ವಿವೇಚನಾ ಕೋಟಾ ಮಂಜೂರು ರದ್ದು: ಸಮಿತಿ ಶಿಫಾರಸು
ಶಿವಮೊಗ್ಗ: ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರವು ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಸಂದರ್ಭದಲ್ಲಿ ವಿವೇಚನಾ ಕೋಟಾ ಹೆಸರಿನಲ್ಲಿ ನೀಡಿರುವುದು ಅಸಿಂಧು ಆಗಿರುವುದರಿಂದ ಮಂಜೂರಾತಿ ರದ್ದು ಮಾಡಬೇಕೆಂದು ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ನೇತೃತ್ವದ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ. ಆದರೆ ಇದಕ್ಕೂ ಮುನ್ನ ಸಂಬಂಧಪಟ್ಟ ಫಲಾನುಭವಿಗಳಿಗೆ ಒಂದು ಅವಕಾಶ ನೀಡುವಂತೆ ಸೂಚಿಸಿದೆ.
ಪರಿಶೀಲನಾ ಸಮಿತಿ ವರದಿ ಗುರುತು ಮಾಡಿರುವ 22 ನ್ಯೂನತೆಗಳಿಗೆ ಸಂಬಂಧಿಸಿದ ಫಲಾನುಭವಿಗಳ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಿದೆ.
ಅರ್ಹತೆ ಇಲ್ಲದಿದ್ದರೂ ನಿವೇಶನ ಪಡೆದಿರುವ ಪ್ರಾಧಿಕಾರ ಸಿಬ್ಬಂದಿ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ಶಿಸ್ತುಕ್ರಮ, ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿ ಪಡೆದಿರುವ ನಿವೇಶನಗಳ ಮುಟ್ಟುಗೋಲು ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಸಲಹೆ ಮಾಡಿದೆ.
ಪತಿಪತ್ನಿ ಒಂದೇ ಕುಟುಂಬದ ಹಲವು ಸದಸ್ಯರು, ಈಗಾಗಲೇ ನಿವೇಶನ ಪಡೆದಿದ್ದರೂ ಮರೆಮಾಚಿ ನಿವೇಶನ ಪಡೆದವರನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧವೂ ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲು ಶಿಫಾರಸು ಮಾಡಿದೆ.
ಕಾನೂನು ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ತಕ್ಷಣವೇ ಕೈಗೊಳ್ಳಬಹುದಾದ ಕ್ರಮಗಳನ್ನೂ ಪರಿಶೀಲನಾ ಸಮಿತಿ ಹೇಳಿದೆ. ಆದರೆ ನೈಜ ಫಲಾನುಭವಿಗಳಿಗೆ ತೊಂದರೆ ಆಗದಂತೆ ಅವರು ಅನುಮತಿ ಕೋರಿ ಪತ್ರ ಸಲ್ಲಿಸಿದಾಗ ಸೂಕ್ತ ಪ್ರಮಾಣ ಪತ್ರ ಪಡೆದು ಅನುಮತಿ ನೀಡುವಂತೆ ಹೇಳಿದೆ.
ಕಟು ಟೀಕೆ: ಪರಿಶೀಲನಾ ಸಮಿತಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಸಂದರ್ಭದಲ್ಲಿ ಆಗಿರುವ ಲೋಪಗಳನ್ನು ಕಟು ಶಬ್ಧಗಳಲ್ಲಿ ಟೀಕಿಸಿದೆ. ನಾವು ಗಮನಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ನಿವೇಶನ ಹಂಚಿಕೆ) ನಿಯಮಗಳ ಉದ್ದೇಶವೇ ವಿಫಲವಾದದ್ದು ಕಂಡುಬರುತ್ತದೆ.
ಉಳ್ಳವರೇ ಇನ್ನೂ ಹೆಚ್ಚಿನ ಸ್ವತ್ತನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ಇಲ್ಲದವರು ಹತಾಶರಾಗಿ ಅಸಹಾಯಕರಾಗಿದ್ದಾರೆ. ಗೊತ್ತಿದ್ದೂ ಗೊತ್ತಿದ್ದು ಗಂಡ-ಹೆಂಡತಿಯರಿಬ್ಬರೂ ಒಂದೊಂದು ನಿವೇಶನ ಪಡೆದಿದ್ದಾರೆ. ಈಗಾಗಲೇ ನಿವೇಶನ ಹೊಂದಿದ ವ್ಯಕ್ತಿಗಳೇ ಪುನ: ಕಾನೂನುಬಾಹಿರವಾಗಿ, ಎಲ್ಲಾ ಸ್ವತ್ತುಗಳನ್ನು ತಾವೇ ದಕ್ಕಿಸಿ ಕೊಳ್ಳಬೇಕೆಂಬ ಆಸೆಬುರುಕತನದ ಪರಮಾವಧಿ ಪ್ರದರ್ಶಿಸಿ ನಿವೇಶನ ಪಡೆದಿದ್ದಾರೆ ಎಂದು ಸಮಿತಿ ಹೇಳಿದೆ.
ಸಮಿತಿ ಸೂಚಿಸಿದ ತಕ್ಷಣದ ಕ್ರಮ
* ವಾಜಪೇಯಿ ಬಡಾವಣೆ ವ್ಯಾಪ್ತಿಗೆ ನಿವೇಶನಗಳ ಪರಭಾರೆ, ಹಿಸ್ಸೆ ಮುಂತಾದವುಗಳನ್ನು ನಿಷೇಧಿಸಿ ಈ ಸಂಬಂಧ ಯಾವುದೇ ದಾಖಲೆ ನೋಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗಳಿಗೆ ಸೂಚಿಸುವುದು.
* ಈ ನಿವೇಶನಗಳ ಮೇಲೆ ಭೋಗ್ಯ, ಅಡಮಾನ ಸೇರಿದಂತೆ ಯಾವುದೇ ರೀತಿಯ ಋಣ ಭಾರ ಮಾಡದಂತೆ ಮುನ್ನೆಚ್ಚರಿಕೆಯಾಗಿ ಬ್ಯಾಂಕ್, ಸೊಸೈಟಿ ಮುಂತಾದ ಹಣಕಾಸು ಸಂಸ್ಥೆಗಳಿಗೆ ಸೂಚಿಸುವುದು.
* ನಿವೇಶನಗಳ ಖಾತೆ ವರ್ಗಾವಣೆ ಮಾಡದಂತೆ ಪ್ರಾಧಿಕಾರಕ್ಕೆ ಸೂಚಿಸುವುದು.
* ವಿವಾದಿತ ನಿವೇಶನಗಳನ್ನು ಯಾರೂ ಖರೀದಿ ಮಾಡದಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸುವುದು, ಬಡಾವಣೆ ಹತ್ತಿರ ಒಂದು ಫಲಕ ಪ್ರದರ್ಶಿಸುವುದು.
* ಪ್ರಕರಣದಲ್ಲಿ ಭಾಗಿಯಾದ ಆರೋಪ ಇರುವ ಪ್ರಾಧಿಕಾರದ ನೌಕರನ್ನು ಬೇರೆ ಕಡೆ ವರ್ಗಾಯಿಸಲು ಕ್ರಮ ಕೈಗೊಳ್ಳುವುದು.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

