ನೀರು ಪೂರೈಕೆ ಕಾಮಗಾರಿ ಟೆಂಡರ್ಗೆ ಸೂಚನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.3
ಈ ಬಾರಿ ದಸರಾ ಆಚರಣೆ ವಿವಾದ ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ಜೈಲು ಸೆಪ್ಟೆಂಬರ್ ಅಂತ್ಯಕ್ಕೆ ಉದ್ಘಾಟನೆಯಾಗಲಿದ್ದು, ಹಳೇ ಜೈಲು ಸ್ಥಳಾಂತರವಾಗುವುದರಿಂದ ಈ ಜಾಗದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಬಹುದು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಈ ವಿಷಯ ಪ್ರಸ್ತಾಪಿಸಿ, ನೂತನ ಜೈಲು ಬೇಗ ಕಾರ್ಯಾರಂಭ ಮಾಡಿದರೆ ದಸರಾ ಆಚರಣೆ ಸೇರಿದಂತೆ ಎಲ್ಲಾ ವಿಷಯದಲ್ಲೂ ಅನುಕೂಲವಾಗಲಿದೆ ಎಂದರು.
ಹೆಚ್ಚು ಪರಿಹಾರ ನಿರೀಕ್ಷೆ: ಈ ಬಗ್ಗೆ ಸಚಿವರು ವಿವರಣೆ ಕೇಳಿದಾಗ ಅಧಿಕಾರಿಗಳು, ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಮುಕ್ತಾಯದ ಹಂತದಲ್ಲಿವೆ. ಆದರೆ 400 ಮೀಟರ್ ಅಪ್ರೋಚ್ ರಸ್ತೆ ಕಾಮಗಾರಿಗೆ ತಡೆಯುಂಟಾಗಿದೆ. ಈ ಪ್ರದೇಶದಲ್ಲಿ 1 ಎಕರೆ 14 ಗುಂಟೆ ಬಗರ್ ಹುಕುಂ ಜಮೀನಿದ್ದು, ಅವರು ಹೆಚ್ಚು ಪರಿಹಾರ ನಿರೀಕ್ಷಿಸುತ್ತಿದ್ದಾರೆ ಎಂದರು.
ನೀರು ಪೂರೈಕೆ ಕಾಮಗಾರಿಗೆ ಒಟ್ಟು 4 ಕೋಟಿ ರು. ಅಗತ್ಯವಿದ್ದು, ಪೂರ್ಣ ಹಣ ಪಾವತಿಯಾಗದೇ ಕಾಮಗಾರಿ ಕೈಗೊಳ್ಳುವುದಿಲ್ಲ ಎಂದ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿರುವುದನ್ನು ಸಚಿವರ ಗಮನಕ್ಕೆ ತಂದಾಗ, ಇದು ಸರ್ಕಾರಿ ಕೆಲಸ. ಹೀಗೆ ಪಟ್ಟು ಹಿಡಿದರೆ ಆಗುವುದಿಲ್ಲ. ಈಗಾಗಲೇ ಪಾವತಿಸಿರುವ 1.5 ಕೋಟಿ ರು.ಗೆ ಟೆಂಡರ್ ಕರೆದು ಕೆಲಸ ಆರಂಭಿಸಿ. ಈ ಬಗ್ಗೆ ನಾನು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ ಎಂದರು.
ವಿಮಾನ ನಿಲ್ದಾಣ: ಕಳೆದ 2 ವರ್ಷದಿಂದ ವಿಮಾನ ನಿಲ್ದಾಣ ಕಾಮಗಾರಿ ಸ್ಥಗಿತವಾಗಿರುವ ಬಗ್ಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ವಿವರಣೆ ನೀಡಿ, ಜಿಲ್ಲಾಡಳಿತದಿಂದ ಆಗಬೇಕಾಗಿರುವ ಕೆಲಸಗಳೆಲ್ಲಾ ಮುಗಿದಿವೆ. ಭೂಮಿ ಹಸ್ತಾಂತರವಾಗಿದೆ. ಆದರೆ ಮಾಚೇನಹಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಚಿಮಣಿ ಎತ್ತರದಲ್ಲಿವೆ ಎಂಬ ಆಕ್ಷೇಪಣೆ ನಿರ್ಮಾಣ ಏಜೆನ್ಸಿಯಿಂದ ಬಂದಿತ್ತು. ಇದಕ್ಕಾಗಿ ರನ್ ವೇ ಮಾರ್ಗ ಸ್ವಲ್ಪ ಬದಲಾವಣೆ ಮಾಡುವುದಾದರೆ ಅಗತ್ಯ ಹೆಚ್ಚುವರಿ ಭೂಮಿ ನೀಡಲು ಸಿದ್ಧರಿದ್ದೇವೆ. ಇಲ್ಲವೇ ಎತ್ತರಿಸುವುದಾದರೂ ನೆರವು ನೀಡುತ್ತೇವೆ ಎಂದರು.
ಆಗ ಸಚಿವ ಕಿಮ್ಮನೆ ಅವರು, ಈ ಕುರಿತು ಬೆಂಗಳೂರಿನಲ್ಲಿ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಒಂದೆರಡು ತಿಂಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಆಯುರ್ವೇದ ಕಾಲೇಜು: ಆಯುರ್ವೇದ ಕಾಲೇಜಿಗೆ ಅಗತ್ಯ ಭೂಮಿ ಸೋಗಾನೆ ಬಳಿ ಇನ್ನೂ ವಶಕ್ಕೆ ಪಡೆಯದಿರುವ ಬಗ್ಗೆ ವಿಶೇಷಾಧಿಕಾರಿ ಹಿರೇಮಠ್ ಅವರಿಂದ ಸಚಿವರು ಮಾಹಿತಿ ಪಡೆದರು.
ಒಟ್ಟು 100 ಎಕರೆ ಜಾಗ ಬೇಕಿದ್ದು, ಈ ಪ್ರದೇಶದಲ್ಲಿ 56 ಮಂದಿ ಬಗರ್ ಹುಕುಂ ಸಾಗುವಳಿದಾರರಿದ್ದಾರೆ. ಇವರಲ್ಲಿ 19 ಮಂದಿಗೆ ಈಗಾಗಲೇ 2 ಲಕ್ಷ ರು. ಪರಿಹಾರ ನೀಡಲಾಗಿದೆ. ಉಳಿದವರು ಹೆಚ್ಚು ಪರಿಹಾರ ನಿರೀಕ್ಷಿಸುತ್ತಿದ್ದಾರೆ ಎಂದರು.
ಸಚಿವ ಕಿಮ್ಮನೆ ಅವರು ಪ್ರತಿಕ್ರಿಯಿಸಿ, ಸಂಪೂರ್ಣ ವಿವರ ನೀಡಿ. ರೈತರೊಂದಿಗೆ ಚರ್ಚೆ ನಡೆಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

