಸ್ ಹಾಗೂ ಸಂಭಾವಿತ ಸೋಂಕು ತಗುಲಿದ ವಸ್ತುಗಳನ್ನು ಶೇಖರಿಸಿಟ್ಟಿರುವ ಪ್ರಯೋಗಾಲಯಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗುತ್ತದೆ. ಅಂತಹ ಪ್ರಯೋಗಾಲಯಗಳಲ್ಲಿನ ಎಲ್ಲಾ ಡೀಪ್ ಫ್ರೀಜರ್, ಮಂಜು ಕೋಣೆಗಳನ್ನು ತಪಾಸಣೆ ನಡೆಸಿ ನಾಶಪಡಿಸಬೇಕಾಗುತ್ತದೆ. ಸಂಶೋಧನೆಗಳಿಗೆ ಅಗತ್ಯವಿರುವ ವೈಲ್ಡ್ ಪೋಲಿಯೊ ವೈರಸ್ ಸೋಂಕಿತ ಸ್ಯಾಂಪಲ್ಗಳನ್ನು ಅತ್ಯಂತ ಎಚ್ಚರಿಕೆಯಿಂದ ಕಟ್ಟುನಿಟ್ಟಾದ ಬಯೋ- ಸುರಕ್ಷಾ ಹಂತ-2 ಪ್ರಯೋಗಾಲಯ ಕ್ರಮ ಅನುಸರಿಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಎಲ್ಲೆಲ್ಲಿ ಪರಿಶೀಲನೆ?
ವೈದ್ಯಕೀಯ ಮಹಾವಿದ್ಯಾಲಯ(ಖಾಸಗಿ ಮತ್ತು ಸರ್ಕಾರಿ), ಸಂಶೋಧನಾ ಕೇಂದ್ರ ಅಥವಾ ಸಂಸ್ಥೆಗಳು (ಸರ್ಕಾರಿ, ಖಾಸಗಿ), ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು (ವೈರೋಲಜಿ, ಮೈಕ್ರೋ ಬಯಾಲಜಿ, ಬಯೋ ಟೆಕ್ನಾಲಜಿ, ಬಯೋ ಕೆಮಿಸ್ಟ್ರಿ, ಮಾಲೆಕ್ಯೂಲರ್ ಬಯೋಲಜಿ, ಜೀವ ವಿಜ್ಞಾನ, ಪರಿಸರ ವಿಜ್ಞಾನ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಕೋರ್ಸುಗಳಿರುವ ವಿವಿ ಮತ್ತು ಕಾಲೇಜುಗಳು), ಡಯಾಗ್ನಸ್ಟಿಕ್ ಲ್ಯಾಬೊರೇಟರಿ (ಆಸ್ಪತ್ರೆಗಳು ಮತ್ತು ಖಾಸಗಿ ಪೆಥೋಲಜಿ ಲ್ಯಾಬ್ಗಳು), ಪರೀಕ್ಷಾ ಪ್ರಯೋಗ ಶಾಲೆಗಳು (ಆಹಾರ ಮತ್ತು ನೀರಿನ ಪರೀಕ್ಷೆ, ಜೀವ ನಿಯಂತ್ರಣ ಲ್ಯಾಬ್, ನೀರು ಶುದ್ದೀಕರಣ, ಸೋಂಕು ನಿವಾರಕಗಳ ಉಪಕರಣಗಳ ಪರೀಕ್ಷೆ, ಪಬ್ಲಿಕ್ ಹೆಲ್ತ್ ಲ್ಯಾಬ್), ವ್ಯಾಕ್ಸಿನ್, ಔಷಧಿಗಳ ತಯಾರಕರು ಹಾಗೂ ಪಶು ವೈದ್ಯ ಸಂಸ್ಥೆಗಳಲ್ಲಿರುವ ಪ್ರಯೋಗ ಶಾಲೆಗಳಲ್ಲಿ ಪರಿಶೀಲನೆ ಕಾರ್ಯ ನಡೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

