ಶಿವಮೊಗ್ಗ

ಭದ್ರಾವತಿ ಡಿಪೋದಲ್ಲಿ ಡೀಸೆಲ್ ಗೋಲ್‌ಮಾಲ್

Published On :

ಶಿವಮೊಗ್ಗ: ಸಿಬ್ಬಂದಿಗೆ ಕಿರುಕುಳ ನೀಡಿ ಹಿಂಡಿಹಿಪ್ಪೆ ಮಾಡುವ ಕೆಎಸ್ಸಾರ್ಟಿಸಿ ಅಧಿಕಾರಿಗಳು ಈಗ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಭಾರಿ ಖೆಡ್ಡಾವೊಂದಕ್ಕೆ ಬಿದ್ದಿದ್ದಾರೆ.
ಭದ್ರಾವತಿ ಡಿಪೋದಲ್ಲಿ ಭಾರಿ ಡೀಸೆಲ್ ಹಗರಣವೊಂದು ಬೆಳಕಿಗೆ ಬಂದಿದ್ದು, ಕೆಎಸ್ಸಾರ್ಟಿಸಿ ಆಂತರಿಕ ತನಿಖೆ ಆರಂಭಿಸಿದೆ.
ಏನಿದು ಹಗರಣ?: ಇಲ್ಲಿನ ಡಿಪೋದ ಬಸ್‌ಗೆ ಬಳಸುವ ಡೀಸೆಲ್‌ನಲ್ಲಿ ವಂಚನೆ ನಡೆದಿದೆ. ವಾಸ್ತವವಾಗಿ ಪ್ರತಿ ಬಸ್‌ಗೆ ಬಳಸಿಕೊಳ್ಳುವ ಇಂಧನ ಬೇರೆಯಾಗಿದ್ದು, ಅಧಿಕಾರಿಗಳು ಬೇರೆ ಲೆಕ್ಕ ತೋರಿಸಿ ವಂಚಿಸಿದ್ದಾರೆ. ಕಳೆದ ಮೂರು ತಿಂಗಳಿಂದೀಚೆಗೆ ಈ ಪ್ರಮಾಣ ಅಧಿಕವಾಗಿದ್ದು, ಈ ಸಂಬಂಧ ಅಧಿಕೃತ ದಾಖಲೆಗಳು ಸಹ ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಗಳಿಗೆ ಲಭ್ಯವಾಗಿದೆ. ಇದರ ಆಧಾರದ ಮೇಲೆ ತನಿಖೆ ಆರಂಭವಾಗಿದೆ.
ಹೇಗೆ ನಡೆಯುತ್ತದೆ ವಂಚನೆ?: ಪ್ರತಿ ಬಸ್‌ಗಳು ನಿತ್ಯ ಸಂಚಾರ ಮುಗಿಸಿದ ನಂತರ ಡೀಸೆಲ್ ತುಂಬಿಸಿಕೊಳ್ಳುವ ಪರಿಪಾಠವಿದೆ. ಹೀಗೆ ಡೀಸೆಲ್ ತುಂಬಿಸಿಕೊಂಡ ನಂತರ ಲಾಗ್‌ಶೀಟ್‌ನಲ್ಲಿ ನಮೂದಿಸಲಾಗುತ್ತದೆ. ಎಷ್ಟು ಡೀಸೆಲ್ ತುಂಬಿಸಲಾಯಿತು ಎಂದು ಶೀಟ್‌ನಲ್ಲಿ ದಾಖಲಿಸಲಾಗುತ್ತದೆ.
ನಂತರ ಲಾಗ್‌ಶೀಟ್‌ಗಳನ್ನು ಡಿಪೋಗೆ ಸಲ್ಲಿಸಲಾಗುತ್ತದೆ. ಇದು ಚಾಲಕನ ಕರ್ತವ್ಯ.
ಆದರೆ, ಭದ್ರಾವತಿ ಡಿಪೋದಲ್ಲಿ ಆಗಿದ್ದೇ ಬೇರೆ. ಪ್ರತಿ ನಿತ್ಯ ಚಾಲಕರು ಎಂದಿನಂತೆ ಡೀಸೆಲ್ ತುಂಬಿಸಿ ಲಾಗ್‌ಶೀಟ್ ನೀಡಿದ್ದಾರೆ. ಆದರೆ, ನಂತರ ಅಧಿಕಾರಿಗಳು ನಕಲಿ ಲಾಗ್ ಶೀಟ್‌ಗಳನ್ನೇ ಸೃಷ್ಟಿಸಿರುವ ಸಂಗತಿ ನಡೆದಿದೆ.
ವಂಚನೆ: ತಮ್ಮ ಲೆಕ್ಕಾಚಾರಕ್ಕೆ ತಕ್ಕಂತೆ ಲಾಗ್‌ಶೀಟ್ ಸೃಷ್ಟಿಸಿಕೊಂಡಿದ್ದಾರೆ. ನಿತ್ಯ ಸಂಚರಿಸುವ ಬಸ್‌ಗಳ ಟ್ರಿಪ್ ರದ್ದುಗೊಂಡಿದ್ದರೂ ಬಸ್ ಸಂಚಾರಗೊಂಡಿದೆ ಎಂದು ಲಾಗ್‌ಶೀಟ್‌ನಲ್ಲಿ ತೋರಿಸಿ ಡೀಸೆಲ್ ಬಾಬ್ತು ಹಣ ವಂಚಿಸಿದ್ದಾರೆ.
2000 ಲೀಟರ್ ವಂಚನೆ: ಉದಾಹರಣೆಗೆ, ಶಿವಮೊಗ್ಗ- ಭದ್ರಾವತಿ ನಡುವೆ ನಿತ್ಯ 8 ಟ್ರಿಪ್ ಮಾಡುವ ಬಸ್ ವಿವಿಧ ಕಾರಣಗಳಿಂದ 7 ಟ್ರಿಪ್‌ಗೆ ಸೀಮಿತಗೊಂಡಿರುತ್ತದೆ. ಬಸ್ ನಿರ್ವಾಹಕ 7 ಟ್ರಿಪ್ ಮಾಡಲಾಗಿದೆ, ಹೀಗಾಗಿ ಇಂತಿಷ್ಟೇ ಡೀಸೆಲ್ ಹಾಕಿಸಲಾಗಿದೆ ಎಂದು ವಿವರಣೆ ಸಹಿತ ಲಾಗ್ ಶೀಟ್‌ಅನ್ನು ಡಿಪೋ ಅಧಿಕಾರಿಗಳಿಗೆ ಸಲ್ಲಿಸುತ್ತಾನೆ. ಆದರೆ, ಅದನ್ನೆ ಬಂಡವಾಳ ಮಾಡಿಕೊಳ್ಳುವ ಅಧಿಕಾರಿಗಳು ಬಸ್ ಎಂಟು ಟ್ರಿಪ್ ಸಂಚರಿಸಿದೆ ಎಂದು ಲಾಗ್‌ಶೀಟ್ ಸೃಷ್ಟಿಸಿ ಒಂದು ಟ್ರಿಪ್‌ನ ಬಾಬ್ತು ಡೀಸೆಲ್ ಹಣ ನುಂಗಿದ್ದಾರೆ. ಒಂದು ಮಾಹಿತಿ ಪ್ರಕಾರ ಕೆಲವು ದಿನಗಳಲ್ಲಿ ನಿತ್ಯ 200 ಲೀಟರ್‌ವರೆಗೂ ವಂಚಿಸಿದ್ದಾರೆ. ಒಟ್ಟಾರೆ ಕಳೆದ 3 ತಿಂಗಳಲ್ಲಿ ಅಂದಾಜು 2000 ಲೀಟರ್ ವರೆಗೆ ವಂಚನೆಯಾಗಿದೆ ಎಂದು ಅಲ್ಲಿನ ಸಿಬ್ಬಂದಿ ಅಂದಾಜಿಸಿದ್ದಾರೆ.
ದಾಖಲೆ ಲಭ್ಯ: ಅಸಲಿ ಹಾಗೂ ನಕಲಿ ಲಾಗ್‌ಶೀಟ್‌ಗೆ ಸಂಬಂಧಪಟ್ಟ ದಾಖಲೆಗಳು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಗಳ ಕೈ ಸೇರಿದ್ದು, ತನಿಖೆ ಆರಂಭವಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ಅಧಿಕಾರಿಗಳ ತಂಡವು ವಂಚನೆಯ ಸತ್ಯಾಸತ್ಯತೆ ಪರಿಶೀಲನೆ ನಡೆಸಲಾರಂಭಿಸಿದ್ದಾರೆ.
ಮಾಸಿಕ ವಸೂಲಿ ನಿಂತಿಲ್ಲ
ಶಿವಮೊಗ್ಗ: ಶಿವಮೊಗ್ಗ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಚಾಲಕರಿಂದ ಮಾಸಿಕ ವಸೂಲಿ ನಿಂತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕನ್ನಡಪ್ರಭ ಕಚೇರಿಗೆ ಆಗಮಿಸಿದ್ದ ನಿರ್ವಾಹಕರ ತಂಡವೊಂದು ಮಾಹಿತಿ ನೀಡಿದ್ದು, ಓಲ್ವೋ ಬಸ್‌ನಲ್ಲಿ ಕಾರ್ಯನಿರ್ವಹಿಸಲು ಮಾಸಿಕ 500, ಎಕ್ಸ್‌ಪ್ರೆಸ್‌ಗೆ ಮಾಸಿಕ 300ಯಂತೆ ಅಧಿಕಾರಿಗಳಿಗೆ ಹಣ ನೀಡದೆ ಇದ್ದರೆ ಕೆಲವು ದೀರ್ಘ ಸಂಚಾರದ ಲೋಕಲ್ ಟ್ರಿಪ್‌ಗಳಿಗೆ ಶಿಕ್ಷೆ ರೂಪದಲ್ಲಿ ಕಳುಹಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ನಿಮಗೆ ಇಂತಹದ್ದೇ ಟ್ರಿಪ್ ಕೊಡಬೇಕೆಂದೇನು ಇಲ್ಲ. ಹಣ ಕೊಡಿ ನಿಮಗ್ಯಾವ ಟ್ರಿಪ್ ಬೇಕೋ ತಗೊಳ್ಳಿ ಎಂದು ಅಧಿಕಾರಿಗಳು ಬಹಿರಂಗವಾಗಿಯೇ ಹೇಳುತ್ತಾರೆ ಎಂದು ನಿರ್ವಾಹಕರು ಅಸಮಾಧಾನ ತೋಡಿಕೊಂಡರು.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.