ಸೂಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ
ಶಿವಮೊಗ್ಗ: ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ಮುಕ್ತಾಯವಾಗಿದ್ದು, ನಿವೇಶನ ಹಂಚಿಕೆಯಲ್ಲಿ ಅರ್ಧಕ್ಕರ್ಧ ಅಕ್ರಮ ನಡೆದಿದೆ ಎಂಬ ಸತ್ಯ ಹೊರಬಂದಿದೆ.
ಶುಕ್ರವಾರ ತನಿಖಾ ಸಮಿತಿಯ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎಚ್.ಬಿ. ರವೀಂದ್ರನಾಥ್ ನೇತೃತ್ವದ ತಂಡ ಸೂಡಾ ಹಂಗಾಮಿ ಅಧ್ಯಕ್ಷ ಜಿಲ್ಲಾಧಿಕಾರಿ ಅವರಿಗೆ ವರದಿಯನ್ನು ಸಲ್ಲಿಸಿತು.
ತನಿಖೆ ಹಿನ್ನೆಲೆ: ಸೂಡಾದಿಂದ ಹಂಚಿಕೆಯಾದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಅರ್ಹರು, ಅಪಾತ್ರರು ನಿವೇಶನ ಪಡೆದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವರೂ ಸಹ ತನಿಖೆಗೆ ಆಸಕ್ತಿ ತೋರಿಸಿದರು. ನಂತರ ಸೂಡಾ ಸಮಿತಿ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಿ ತನಿಖೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. ಇತ್ತೀಚಿಗೆ ರಚನೆಗೊಂಡು ಹಂಚಿಕೆಯಾದ ಲೇಔಟ್ನ ನಿವೇಶನ ಹಂಚಿಕೆಯ ಬಗ್ಗೆ ಮೊದಲು ತನಿಖೆ ನಡೆಸುವ ಉದ್ದೇಶದಿಂದ ನಿವೃತ್ತ ನ್ಯಾಯಾಧೀಶ ರವೀಂದ್ರನಾಥ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡ ರಚಿಸಲಾಗಿತ್ತು.
ಫೆ.12 ರಂದು ಸಮಿತಿ ರಚನೆಗೊಂಡಿತ್ತು, 3 ತಿಂಗಳಲ್ಲಿ ವರದಿ ಕೊಡುವಂತೆಯೂ ಸೂಚಿಸಲಾಗಿತ್ತು. ಈ ಮಧ್ಯೆ ಚುನಾವಣೆ ಕಾರ್ಯದಲ್ಲಿ ಸಮಿತಿಯ ಇಬ್ಬರು ಸದಸ್ಯರು ತೊಡಗಿಕೊಂಡಿದ್ದರಿಂದ 15 ದಿನ ತಡವಾಗಿ ಸಮಿತಿ ವರದಿ ಪೂರ್ಣಗೊಂಡು ಸಲ್ಲಿಕೆಯಾಗಿದೆ.
ಮುಂದೇನು?: ಜೂ.9 ರಂದು ಸೂಡಾ ಸಮಿತಿ ಸಭೆ ನಡೆಯುತ್ತದೆ. ಅಲ್ಲಿ ಈ ವರದಿಯನ್ನು ಜಿಲ್ಲಾಧಿಕಾರಿ ಅವರು ಮಂಡಿಸಲಿದ್ದಾರೆ. ನಂತರ ವರದಿ ಕುರಿತಂತೆ ಚರ್ಚೆ ನಡೆದು, ಮುಂದೆ ಕೈಗೊಳ್ಳಬೇಕಾದ ನಿರ್ಧಾರ ಕುರಿತಂತೆ ನಿರ್ಣಯಿಸಲಾಗುತ್ತದೆ. ಮಂಡನೆಯಾದ ನಂತರ ವರದಿಯನ್ನು ಯಾರು ಬೇಕಾದರೂ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಳ್ಳಲು ಅವಕಾಶವಿದೆ.
ವರದಿ ಬಗ್ಗೆ ಡಿಸಿ ವಿವರಣೆ: ತನಿಖಾ ಸಮಿತಿ ಸಲ್ಲಿಸಿರುವ ವರದಿಯನ್ನು ಸೂಡಾ ಸಮಿತಿ ಸಭೆಯಲ್ಲಿ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗುತ್ತದೆ. ಪ್ರಾಧಿಕಾರಕ್ಕೆ ಗಂಭೀರ ತಪ್ಪು ಮಾಹಿತಿ ಸಲ್ಲಿಕೆ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆಯೂ ಚರ್ಚಿಸಲಾಗುತ್ತದೆ. ಹಾಗೆಯೇ ಹೊರ ಜಿಲ್ಲೆಯವರು ನಿವೇಶನ ಪಡೆದವರಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಕೋರಬಹುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.
ತನಿಖಾಧಿಕಾರಿ ಹೇಳೋದೇನು?: ಸೂಡಾದಿಂದ 1305 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ನಿಯಮ ಉಲ್ಲಂಘನೆ ಹಾಗೂ ಆಡಳಿತ ಲೋಪ ಹಾಗೂ ಅರ್ಜಿದಾರರಿಗೆ ನ್ಯಾಯ ಒದಗಿಸಲಾಗಿದೆಯೆ ಎಂಬ ಬಗ್ಗೆ ತನಿಖೆ ಮಾಡಲಾಗಿದೆ.ಎಂದು ಪ್ರತಿಕ್ರಿಯೆ ನೀಡಿದರು. ಅಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಆಗಬೇಕೆಂಬುದು ನನ್ನ ಅಭಿಪ್ರಾಯ. ನಮ್ಮ ಮಿತಿಯಲ್ಲಿ ಮೇಲ್ನೋಟಕ್ಕೆ ಲೋಪವಾಗಿದ್ದನ್ನು ಗಮನಿಸಿದ್ದೇವೆ. ಇನ್ನೂ ಆಳವಾಗಿ ತನಿಖೆ ಮಾಡುವ ಅಗತ್ಯವಿದೆ ಎನಿಸುತ್ತಿದೆ ಎಂದರು.ತನಿಖಾ ತಂಡದ ಸದಸ್ಯರಾದ ಸೂಡಾ ಆಯುಕ್ತ ಜನಾರ್ದನ್, ಮಹಾನಗರ ಪಾಲಿಕೆ ಆಯುಕ್ತ ಮೂಕಪ್ಪ ಕರಭೀಮಣ್ಣನವರ್ ವರದಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಬೇಕಾಬಿಟ್ಟಿ ವರ್ತಿಸಿದರೆ ಸಂಸ್ಥೆ, ಸರ್ಕಾರದ ಗೌರವದ ಕಡಿಮೆಯಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ತಾವು ಆಮ್ ಆದ್ಮಿ ಪಕ್ಷದ ಹಿತೈಷಿಯಲ್ಲ. ಆದರೆ ಅಣ್ಣಾ ಹಜಾರೆ, ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಅವರೊಡನೆ ಭಾಗಿಯಾಗಿದ್ದೆ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಾವೀಗ ನಿವೃತ್ತರಾಗಿದ್ದು, ಸಂತೋಷವಾಗಿದ್ದೇನೆ. ಕೇಂದ್ರದಲ್ಲಿ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇತರೆ ಲೇಔಟ್ಗಳದ್ದೂ ತನಿಖೆ
ವಾಜಪೇಯಿ ಬಡಾವಣೆಯ ಅಕ್ರಮಗಳ ತನಿಖೆ ನಂತರ 2ನೇ ಹಂತದ ತನಿಖೆಯ ಬಗ್ಗೆ ಜಿಲ್ಲಾಧಿಕಾರಿ ಸುಳಿವು ನೀಡಿದ್ದಾರೆ. ಈ ಪ್ರಕರಣವನ್ನು ತಾತ್ವಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಉದ್ದೇಶವಿದೆ. ನಂತರ ಯಾವ ಲೇಔಟ್ ಸೈಟು ಹಂಚಿಕೆಯ ಬಗ್ಗೆ ತನಿಖೆಗೊಳಿಸಬೇಕೆಂಬುದು ನಂತರ ನಿರ್ಧರಿಸಲಾಗುತ್ತದೆ. ಸೂಡಾದಿಂದ ಈ ವರೆಗೆ ಹಂಚಿಕೆಯಾದ ಎಲ್ಲಾ ಸೈಟ್ ಹಂಚಿಕೆಯನ್ನೂ ತನಿಖೆಗೊಳಪಡಿಸಲಾಗುತ್ತದೆ ಎಂದರು.
ತನಿಖೆ ಹೇಗೆ? ಕಂಡುಬಂದಿದ್ದೇನೇನು?
ನಿವೇಶನಕ್ಕಾಗಿ ಸಲ್ಲಿಸಿದ 1305 ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡಿದ್ದಾರೆಯೇ ಎಂದು ಗಮನಿಸಲಾಗಿದೆ.
ಸೂಡಾ ಸಿಬ್ಬಂದಿ ಅರ್ಜಿಯನ್ನು ಸರಿಯಾಗಿ ಪರಿಷ್ಕರಿಸಿದ್ದಾರೆಯೇ ಎಂದು ಪರಿಶೀಲಿಸಲಾಗಿದೆ.
ಯಾವ ರೀತಿ ಪ್ರಭಾವ ಬೀರಿ, ಏನೆಲ್ಲಾ ತಪ್ಪು ಮಾಹಿತಿ ಕೊಟ್ಟು ನಿವೇಶನ ಪಡೆದಿದ್ದಾರೆ ಎಂಬುದನ್ನು ದಾಖಲಿಸಲಾಗಿದೆ.
ಅರ್ಜಿ-ದಾಖಲೆ ಸಲ್ಲಿಸುವಾಗ 22 ನಮೂನೆಯಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿದೆ.
ಹೊರ ಜಿಲ್ಲೆಯವರೂ ನಿವೇಶನ ಪಡೆದಿದ್ದರೆ, ಕೆಲ ಅಧಿಕಾರಿಗಳು ಪತ್ನಿಯರ ಹೆಸರಲ್ಲಿ ನಿವೇಶನ ಗಿಟ್ಟಿಸಿದ್ದಾರೆ.
ಒಮ್ಮೆ ಸೂಡಾ ಸೈಟ್ ಪಡೆದವರು ಮತ್ತೆ ಬೇರೆ ವಿಳಾಸ ನೀಡಿ ಅರ್ಜಿ ಹಾಕಿ ಸೈಟ್ ಗಿಟ್ಟಿಸಿದ್ದಾರೆ.
ಮದುವೆಯಾದ ಮಹಿಳೆಯರು ತಮ್ಮ ತಂದೆಯ ಹೆಸರು
ನಮೂದಿಸಿ ಸೈಟ್ ಪಡೆದಿದ್ದಾರೆ.
ಸೈಟ್ ಪಡೆದವರ ಪೈಕಿ ಶೇ.50 ಕ್ಕಿಂತ ಹೆಚ್ಚಿನವರ ಅರ್ಜಿಯಲ್ಲಿ ಅಕ್ರಮ-ಅಸಿಂಧು ಅಂಶಗಳು ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

