ಶಿವಮೊಗ್ಗ

40 ಕೋಟಿ ಯೋಜನೆಯಲ್ಲಿ ಬರೀ ಕಳಪೆ ಕಾಮಗಾರಿ!

Published On :

ಶಿವಮೊಗ್ಗ:  ಭದ್ರಾವತಿ ತಾಲೂಕಿನಲ್ಲಿ ಹರಿಜನ ಗಿರಿಜನ ಪ್ರದೇಶ ಅಭಿವೃದ್ಧಿ ಯೋಜನೆಯಡಿ ನಡೆದ ವಿವಿಧ ಕಾಮಗಾರಿ ಕುರಿತಂತೆ ತನಿಖೆ ಆರಂಭವಾಗಿದ್ದು, ಗುಣ ನಿಯಂತ್ರಕ ಅಧಿಕಾರಿಗಳಿಗೆ ಕಾಮಗಾರಿಯಲ್ಲಿ ಲೋಪವಾಗಿರುವ ಅಂಶ ಕಂಡುಬಂದಿದೆ.
ಅಚ್ಚರಿ ಎಂದರೆ, ಈ ಕಾಮಗಾರಿ ಅಚ್ಚುಕಟ್ಟಾಗಿ ನಡೆದಿದೆ- ಎಸ್ಟಿಮೇಟ್ ಪ್ರಕಾರವೇ ನಡೆದಿದೆ ಎಂದು 3 ಬಾರಿ ಕೆಳಹಂತದ ಅಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ಕೊಟ್ಟಿದ್ದರು. ಇದೀಗ ಎಸ್ಟಿಮೇಟ್ ಪ್ರಕಾರ ಕಾಮಗಾರಿ ನಡೆದಿಲ್ಲ ಎಂಬುದು ಹಿರಿಯ ಅಧಿಕಾರಿಗಳಿಗೆ ಮನದಟ್ಟಾಗಿದೆ.
ಕಾಮಗಾರಿ:  2011-12ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳಡಿ ಭದ್ರಾವತಿ ತಾಲೂಕಿಗೆ ಮಂಜೂರಾದ ಅಂದಾಜು 40 ಕೋಟಿ ಯೋಜನೆಯಲ್ಲಿ ಎಸ್ಟಿ-ಎಸ್ಟಿ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣವಾಗಿತ್ತು. ಆದರೆ, ಕಾಮಗಾರಿ ಸಂಪೂರ್ಣ ಕಳಪೆ ಆಗಿದೆ.  ನಿಗದಿತ ರೀತಿಯಲ್ಲಿ ಕೆಲಸ ನಡೆದಿಲ್ಲ. ಅಲ್ಲಲ್ಲಿ ರಸ್ತೆಗಳು ಕಿತ್ತುಹೋಗಿವೆ. ಚರಂಡಿ ಕಾಮಗಾರಿ ಸಹ ಪೇಲವವಾಗಿತ್ತು. ಈ ಕುರಿತಂತೆ ನವ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.
ಅವ್ಯವಹಾರವೇನು?: ಯೋಜನೆ ಪ್ರಸ್ತಾವನೆ ಸ್ವೀಕಾರವಾಗಿದ್ದು, 2011-12ನೇ ಸಾಲಿನಲ್ಲಿ. ಹಣ ಬಿಡುಗಡೆಯಾಗಿ ಕಾಮಗಾರಿ ಆರಂಭವಾಗಿದ್ದು 2012-13ನೇ ಸಾಲಿನಲ್ಲಿ. ಕಾಮಗಾರಿ ಆರಂಭದಲ್ಲೇ ಕಾಮಗಾರಿ ಕಳಪೆತನದ ಬಗ್ಗೆ ಮಾತುಗಳು ಕೇಳಿಬಂದಿತ್ತು. ರಸ್ತೆ ನಿರ್ಮಾಣಕ್ಕೆ ಮುನ್ನ ಗ್ರಾವೆಲ್ ಬಳಸಿಯೇ ಇಲ್ಲ.  ಹಾಲಿ ಇರುವ ಮಣ್ಣನ್ನೇ ಕೆದರಿ ಜಲ್ಲಿ ಹಾಕಿ ಕಾಂಕ್ರೀಟ್ ಮಟ್ಟಕಲಾಗಿದೆ. ಅದೇ ರೀತಿ ಚರಂಡಿ ಕಾಮಗಾರಿ ವೇಳೆ ಎಲ್ಲೂ ಸಹ ಪ್ಲಿಂತ್ ಬಳಸದೇ ಹಾಗೆಯೇ ಕಬ್ಬಿಣ ಕಟ್ಟಿ ಕಾಂಕ್ರೀಟ್ ಹಾಕಿ ಕಾಟಾಚಾರಕ್ಕೆ ಕಾಮಗಾರಿ ಮುಗಿಸಲಾಗಿತ್ತು. ಮರಳು, ಸಿಮೆಂಟ್ ಅನ್ನು ನಿಗದಿತ ಪ್ರಮಾಣದಲ್ಲಿ ಬಳಸಿಲ್ಲ.
ಮುಚ್ಚಿಹಾಕುವ ಪ್ರಯತ್ನ:  ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳೇ ನೇರವಾಗಿ ಶಾಮೀಲಾಗಿರುವ ಈ ಪ್ರಕರಣದಲ್ಲಿ ಗೋಲ್ಮಾಲ್ ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದು ಸುಳ್ಳಲ್ಲ. ದೂರುದಾರ ಶಿವಕುಮಾರ್ ಆರಂಭದಲ್ಲಿ ನಿಗಮದ ಕೆಳಹಂತದ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಮುಖ್ಯ ಎಂಜಿನಿಯರ್ ಗಮನಕ್ಕೆ ತಂದಾಗ ಅವರು, ತಾಲೂಕು ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲು ಸೂಚಿಸಿ ತಿಪ್ಪೇ ಸಾರಿಸಿದರು. ತನಿಖೆ ಎಷ್ಟು ನಡೆಯಿತೋ- ನಡೆದಿಲ್ಲವೋ ಗೊತ್ತಿಲ್ಲ.
ಕಾಮಗಾರಿ ಕಳಪೆಯಾಗಿಲ್ಲ ಎಂದು ವರದಿಯಂತೂ ಸಿದ್ಧಪಡಿಸಿದ್ದರು. ಹೀಗಾಗಿ ಬೇಸರಗೊಂಡ ಶಿವಕುಮಾರ್ ನೇರವಾಗಿ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವರಿಗೂ ದೂರು ಸಲ್ಲಿಸಿದ್ದರು.
ಇದೊಂದು ಸುಮಾರು 15 ಕೋಟಿಯಿಂದ 17 ಕೋಟಿ ಹಗರಣ ಇರಬಹುದುಂದು ಅಂದಾಜಿಸಲಾಗಿದೆ. ಟೆಂಡರ್ನಲ್ಲಿ ಇರುವಂತೆ ಎಲ್ಲೂ ಸಹ ಗ್ರಾವೆಲ್ ಬಳಸುವ ಕ್ರಮ ಅನುಸರಿಸದೇ ಹಾಗೇ ಕಾಮಗಾರಿ ಮಾಡಿರುವುದು, ಚರಂಡಿಯಲ್ಲಿ ಪ್ಲಿಂತ್ ಹಾಕದೇ ಕಾಮಗಾರಿ ನಡೆಸಿರುವುದರಿಂದ ಸಾಕಷ್ಟು ಹಣ ಉಳಿಸಲಾಗಿದೆ. ಈ ವಿಚಾರ ಅಧಿಕಾರಿಗಳಿಗೂ ಗೊತ್ತಿದೆ ಎಂಬುದು ಶಿವಕುಮಾರ್ ಅವರ ವಾದವಾಗಿತ್ತು.
ಅಂತಿಮವಾಗಿ ಗುಣನಿಯಂತ್ರಣ ಅಧಿಕಾರಿಗಳ ತಂಡ ತನಿಖೆಗಿಳಿದಿದೆ. ಕಳಪೆ ಕಾಮಗಾರಿ ನಡೆದಿರುವ ತಾಲೂಕಿನ ಉಕ್ಕುಂದ, ಭೋವಿಕಾಲೋನಿ, ಹಿರಿಯೂರು ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಕಾರ್ಯಪಾಲಕ ಅಭಿಯಂತ ಶಶಿಕಾಂತ್ ನೇತೃತ್ವದ ತಂಡ ರಸ್ತೆ, ಚರಂಡಿ ಕಾಮಗಾರಿಗಳನ್ನು ಅಗೆದು ಅದರ ಕಿಮ್ಮತ್ತನ್ನು ಪರಿಶೀಲಿಸಿದರು. ಈ ವೇಳೆ ರಸ್ತೆಗೆ ಗ್ರಾವೆಲ್ ಬಳಸದೇ ಇರುವುದು, ಚರಂಡಿಗೆ ಪ್ಲಿಂತ್ ಹಾಕದಿರುವುದು,  ನಿಗದಿತ ಪ್ರಮಾಣದಲ್ಲಿ 7 ರಾಡ್ರಾಡ್ಬ್ದಲು 2-3 ಕಬ್ಬಿಣದ ರಾಡ್ ಬಿಟ್ಟಿರುವುದೂ ಸಹ ಕಂಡುಬಂತು.
ಇದೇ ಸಂದರ್ಭದಲ್ಲಿ ಗುಣಮಟ್ಟ ಪರೀಕ್ಷೆಗಾಗಿ ಕಾಮಗಾರಿಯ ಪದಾರ್ಥಗಳನ್ನು ತೆಗೆದುಕೊಂಡುಹೋಗಿದ್ದಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರೂ ಸಹ ಕಳಪೆ ಕಾಮಗಾರಿಯ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
- ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.