ರೈತ ಹೋರಾಟಗಾರರ ಬಂಧನ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ: ಬೆಂಗಳೂರಲ್ಲಿ ರೈತ ಹೋರಾಟಗಾರರನ್ನು ಬಂಧಿಸಿರುವ ಕ್ರಮದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಮಂಗಳವಾರ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮುಖ್ಯಮಂತ್ರಿಗಳ ವಚನ ಭ್ರಷ್ಟತೆಯ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಪೊಲೀಸರು ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ಸೇರಿದಂತೆ ಸಾವಿರಾರು ರೈತರನ್ನು ಬಂಧಿಸಿದ್ದಾರೆ. ಈ ಕೃತ್ಯ ಖಂಡಿಸಿ ಮತ್ತು ರೈತ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಹಾಗೂ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವುದಾಗಿ ರಸ್ತೆತಡೆ ನಡೆಸಿದ ರೈತ ಮುಖಂಡರು ತಿಳಿಸಿದರು.
ಏಕಾಗಿ ಹೋರಾಟ?
- ಸರ್ಕಾರ ಕಬ್ಬಿಗೆ ಟನ್ ಒಂದಕ್ಕೆ 2650 ಕೊಡಿಸುವುದಾಗಿ ಆಶ್ವಾಸನೆ ಕೊಟ್ಟರೂ ಸಕ್ಕರೆ ಕಾರ್ಖಾನೆಯವರು ಎರಡು ಸಾವಿರ ಮಾತ್ರ ಕೊಡುತ್ತಿದ್ದಾರೆ. ಸರ್ಕಾರ ಮಾತ್ರ ಮೌನ ವಹಿಸಿದೆ.
- ರಾಜ್ಯದ ಸಮಗ್ರ ನೀರಾವರಿ ಯೋಜನೆ ತಯಾರಾಗಬೇಕು. ಉತ್ತರ ಕರ್ನಾಟಕದ ಕಳಸ- ಬಂಡೂರಿ ಕುಡಿಯುವ ನೀರಿನ ಯೋಜನೆ ದಕ್ಷಿಣ ಕರ್ನಾಟಕದ ಎತ್ತಿನಹೊಳೆ ಯೋಜನೆ ಕೈಬಿಟ್ಟು ಪರಮಶಿವಯ್ಯನವರ ವರದಿ ಜಾರಿಯಾಗಬೇಕು.
- ಕನಕ ಬಿಟಿ ಹತ್ತಿ ತಳಿ ಬೀಜ ದೋಷದಿಂದ ಹೂವು, ಕಾಯಿ ಕಟ್ಟಲಿಲ್ಲವೆಂದು ಸರ್ಕಾರವೇ ರಚಿಸಿದ ತಜ್ಞರ ಸಮಿತಿ ವರದಿ ನೀಡಿದ್ದರೂ ಸರ್ಕಾರವಾಗಲಿ, ಬೀಜ ಕಂಪನಿಯವರಿಂದಾಗಲಿ ಪರಿಹಾರ ಕೊಡಿಸಿಲ್ಲ. ಮಾನ್ಸೆಂಟೋ ಕಂಪನಿ ಕಪ್ಪುಪಟ್ಟಿಗೆ ಸೇರಿಸಬೇಕು.
- ಕುಲಾಂತರ ತಳಿ ಪ್ರಯೋಗವನ್ನು ರೈತರ ಜಮೀನಿನಲ್ಲಿ ಮಾಡಬಾರದು.
- ಹಣ್ಣು ಮತ್ತು ತರಕಾರಿಗಳನ್ನು ಎಪಿಎಂಸಿ ಕಾಯ್ದೆಯಿಂದ ಹೊರತುಪಡಿಸಿ ರೈತರಿಗೆ ಮಾರಕವಾಗುವಂತೆ ಆದೇಶ ಹೊರಡಿಸಿದ ಮುಖ್ಯಮಂತ್ರಿಯವರು ನಿರ್ಧಾರ ಹಿಂದಕ್ಕೆ ಪಡೆಯಬೇಕು.
- ಬತ್ತ ಮತ್ತು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸಿ ಖರೀದಿ ಕೇಂದ್ರಕ್ಕೆ ಅವ್ಯವಸ್ಥೆ ಸರಿಪಡಿಸಿ ರೈತ ಬೆಳೆದ ಪೂರ್ತಿ ಧಾನ್ಯ ಖರೀದಿಸಬೇಕು.
- ಕೈಮಗ್ಗದ ಚಾಲಕ ಯಂತ್ರದ ಬದಲಾಗಿ ವಿದ್ಯುತ್ ಚಾಲಿತ ಯಂತ್ರಕ್ಕೆ ಅನುಮತಿ ಕೊಟ್ಟಿರುವುದು ರದ್ದುಪಡಿಸಬೇಕು. ಈ ವಿಚಾರದಲ್ಲಿ ಚಳವಳಿ ಮಾಡುತ್ತಿರುವವರಿಗೆ ಸಂಪೂರ್ಣ ಬೆಂಬಲವಿದೆ.
- ವಿದ್ಯುಚ್ಛಕ್ತಿ ಸಮಸ್ಯೆ ಬಗೆಹರಿಸಬೇಕು.
- ಸಮಾನ ವಿದ್ಯುತ್ ಶಕ್ತಿಗಾಗಿ ಮೀಟರ್ ಬಿಚ್ಚಿ ವಾಪಸ್ ಕೊಟ್ಟಿರುವ ಮೇಲಿನ ಮೊಕದ್ದಮೆ ವಾಪಸ್ ಪಡೆಯಬೇಕು.
- ಗ್ರಂಥಾಲಯಗಳ ಕೆಲಸಗಾರರಿಗೆ ಆರು ತಿಂಗಳ ವೇತನ ಬಾಕಿ ಕೂಡಲೇ ಸರ್ಕಾರ ಕೊಡಬೇಕು.
ಪ್ರತಿಭಟನೆ ವೇಳೆ ಟಿ.ಎಂ.ಚಂದ್ರಪ್ಪ, ಮಲ್ಲಿಕಾರ್ಜುನ, ವಸಂತಕುಮಾರ್, ಪಿ.ಡಿ. ಮಂಜಪ್ಪ, ರುದ್ರೇಶ್, ಜಗದೀಶ್, ರುದ್ರೇಶ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ರೈತರ ಹೋರಾಟಕ್ಕೆ ಸಂಚಾರ ಅಸ್ತವ್ಯಸ್ತ
ಬೆಂಗಳೂರಿನಲ್ಲಿ ರೈತ ಮುಖಂಡರನ್ನು ಬಂಧಿಸಿರುವ ಕ್ರಮ ಖಂಡಿಸಿ ನಗರದಲ್ಲಿ ನಡೆದ ರೈತರ ಪ್ರತಿಭಟನೆಯಿಂದ ಹೊನ್ನಾಳಿ-ಶಿವಮೊಗ್ಗ ರಸ್ತೆ ಸಂಚಾರ ಕೆಲಹೊತ್ತು ಸಂಪೂರ್ಣ ಅಸ್ತವ್ಯಸ್ತವಾಯಿತು. ನೂರಾರು ವಾಹನಗಳು ರಸ್ತೆಯಲ್ಲೇ ಗಂಟೆಗಟ್ಟಲೆ ಕಳೆದವು.
ಇಲ್ಲಿನ ರೇಲ್ವೆ ಫ್ಲೈಓವರ್ ಆರಂಭದಲ್ಲೇ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರೈತರು ಧರಣಿ ಕುಳಿತರು. ಇದರಿಂದ ಶಿವಮೊಗ್ಗದಿಂದ ಹೊನ್ನಾಳಿ, ಹೊಸಪೇಟೆ ಕಡೆ ಹೋಗುವ ವಾಹನಗಳು ಶಂಕರಮಠ ರಸ್ತೆಯಲ್ಲಿ ಸಾಲಾಗಿ ನಿಂತವು. ಅದೇ ರೀತಿ ಹೊಸಪೇಟೆ, ಹೊನ್ನಾಳಿ ಕಡೆಯಿಂದ ಶಿವಮೊಗ್ಗ ನಗರದೊಳಗೆ ಬರಬೇಕಾದ
ವಾಹನಗಳು ಫ್ಲೈಓವರ್ ಹಾಗೂ ರಸ್ತೆಯಲ್ಲಿ ಸಾಲಾಗಿ ನಿಂತವು. ಈ ಮಧ್ಯೆ ಒಂದು ಆ್ಯಂಬುಲೆನ್ಸ್ ಪ್ರತಿಭಟನೆಯ ಓಘಕ್ಕೆ ಸಿಕ್ಕಿಕೊಂಡ ಪ್ರಸಂಗವೂ ನಡೆಯಿತು. ಪೊಲೀಸರ ಮನವೊಲಿಕೆಯ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.
ಇಷ್ಟಾದ ಮೇಲೆ ಸಂಚಾರ ವ್ಯವಸ್ಥೆ ಸುಗಮವಾಗಲು ಸುಮಾರು 20 ನಿಮಿಷ ಹಿಡಿಯಿತು. ಪರಿಸ್ಥಿತಿ ಸುಧಾರಿಸಲು ಪೊಲೀಸರು ಸಾಕಷ್ಟು ಹೆಣಗಾಟ ನಡೆಸಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

