ಶಿವಮೊಗ್ಗ

ಗೋಷ್ಠಿಗೆ ಅಧಿಕಾರಿಗಳ ಗೈರು

Published On :

ಕ.ಪ್ರ.ವಾರ್ತೆ , ಸಾಗರ , ಜ. 28
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ಗೋಷ್ಠಿಗೆ ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಪರಿಷತ್ತು ಮಕ್ಕಳಿಗೆ ಅಧಿಕಾರಿಗಳೊಂದಿಗೆ ಸಂವಾದಿಸುವ ವಿಶಿಷ್ಟ ಅವಕಾಶ ಕಲ್ಪಿಸಿತ್ತು. ಬಹುತೇಕ ಅಧಿಕಾರಿಗಳಿಲ್ಲದೆ ಇರುವಷ್ಟೇ ಅಧಿಕಾರಿಗಳು ಮಕ್ಕಳ ಪ್ರಶ್ನೆಗೆ ಉತ್ತರಿಸುವಂತಾಯಿತು.
ಸಭೆ ಸಮಾರಂಭದಲ್ಲಿ ಕನ್ನಡದ ಬಗ್ಗೆ ಮಾತನಾಡುವ ಎಷ್ಟು ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುತ್ತಿದ್ದಾರೆ ಎಂಬ ಗಂಭೀರ ಪ್ರಶ್ನೆಗೆ ತಹಸೀಲ್ದಾರ್ ಸಾಜಿದ್ ಅಹಮದ್‌ವುಲ್ಲಾ, ತಾವು ವೈಯಕ್ತಿಕವಾಗಿ ಕನ್ನಡ ಶಾಲೆಯಲ್ಲಿಯೇ ಕಲಿತಿದ್ದೇನೆ. ಪಿಯುಸಿ ಹಂತದಲ್ಲಿ ಇಂಗ್ಲಿಷ್ ಕಲಿತಿದ್ದರೂ ಈವರೆಗೆ ಯಾವುದೇ ತೊಂದರೆ ಬಾಧಿಸಲಿಲ್ಲ. ಈಗಲೂ ಮನೆಯಲ್ಲಿ ನನ್ನ ಮಕ್ಕಳ ಕನ್ನಡ ಪಠ್ಯ, ಕನ್ನಡ ಮನೆಗೆಲಸ ಪುಸ್ತಕವನ್ನೇ ದಿನವೂ ಪರಿಶೀಲಿಸುತ್ತೇನೆ. ಮಾತೃ ಭಾಷೆಯನ್ನು ಸರಿಯಾಗಿ ಕಲಿತರೆ ಇತರ ಯಾವ ಭಾಷೆಯನ್ನಾದರೂ ಅರ್ಥಮಾಡಿಕೊಳ್ಳಲು, ಕಲಿಯಲು ಸಾಧ್ಯ ಎಂದು ಉತ್ತರಿಸಿದರು.
ಈ ಬಾರಿ ಈಗಿನ ಶಿಕ್ಷಣ ಸಚಿವರು ಜೂನ್ ಮೊದಲ ವಾರದಲ್ಲಿಯೇ ಪಠ್ಯ ವಿತರಿಸುವ ಭರವಸೆ ನೀಡಿದ್ದು ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಉತ್ತರಿಸಿದರು.
ಸಾಗರದಲ್ಲಿ ಶಾಶ್ವತವಾದ ರಂಗಮಂದಿರದ ಕೊರತೆ ಇರುವುದರಿಂದ ಇಡೀ ದಿನ ನಡೆಯುವ ಕಾರ್ಯಕ್ರಮವನ್ನು ನಗರಸಭೆ ಆವರಣದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವಿಲ್ಲದೆ ತೊಂದರೆಯಾಗುತ್ತಿರುವುದು ನಿಜ. ಮುಂದಿನ ದಿನಗಳಲ್ಲಿ ಇಡೀ ದಿನ ನಡೆಯುವ ಕಾರ್ಯಕ್ರಮಗಳಿಗೆ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ತಹಸೀಲ್ದಾರರು ಭರವಸೆ ನಿಡಿದರು.
ಪ್ರಕರಣ ಕಂಡು ಬಂದರೆ ಕ್ರಮ: ಹಳ್ಳಿ ಆಸ್ಪತ್ರೆಯಲ್ಲಿ ಸೌಲಭ್ಯ ಕಡಿಮೆಯಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ತಾ. ಆರೋಗ್ಯಾಧಿಕಾರಿ ಡಾ. ಅಚ್ಯುತ್, ಕಳೆದ ಐದು ವರ್ಷದಿಂದ ರಾಷ್ಟ್ರೀಯ ಗ್ರಾಮೀಣ ಅಭಿಯಾನ ಯೋಜನೆಯಡಿ ಗ್ರಾಮಾಂತರ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಸಿಗದಿರುವ ಸೌಲಭ್ಯದ ಬಗ್ಗೆ ನಿಗದಿತವಾಗಿ ಹೇಳಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ ಮಕ್ಕಳು ಗಮನ ಸೆಳೆದರು. ಇದಕ್ಕೆ ತಾಪಂ ಅಧ್ಯಕ್ಷ ಹರೀಶ್ ಕೇವಲ ಕಾನೂನಿನಿಂದ ಭ್ರಷ್ಟಾಚಾರ ತೊಲಗಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರದ ಬಗ್ಗೆ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಶು ಕಲ್ಯಾಣಾಧಿಕಾರಿ ಜೋಯಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ, ಶಿಕ್ಷಕರ ಸಂಘದ ರವೀಂದ್ರ, ಕೃಷ್ಣಪ್ಪ, ಸಮ್ಮೆಳನದ ಸರ್ವಾಧ್ಯಕ್ಷ ಅನೀಶ್ ಶರ್ಮ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.