ಮತದಾನದಿಂದ ಪ್ರಜಾಪ್ರಭುತ್ವ ಮೌಲ್ಯ ರಕ್ಷಿಸಿ
ಕ.ಪ್ರ.ವಾರ್ತೆ , ಸಾಗರ , ಜ.27
ಯುವಜನಾಂಗ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಬೇಕು ಎಂದು ನ್ಯಾಯಾಧೀಶರಾದ ಕೆ.ಜಿ.ಶಾಂತ ಹೇಳಿದರು.
ತಾಲೂಕು ಆಡಳಿತದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಯುವ ಮತದಾರರಿಗೆ ಗುರುತಿನ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಯುವಜನಾಂಗ ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಸಮಾಜವನ್ನು ಪ್ರತಿನಿಧಿಸುವ ಅರ್ಹ ಜನಪ್ರತಿನಿಧಿಯನ್ನು ಮತದ ಮೂಲಕ ಆಯ್ಕೆ ಮಾಡಿ ಸಮಾಜದ ಋಣ ತೀರಿಸುವ ಕೆಲಸ ನಿಮ್ಮಿಂದ ಆಗಬೇಕು. ಮತದಾನ ಮಾಡುವುದು ನಿಮ್ಮ ಕರ್ತವ್ಯ ಎಂದು ಭಾವಿಸದೆ ಹಕ್ಕು ಎಂದು ತಿಳಿದುಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮತದಾನದ ಆಸಕ್ತಿ ಕಡಿಮೆಯಾಗುತ್ತಿದೆ. ಹಿರಿಯರು ಮತದಾನದ ಬಗ್ಗೆ ತೋರಿದಷ್ಟು ಒಲವನ್ನು ಯುವಜನರು ತೋರಿಸುತ್ತಿಲ್ಲ. ಮತದಾನದ ದಿನ ಪಾರ್ಕ್, ಸಿನಿಮಾ ಮಂದಿರ ಹಾಗೂ ಶಾಪಿಂಗ್ ಮಾಲ್ನಲ್ಲಿ ಇರುವಷ್ಟು ಯುವ ಮತದಾರರು ಮತಗಟ್ಟೆಗಳ ಬಳಿ ಇರುವುದಿಲ್ಲ. ಇಂತಹ ಪ್ರವೃತ್ತಿ ಬದಲಾಗಬೇಕು. ನಗರಗಳಲ್ಲಿ ಮತದಾನದ ಸಂಖ್ಯೆ ಹೆಚ್ಚಬೇಕು. ಈ ಹಿನ್ನೆಲೆಯಲ್ಲಿ ಮತದಾರರ ದಿನಾಚರಣೆ ಅತ್ಯಂತ ಪ್ರಮುಖವಾದದ್ದು ಎಂದರು.
ವಿಶೇಷ ಉಪನ್ಯಾಸ ನೀಡಿದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ. ಎ.ಗಣೇಶ ಭಟ್, ಹಣ ಪಡೆದು ಮತ ಚಲಾವಣೆ ಮಾಡುವುದು ಹಾಗೂ ಮತ ಚಲಾವಣೆ ಮಾಡದೆ ಇರುವುದು ದುರಂತದ ಪರಮಾವಧಿ. ಪೌರತ್ವ ಪ್ರಜಾಪ್ರಭುತ್ವದ ಸಂಕೇತ. ಯುವಜನರಿಗೆ ಸಾಮಾಜಿಕ, ವೈಯಕ್ತಿಕ ಜವಾಬ್ದಾರಿ ಇದ್ದಂತೆ. ಮತದಾನ ಮಾಡುವುದು ನಮ್ಮ ಪರಮಹಕ್ಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮತದಾರ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ದೇಶವು ನಮಗೆ ನಾವು ಈ ದೇಶವಾಸಿಗಳು ಎಂದು ಪ್ರತಿಪಾದಿಸುವ ಮತದಾನದಂತಹ ಪವಿತ್ರವಾದ ಹಕ್ಕು ನೀಡಿದೆ. ಮತದಾನದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಆಸೆಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ, ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯಬೇಕಾದ ಹೊಣೆಗಾರಿಕೆ ಯುವ ಮತದಾರರ ಮೇಲೆ ಇದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಡಿ. ರೇವಣಕರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸನ್ನ, ಎಲ್.ಬಿ. ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಸಿ. ಶಶಿಧರ್, ತಹಸೀಲ್ದಾರ್ ಸಜಿದ್ ಅಹ್ಮದ್ ಮುಲ್ಲಾ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

