ಶಿವಮೊಗ್ಗ

ಕುಪ್ಪಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಜ.31
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕುಪ್ಪಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ ಹೊರಟಿರುವ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ಸದಸ್ಯರು ಶುಕ್ರವಾರ ಶಿವಮೊಗ್ಗಕ್ಕೆ ಆಗಮಿಸಿದ್ದು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
'ಬುಡಕಟ್ಟು ಸಮುದಾಯಗಳ ಉಳಿವಿಗಾಗಿ ನಮ್ಮ ನಡೆ' ಎಂಬ ಘೋಷಣೆ ಅಡಿಯಲ್ಲಿ ಇವರು ಜ.28ರಿಂದ ಜಾಥಾ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ 60 ಸಾವಿರ ಜನರಿದ್ದಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಅರಣ್ಯವನ್ನೇ ಮೂಲ ಬದುಕಾಗಿಸಿಕೊಂಡ ಈ ಸಮುದಾಯದಲ್ಲಿ ಹಸಲರು, ಗೊಂಡರು, ಮರಾಠಿ ನಾಯಕರು ಒಂದೆಡೆಯಾದರೆ ಬಯಲುಸೀಮೆಯಲ್ಲಿ ಹಕ್ಕಿಪಿಕ್ಕಿ ಜನಾಂಗದವರು, ವಾಲ್ಮೀಕಿ ನಾಯಕರು, ಮೇದರ ಮುಂತಾದವರು ಇದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬುಡಕಟ್ಟು ಸಮುದಾಯದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಜನಸಂಖ್ಯೆ ಕ್ಷೀಣಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದರೂ ಸರ್ಕಾರದ ಸವಲತ್ತುಗಳು ಇವರಿಗೆ ಸಿಕ್ಕಿಲ್ಲ ಎಂದಿದ್ದಾರೆ.
3 ಲಕ್ಷಕ್ಕೆ ಹೆಚ್ಚಿಸಿ:  ಜಿಲ್ಲೆಯ ಅರಣ್ಯ ಮೂಲ ಬುಡಕಟ್ಟುಗಳ ಸಮಗ್ರ ಅಧ್ಯಯನ ನಡೆಯಬೇಕು. ಈ ಅಧ್ಯಯನವನ್ನು ಮಾನವ ಶಾಸ್ತ್ರೀಯ- ಸಮಾಜ ಶಾಸ್ತ್ರೀಯ ವಿಧಾನದಲ್ಲಿ ಕೈಗೊಳ್ಳಬೇಕು. ಇದರ ಆಧಾರದ ಮೇಲೆ ಅಭಿವೃದ್ಧಿ ಪ್ರಕ್ರಿಯೆ ಮುಂದುವರಿಸಬೇಕು. ಈ ಸಮುದಾಯದವರಿಗೆ ಉಚಿತ ಪೌಷ್ಟಿಕ ಆಹಾರ ಯೋಜನೆ ಜಾರಿ ಮಾಡಬೇಕು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯನ್ನು ಶಿವಮೊಗ್ಗ ಜಿಲ್ಲೆಗೂ ವಿಸ್ತರಿಸಿ ಕಚೇರಿ ಸ್ಥಾಪಿಸಬೇಕು. ತಾಲೂಕು ಮಟ್ಟದಲ್ಲಿ ಬುಡಕಟ್ಟು ಕಲ್ಯಾಣ ಇಲಾಖೆ ಕಚೇರಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕ ಅನುಷ್ಠಾನ ಮಾಡಬೇಕು. ಬುಡಕಟ್ಟು ಸಮುದಾಯಗಳಿಗೆ ತಕ್ಷಣ ಹಕ್ಕುಪತ್ರ ನೀಡಬೇಕು. ಬುಡಕಟ್ಟು ಜನರಿಗೆ ಮನೆ ನಿರ್ಮಾಣ ನೆರವನ್ನು 3 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಕ್ಕೂಟದ ಪ್ರಮುಖರಾದ ರಾಮು, ಮಂಜುನಾಥ್, ಬಾಲರಾಜ್, ಶ್ರೀನಾಥ್, ಲಕ್ಷ್ಮಮ್ಮ, ರೇಣುಕಾ, ಉಷಾದೇವಿ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.