ಹೋರಾಟದಲ್ಲಿ ಮಹಿಳೆ ಮುಂಚೂಣಿಗೆ ಬರಲಿ
ರಾಷ್ಟ್ರಕವಿ ಕುವೆಂಪು ಮಹಾಮಂಟಪ
ಶಿವಮೊಗ್ಗ: ಸಾಂಕೇತಿಕ ಹೋರಾಟಗಳಿಂದ ಬದಲಾವಣೆ ಸಾಧ್ಯವಿಲ್ಲ. ಯಾವುದೇ ಸ್ವರೂಪದ ಸಮಸ್ಯೆಗಳ ಪರಿಹಾರಕ್ಕೆ ಸಾಂಕೇತಿಕ ಹೋರಾಟದಿಂದ ಲಾಭ ಫಲಿಸುವುದಿಲ್ಲ. ಬದಲಾಗಿ ಸಾಮೂಹಿಕ ಸಂಘಟಿತವಾದ ಹೋರಾಟಕ್ಕೆ ಪೂರಕ ನ್ಯಾಯ ಲಭಿಸಲಿದೆ. ಅದಕ್ಕಾಗಿ ಅರ್ಥಪೂರ್ಣವಾಗಿ ಸಮಸ್ಯಾಧಾರಿತ ಹೋರಾಟ ನಡೆಸಬೇಕು ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ 'ಭೂಮಿ ಈ ಹೊತ್ತಿನ ಆತಂಕ' ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ, ಹೋರಾಟದ ವಿಷಯಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತತ್ವಾಧಾರಿತ, ವಿಷಯಾಧಾರಿತವಾಗಿ ಹೋರಾಡುವ ನಾಯಕರ ಕೊರತೆ ಇದೆ. ಈ ನಿಟ್ಟಿನಲ್ಲಿ ಮಹಿಳೆಯರೂ ಕೂಡಾ ಪ್ರಗತಿಪರ ಹೋರಾಟಗಳಲ್ಲಿ ಮುಂಚೂಣಿಗೆ ಬರಬೇಕು ಎಂದರು.
ಗಂಭೀರ ಚರ್ಚೆ ಅವಶ್ಯ: ಪಶ್ಚಿಮ ಘಟ್ಟಗಳ ರಕ್ಷಣೆ, ಅಭಿವೃದ್ಧಿ, ವನವಾಸಿಗಳ ಜೀವನ ನಿರ್ವಹಣೆ ಕುರಿತು ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಅವರು ನೀಡಿರುವ ವರದಿ ಅನುಷ್ಠಾನದ ಕುರಿತು ಸಾಹಿತ್ಯ ಮತ್ತು ಸಾಮಾಜಿಕ ವಲಯಗಳಲ್ಲಿ ಗಂಭೀರವಾದ ಚರ್ಚೆಗಳಾಗಬೇಕು. ಜನಪ್ರತಿನಿಧಿಗಳು ಸೇರಿ ಎಲ್ಲರೂ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದರು.
ಒಟ್ಟಿನಲ್ಲಿ ರೈತರು ಸ್ವಾವಲಂಬಿ ಹಾಗೂ ನೆಮ್ಮದಿಯ ಬದುಕು ಕಂಡುಕೊಳ್ಳಲು ಪೂರಕವಾದ ವಾತಾವರಣವನ್ನು ನಿರ್ಮಿಸುವಂತಾಗಬೇಕು. ಸರ್ಕಾರವು ಮಲೆನಾಡಿನ ಭಾಗಗಳಲ್ಲಿ ನೆಡುತ್ತಿರುವ ಅಕೇಶಿಯಾ ಮತ್ತು ನೀಲಗಿರಿ ಜಾತಿಯ ಗಿಡಗಳನ್ನು ನೆಡುವುದಕ್ಕೆ ತಮ್ಮ ವಿರೋಧವಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೇನೆ ಅವರು ಹೇಳಿದರು.
ಗಾಂಧೀಜಿಯವರ ಆಶಯದಂತೆ ನಿರೀಕ್ಷೆಯ ಪ್ರಮಾಣದಲ್ಲಿ ಸಣ್ಣ ಕೈಗಾರಿಕೆಗಳು ದೇಶದಲ್ಲಿ ಅಸ್ತಿತ್ವ ಕಂಡುಕೊಳ್ಳಲಿಲ್ಲ. ಇತ್ತೀಚೆಗೆ ಆರಂಭವಾದ ದೊಡ್ಡ ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣಲಿಲ್ಲ. ಇಂದಿನ ಅವಶ್ಯಕತೆ, ಭವಿಷ್ಯದ ಬದುಕು ಮತ್ತು ಜನರ ಹಿತಕಾಯುವ ನಿಟ್ಟಿನಲ್ಲಿ, ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಹಾಗೂ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಅಭಿವೃದ್ಧಿಪರ ಕಾರ್ಯಕ್ರಮಗಳು ನಡೆಯಬೇಕು ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಅವರು 'ಬೃಹತ್ ಕೈಗಾರಿಕೆ-ಭೂಮಿ' ಎಂಬ ವಿಷಯಗಳ ಬಗ್ಗೆ ಮಾತನಾಡಿ, ಇವತ್ತು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸಂಬಂಧಿಸಿದಂತೆ ಸಮತೋಲನ ಕಾಪಾಡುವ ಮಾನದಂಡ ಇಲ್ಲವಾಗಿದೆ. ಬೃಹತ್ ಕೈಗಾರಿಕೆಗಳನ್ನು ಸೀಮಿತಗೊಳಿಸುವುದು, ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದ ಅವರು, ಕಾರ್ಮಿಕರ ರಾಷ್ಟ್ರೀಕರಣ, ಕೈಗಾರಿಕೆಗಳ ಕಾರ್ಮಿಕೀಕರಣ ಹಾಗೂ ದೇಶದ ಕೈಗಾರಿಕೀಕಕರಣ ಆಗಬೇಕಿದೆ ಎಂದರು.
ಎನ್ಜಿಓ ಲೂಟಿ: ಪರಿಸರ ಅಧ್ಯಯನದ ಹೆಸರಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಹಣ ಲೂಟಿ ಮಾಡುತ್ತಿರುವುದನ್ನು ಪ್ರಸ್ತಾಪಿಸಿದ ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗ್ಡೆ, 'ಕಸ್ತೂರಿ ರಂಗನ್ ವರದಿ ಆತಂಕ' ವಿಷಯವಾಗಿ ಮಾತನಾಡಿ, ಗುಡ್ಡಗಾಡು ಪ್ರದೇಶದಲ್ಲಿ ಜಿಂಕೆಗಳು ಇರುವುದಿಲ್ಲ. ಹಾಗಾಗಿ, ಅಲ್ಲಿ ಹುಲಿಯೂ ಇರುವುದಿಲ್ಲ. ಆದರೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಹುಲಿ ಯೋಜನೆ ಜಾರಿಗೆ ತಂದು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದರು.
ದಂಡಾವತಿ ಯೋಜನೆ ವಿರೋಧಿ ಒಕ್ಕೂಟದ ಅಧ್ಯಕ್ಷ ವಾಮದೇವಗೌಡ ಅವರು ನೀರಾವರಿ ಯೋಜನೆ-ಭೂಮಿ ಕುರಿತು ಮಾತನಾಡಿ, ಸೊರಬದಲ್ಲಿ ಅವೈಜ್ಞಾನಿಕ ದಂಡಾವತಿ ಯೋಜನೆ ಜಾರಿಗೊಳಿಸುವುದಕ್ಕಿಂತ ಚಿಕ್ಕ ಬ್ಯಾರೇಜುಗಳನ್ನು ನಿರ್ಮಿಸುವುದೇ ಸೂಕ್ತ. ಈ ಬಗ್ಗೆ ಹೋರಾಟ ಕೈಬಿಡುವುದಿಲ್ಲ ಎಂದರು.
ರೈತ ಮುಖಂಡ ಕಡಿದಾಳ್ ಶಾಮಣ್ಣ ಅವರು 'ಅಭಿವೃದ್ಧಿ-ಭೂಮಿ' ಎಂಬ ವಿಷಯದ ಕುರಿತು ಮಾತನಾಡಿದರು.
ಈ ಸಂದರ್ಭ ಸಮ್ಮೇಳನಾಧ್ಯಕ್ಷ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

