26 ರಂದು ಅಧಿಕೃತ ಅಧಿಸೂಚನೆ ಘೋಷಣೆ: ಎಸಿ
ಶಿಕಾರಿಪುರ: ಶಿಕಾರಿಪುರ ಕ್ಷೇತ್ರದ ಮರುಚುನಾವಣೆಗೆ ಇದೇ 26 ರಂದು ಅಧಿಕೃತ ಅಧಿಸೂಚನೆ ಘೋಷಣೆಯಾಗಲಿದ್ದು, 26 ರಿಂದ ಆಗಸ್ಟ್ 2 ರವರೆಗೆ ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಸಾಗರ ಉಪವಿಭಾಗಾಧಿಕಾರಿ ಡಾ.ಉದಯಕುಮಾರಶೆಟ್ಟಿ ತಿಳಿಸಿದರು.
ಮಂಗಳವಾರ ತಾಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ 90 ಸಾವಿರ ಪುರುಷ ಹಾಗೂ 87 ಸಾವಿರ ಮಹಿಳಾ ಮತದಾರರು ಹಾಗೂ 46 ಸೇವಾ ಮತದಾರರು ಮತ ಚಲಾಯಿಸಲಿದ್ದು 1ಜನವರಿ 2014 ಕ್ಕೆ 18 ವರ್ಷ ತುಂಬಿದ ಹಾಗೂ ಮತದಾರರ ಪಟ್ಟಿಗೆ ನೋಂದಾಯಿಸಲ್ಪಡುವ ನೂತನ ಮತದಾರರಿಗೆ ಇದೇ 23 ರವರೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಶೇ.100 ಮತದಾರರಿಗೆ ಗುರುತಿನ ಪತ್ರ ವಿತರಿಸಲಾಗಿದ್ದು, ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ
ತಲಾ ಹೋಬಳಿಗೆ ನೀತಿ ಸಂಹಿತೆ ಜಾರಿ ಅಧಿಕಾರಿಗಳ 5 ತಂಡ ರಚಿಸಲಾಗಿದೆ ಎಂದ ಅವರು ಶಿವಮೊಗ್ಗ, ಸಾಗರ, ಸೊರಬ, ಹಿರೇಕೇರೂರು, ಹೊನ್ನಾಳಿ ಮಾರ್ಗದಲ್ಲಿ ವಾಹನ ತಪಾಸಣೆಗಾಗಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ನಿತ್ಯ ಬೆಳಿಗ್ಗೆ 11 ರಿಂದ 3 ರವರೆಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಚುನಾವಣಾಧಿಕಾರಿ ಕಚೇರಿಯಲ್ಲಿ ಆ.2 ರ ವರೆಗೆ ನಾಮಪತ್ರ ಪಡೆಯಲಾಗುವುದು ಎಂದ ಅವರು ಆ.4 ರಂದು ಪರಿಶೀಲನೆ,ನಾಮಪತ್ರ ವಾಪಾಸು ಪಡೆಯಲು ಆ.6 ಕಡೆಯ ದಿನವಾಗಿದೆ. ಆ. 21 ಗುರುವಾರ ಮತದಾನ ನಡೆಯಲಿದ್ದು 28 ಸೋಮವಾರ ಮತಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಕೆಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ತಾಲೂಕು ಕಚೇರಿಯಲ್ಲಿ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದ್ದು, ಈಗಾಗಲೇ ಜಾರಿಯಲ್ಲಿರುವ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರುಗಳಿಗಾಗಿ ಕಂಟ್ರೋಲ್‌ರೂಂ (ದೂ.222239) ಆರಂಭಿಸಲಾಗಿದೆ ಎಂದರು.
ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ವಾಹನ ಪರವಾನಿಗೆ, ಸಭೆ ಸಮಾರಂಭಗಳಿಗೆ ಅನುಮತಿಗಾಗಿ ತಾಲೂಕು ಕಚೇರಿಯಲ್ಲಿ ಏಕಗವಾಕ್ಷಿ ಕೊಠಡಿಯನ್ನು ಆರಂಭಿಸಲಾಗಿದೆ ಎಂದ ಅವರು 24 ಗಂಟೆಗಳಲ್ಲಿ ಪರಿಶೀಲಿಸಿ ಅನುಮತಿ ನೀಡುವುದಾಗಿ ತಿಳಿಸಿದರು.
ಪೊಲೀಸ್ ನೋಡೆಲ್ ಅಧಿಕಾರಿ, ಡಿವೈಎಸ್ಪಿ ಎನ್.ಎಸ್. ಶ್ರುತಿ ಮಾತನಾಡಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಇಲಾಖೆ ಸರ್ವ ರೀತಿಯಲ್ಲಿ ಸನ್ನದ್ಧವಾಗಿದ್ದು ಜನತೆ, ರಾಜಕೀಯ ಪಕ್ಷದ ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು. ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಜಗದೀಶ್, ಕಂದಾಯ ಅಧಿಕಾರಿ ಮಂಜುನಾಥ್, ರಾಜೀವ್, ಸದಾಶಿವ, ಚೇತನ್ ಇತರರುಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

