ದಂಡಾವತಿ ಸರ್ವೆ ಕಾರ್ಯಕ್ಕೆ ತಡೆ
ಸೊರಬ: ಆಗಾಗ್ಗೆ ತಾಲೂಕಿನ ಒಂದು ಭಾಗದ ಜನತೆಯ ನಿದ್ದೆ ಕೆಡಿಸುತ್ತಿರುವ ದಂಡಾವತಿ ಯೋಜನೆ ಸರ್ವೆ ಕಾರ್ಯಕ್ಕೆ ಮತ್ತೊಮ್ಮೆ ತಡೆಯೊಡ್ಡುವಲ್ಲಿ ಯೋಜನೆ ವಿರೋಧಿ ಸಮಿತಿ ಯಶಸ್ವಿಯಾಗಿದೆ.
ಸೋಮವಾರ ಬೆಳಿಗ್ಗೆ ಯೋಜನಾ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಯುತ್ತದೆಂಬ ಸುಳಿವು ಅರಿತ ಸಂತ್ರಸ್ತರು ಬೆಳ್ಳಂಬೆಳಿಗ್ಗೆಯಿಂದಲೆ ಯೋಜನಾ ಪ್ರದೇಶದತ್ತ ಧಾವಿಸಿದರು. ನಡಹಳ್ಳಿ ಬಳಿ ಯೋಜನಾ ಪ್ರದೇಶ ಮರೂರಿಗೆ
ತೆರಳುವ ಮಾರ್ಗದಲ್ಲಿ ಅಧಿಕಾರಿಗಳನ್ನು ತಡೆಯಲು ಸನ್ನದ್ಧರಾಗಿ ನಿಂತಿದ್ದರು.
ನಂತರ ಸರ್ವೆಗಾಗಿ ಬಂದ ಅಧಿಕಾರಿಗಳೊಂದಿಗೆ ಹೋರಾಟ ಸಮಿತಿ ಸದಸ್ಯರು ವಾಗ್ವಾದಕ್ಕೆ ಇಳಿದರು. ಒಂದು ಹಂತದಲ್ಲಿ ಕೈ ಕೈ ಮೀಲಾಯಿಸುವ ಹಂತ ತಲುಪಿತು. ವಿಷಯ ಅರಿತ ತಹಸೀಲ್ದಾರ್ ತಿಪ್ಪೂರಾವ್ ಮಧ್ಯ ಪ್ರವೇಶಿಸಿ, ಸಂತ್ರಸ್ತರ ಮನವೊಲಿಸುವ ಪ್ರಯತ್ನ ನಡೆಸಿದರು.
ಸಿದ್ಧರಾಮಯ್ಯ ಸಹ ವಿರೋಧಿಸಿದ್ದರು: ಹೋರಾಟ ಸಮಿತಿ ಅಧ್ಯಕ್ಷ ವಾಮದೇವಗೌಡ ಅಧಿಕಾರಿಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಹಿಂದೆ ಈ ಯೋಜನೆ ವಿರೋಧಿಸಿದ್ದರು. ಹಿಂದೆ 89 ದಿನ ನಡೆಸಿದ ಧರಣಿ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ನಮ್ಮನ್ನು ಬೆಂಬಲಿಸಿದ್ದರು.
ಪ್ರಸ್ತುತ ನಾವುಗಳು ಮುಖ್ಯಮಂತ್ರಿ, ನೀರಾವರಿ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾಂತ್ರಿಕವಾಗಿ ಸಾಧುವಲ್ಲದ ಯೋಜನೆ ಅನುಷ್ಠಾನ ಕುರಿತಂತೆ, ನಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ತೋರಿಸಿ, ಯೋಜನೆ ಕೈ ಬಿಡುವಂತೆ ಮನವೊಲಿಸುತ್ತೇವೆ. ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ತಹಸೀಲ್ದಾರ್ ಮಾತನಾಡಿ, ಸರ್ಕಾರದ ಆದೇಶ ಪಾಲಿಸುವುದು ನಮಗೆ ಅನಿವಾರ್ಯ. ಹಾಗಾಗಿ ಸರ್ವೆ ಕಾರ್ಯಕ್ಕೆ ಆದೇಶವಿರುವುದರಿಂದ ಇಲ್ಲಿಗೆ ಬಂದಿದ್ದೇವೆ. ಈ ವೇಳೆ ನಿಮ್ಮ ಅಹವಾಲನ್ನು ಕೂಡ ಸರ್ಕಾರಕ್ಕೆ ತಲುಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ನೀಮ್ಮ ಮನವಿಗೆ ನಾವೂ ಸ್ಪಂದಿಸಿದ್ದು, ಇಂದಿನ ಸರ್ವೆಕಾರ್ಯವನ್ನು ಇಲ್ಲಿಗೆ ಸ್ಥಗಿತಗೊಳಿಸುತ್ತೇವೆ ಎಂದರು.
ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶಾಸಕ ಮಧುಬಂಗಾರಪ್ಪ ಮಾತನಾಡಿ, ಈ ಹಿಂದೆಯೂ ನಾವು ಯೋಜನೆ ವಿರೋಧಿಸಿದ್ದೆವು. ಈಗಲೂ ವಿರೋಧಿಸುತ್ತೇವೆ. ಜನ ವಿರೋಧಿ ಯೋಜನೆ ಕೈಗೊಳ್ಳುವ ಮೊದಲು ಸರ್ಕಾರ ಇದರ ಸಾಧಕ ಬಾಧಕ ಅವಲೋಕಿಸಿ, ತೀರ್ಮಾನ ಕೈಗೊಳ್ಳುವುದು ಸೂಕ್ತ. ಕೆಲವೇ ದಿನಗಳಲ್ಲಿ ದಂಡಾವತಿ ಯೋಜನಾ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ, ಸ್ವೀಕರ್, ನೀರಾವರಿ ಸಚಿವರು, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಯೋಜನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಬನದಕೊಪ್ಪ ಮಂಜಪ್ಪ, ಲಕ್ಷ್ಮಣಪ್ಪ, ಶಿವಪ್ಪ, ರಾಜಪ್ಪ, ಬಸಪ್ಪ, ಕೆ.ವಿ. ಗೌಡ, ನಾಗಪ್ಪ ಮಾಸ್ತರ್, ಚಿದಾನಂದಗೌಡ ಜೇಡಗೇರೆ, ವೀರೇಂದ್ರ ಜೇಡಗೇರೆ, ವೀರಭದ್ರ, ನಾರಾಯಣಪ್ಪ, ದಿವಾಕರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

