ಶಿವಮೊಗ್ಗ

ವೈರ್‌ಲೆಸ್ ಟವರ್ ಏರಿದ ಡಾ.ರಾಜ್ ಅಭಿಮಾನಿ!

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.31
ಇಲ್ಲಿನ ಗೋಪಿ ವೃತ್ತದಲ್ಲಿ ಡಾ. ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸಬೇಕೆಂದು ಆಗ್ರಹಿಸಿ ಜ್ವಾಲಾಮುಖಿ ಕನ್ನಡ ಸಂಘದ ಅಧ್ಯಕ್ಷ ಮೂರ್ತಿ ವೈರ್‌ಲೆಸ್ ಟವರ್ ಏರಿ ಪ್ರತಿಭಟನೆ ನಡೆಸಿದ ಪ್ರಸಂಗ ಶುಕ್ರವಾರ ನಡೆಯಿತು.
ಇದೇ ಹೊತ್ತಿನಲ್ಲಿ ಮೂರ್ತಿ ಅವರ ಹೋರಾಟ ಬೆಂಬಲಿಸಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ಗೋಪಿ ವೃತ್ತದಲ್ಲಿ ಟಯರ್‌ಗೆ ಬೆಂಕಿಹಚ್ಚಿ ರಸ್ತೆ ಮೇಲೆ ಹೊರಳಾಡಿ ಪ್ರತಿಭಟನೆ ನಡೆಸಿದರು.
ಹೈಡ್ರಾಮ:  ಬೆಳಗ್ಗೆ 11 ಗಂಟೆಗೆ ಗೋಪಿ ವೃತ್ತದ ಬಳಿ ಇರುವ ಟವರ್ ಏರಿದ ಮೂರ್ತಿ ಕನ್ನಡ ಧ್ವಜ ಬೀಸುತ್ತಾ ರಾಜ್ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿ ಘೋಷಣೆ ಕೂಗಲಾರಂಭಿಸಿದರು. ಈ ಸಂದರ್ಭ ಅಲ್ಲೊಂದು ಸಿನಿಮೀಯ ದೃಶ್ಯವೇ ಸೃಷ್ಟಿಯಾಯಿತು. ಅಲ್ಲಿದ್ದ ಸಾರ್ವಜನಿಕರು, ಪ್ರಯಾಣಿಕರ ಗಮನ ಅತ್ತ ಹರಿಯಿತು.
ಕೆಲ ಹೊತ್ತಿನಲ್ಲೇ ವಿಷಯ ತಿಳಿದ ವಿವಿಧ ಕನ್ನಡ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಮೂರ್ತಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ನಗರ ಪಾಲಿಕೆಯಿಂದ ಸೂಕ್ತ ಭರವಸೆ ಸಿಗುವವರೆಗೆ ಟವರ್ ಬಿಟ್ಟು ಇಳಿಯುವುದಿಲ್ಲ ಎಂದು ಮೂರ್ತಿ ಪಟ್ಟುಹಿಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷೆ ಖುರ್ಷಿದಾ ಬಾನು, ನಗರಪಾಲಿಕೆ ಸದಸ್ಯ ಐಡಿಯಲ್ ಗೋಪಿ ಸೇರಿದಂತೆ ಪೊಲೀಸ್ ಸಿಬ್ಬಂದಿಯವರು ಮೂರ್ತಿ ಮನವೊಲಿಸುವ ಪ್ರಯತ್ನ ಮಾಡಿ ವಿಫಲರಾದರು. ಇಷ್ಟು ಘಟನೆ ನಡೆಯುವಾಗ ಮೂರ್ತಿ ಟವರ್ ಏರಿ 3 ಗಂಟೆ ಕಳೆದಿತ್ತು.
ಈ ಮಧ್ಯೆ ಅನಾಹುತಕ್ಕೆ ಆಸ್ಪದಕ್ಕೆ ಕೊಡಬಾರದು ಎಂದು ನಿರ್ಧರಿಸಿದ ನಗರಪಾಲಿಕೆ, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಅಧಿಕೃತ ಆದೇಶದ ಪ್ರತಿ ಸಿಕ್ಕಿದೆ. ಕೆಳಗಿಳಿದು ಬರುವಂತೆ ಲಕೋಟೆಯನ್ನು ತೋರಿಸಿದರು. ಇಷ್ಟಾದರೂ ಮೂರ್ತಿ ಕೆಳಗಿಳಿಯಲಿಲ್ಲ. ಈ ಮಧ್ಯೆ 3 ಗಂಟೆಯಿಂದ ಬಳಲಿದ್ದ ಮೂರ್ತಿ ಬಿಸಿಲಿನ ಬೇಗೆಗೆ ಬೆಂಡಾಗಿ ಕೆಳಗೆ ಬೀಳುವ ಸನ್ನಿವೇಶ ನಿರ್ಮಾಣವಾಯಿತು.
ಅಂತಿಮವಾಗಿ ಅಗ್ನಿಶಾಮಕ ಸಿಬ್ಬಂದಿ ಸೋಮಶೇಖರ್ ಟವರ್ ಏರಿಯೇ ಬಿಟ್ಟರು. ಜೊತೆಗೆ ಮೂರ್ತಿ ಅವರನ್ನು ಕೆಳಗಿಳಿಸುವಲ್ಲಿ ಸಫಲರಾದರು. ಅಂತಿಮವಾಗಿ 3 ಗಂಟೆಯ ರಾಜ್ ಪುತ್ಥಳಿ ಬೇಡಿಕೆಗಾಗಿನ ಪ್ರಹಸನ ಕೊನೆಗೊಂಡಿತು. ಸುತ್ತಮುತ್ತ ಸೇರಿದ್ದ ನೂರಾರು ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ತಮ್ಮ ವಿಚಿತ್ರ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಮೂರ್ತಿ ಅವರು, ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗೆ ಹಲವಾರು ಬಾರಿ ಮನವಿ ಮಾಡಿ ರಾಜ್ ಪುತ್ಥಳಿಯನ್ನು ಗೋಪಿ ವೃತ್ತದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಅಧಿಕಾರಿಗಳು ಜನಪ್ರತಿನಿಧಿಗಳು ಮನವಿಗೆ ಸ್ಪಂದನೆಯನ್ನೇ ನೀಡಲಿಲ್ಲ. ಹೀಗಾಗಿ, ಹೋರಾಟವನ್ನು ತೀವ್ರಗೊಳಿಸಿ ಎಚ್ಚರಿಕೆ ನೀಡುವ ಉದ್ದೇಶದಿಂದ ಟವರ್ ಏರಿದ್ದಾಗಿ ತಿಳಿಸಿದರು.
ಈ ನಡುವೆಯೇ ನವ ಕರ್ನಾಟಕ ನಿರ್ಮಾಣ ಸೇನೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಬ್ಬಾಸ್‌ಗಿರಿ:  ವಿಶೇಷವಾಗಿ ಮೂರ್ತಿ ಅವರನ್ನು ಟವರ್ ಮೇಲಿನಿಂದ ಇಳಿಸಲು ಶ್ರಮಿಸಿದ ಅಗ್ನಿಶಾಮಕ ತಂಡವನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದರು. ಅದರಲ್ಲೂ ಬಳಲಿ ಟವರ್ ಮೇಲೆ ಬಳಲಿದ್ದ ಮೂರ್ತಿಯನ್ನು ಭುಜದ ಮೇಲೆ ಹೇರಿಕೊಂಡು ಕೆಳಕ್ಕಿಳಿಸಿದ ಅಗ್ನಿಶಾಮಕ ದಳದ ಸೋಮಶೇಖರ್ ಅವರ ಬದ್ಧತೆಯ ಸೇವೆ ಬಗ್ಗೆ ಶಬ್ಬಾಸ್‌ಗಿರಿ ಮಾತುಗಳು ಕೇಳಿಬಂದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.