ಪದವಿ ಜತೆ ಕೌಶಲ್ಯ ರೂಢಿಸಿಕೊಳ್ಳಿ
ಸಾಗರ: ಪದವಿಪತ್ರ ಹಿಡಿದುಕೊಂಡು ವಿದ್ಯಾಲಯದಿಂದ ಹೊರಬರುವ ವಿದ್ಯಾರ್ಥಿಗಳು ಸಮಾಜವನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ಎ. ಬಾರಿ ಹೇಳಿದರು.
ಇಲ್ಲಿನ ಎಲ್ಬಿ ಮತ್ತು ಎಸ್ಬಿಎಸ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಗಳಿಸುವ ಜತೆಗೆ ಕೌಶಲ್ಯ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜ್ಞಾನ ಸಂಪಾದನೆಗೆ ಶಿಕ್ಷಣ ಪಡೆಯುವುದು ಒಂದು ಭಾಗವಾದರೆ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯುವುದು ಇನ್ನೊಂದು ಭಾಗ. ಪದವಿ ಸರ್ಟಿಫಿಕೇಟ್ ಉದ್ಯೋಗಕ್ಕೆ ಪ್ರವೇಶಪತ್ರ ಇದ್ದಂತೆ. ಆದರೆ, ಕೌಶಲ್ಯ ಬದುಕಿನ ಸರ್ಟಿಫಿಕೇಟ್. ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಅರ್ಹತೆ ಇದ್ದರೆ ಎಲ್ಲಿಯೂ ಸಲ್ಲುತ್ತಾರೆ. ಬದುಕಿನಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದರು.
ಅಂತರಂಗದ ಧ್ವನಿ: ಅಧ್ಯಕ್ಷತೆ ವಹಿಸಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್ ಮಾತನಾಡಿ, ಉತ್ತಮ ವ್ಯಕ್ತಿತ್ವ ಗಳಿಸಿಕೊಂಡರೆ ಅವಕಾಶ ತಾನೆ ತಾನಾಗಿ ಬರುತ್ತದೆ. ನಡೆ- ನುಡಿಯಲ್ಲಿ ಸಮನ್ವಯತೆಯಿದ್ದರೆ ವಿಶೇಷವಾದ ವ್ಯಕ್ತಿತ್ವ ದಕ್ಕುತ್ತದೆ. ಪದವಿ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು. ಪದವಿಯವರೆಗೆ ವಿದ್ಯಾರ್ಥಿಗಳಿಗೆ ಪೋಷಕರ ಬೆಂಬಲ, ಮಾರ್ಗದರ್ಶನವಿರುತ್ತದೆ. ಪದವಿ ಪಡೆದ ನಂತರ ನಿಮ್ಮ ದಾರಿಯನ್ನು ನೀವೇ ಕಂಡುಕೊಳ್ಳಬೇಕು. ಇಂತಹ ಹೊತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಅಂತರಂಗದ ಧ್ವನಿಗೆ ಬೆಲೆ ಕೊಡಬೇಕು ಎಂದರು.
ಎಂಡಿಎಫ್ ಕಾರ್ಯದರ್ಶಿ ಎಂ.ವಿ. ಮೋಹನ್, ಸಹ ಕಾರ್ಯದರ್ಶಿ ರವೀಂದ್ರ ಸಭಾಹಿತ್, ಪ್ರೊ. ಟಿ.ಪಿ. ಅಶೋಕ್, ಪ್ರೊ. ಐ.ಜಿ.ಪ್ರಕಾಶ್, ಪಿ.ವಿ. ಸುಬ್ರಾವ್, ಪಿ. ಸುಬ್ರಾವ್ ಇದ್ದರು. ಪ್ರಾಚಾರ್ಯ ಡಾ. ಟಿ.ಎಸ್. ರಾಘವೇಂದ್ರ ಸ್ವಾಗತಿಸಿದರು. ಪ್ರೊ. ಎಚ್.ಎಂ. ಶಿವಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

