ಹಾಲಿಗೂ ಜಾತಿಲೇಪ: ಬಸವರಾಜಪ್ಪ ಸಿಡಿಮಿಡಿ
ಶಿವಮೊಗ್ಗ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಹೀನಾಯ ಸೋಲು ಕಂಡಿದ್ದರೂ ಸಹ ಅದರಿಂದ ತಕ್ಕ ಪಾಠ ಕಲಿತಿಲ್ಲ. ಇದೀಗ ಹಾಲಿಗೂ ಜಾತಿ ಲೇಪ ಹಚ್ಚಿದ್ದು, ಇದು ಸರಿಯಾದ ನಿರ್ಧಾರವಲ್ಲ. ಎಲ್ಲಾ ರೈತರನ್ನು ಸಮಾನವಾಗಿ ಕಾಣಬೇಕು. ಎಲ್ಲಾ ರೈತರಿಗೂ ರು. 2 ಹೆಚ್ಚುವರಿ ಪ್ರೋತ್ಸಾಹ ಧನ ನೀಡಿ ಎಂದು ಸರ್ಕಾರವನ್ನು ರಾಜ್ಯ ರೈತ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ,
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಸೂಕ್ತ ಎಚ್ಚರಿಕೆ ನೀಡಿದ್ದಾರೆ. ಆದರೂ ಸಹ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತಾರತಮ್ಯ ನೀತಿ ಇದುವರೆಗೆ ಕೈಬಿಟ್ಟಿಲ್ಲ. ಪರಿಶಿಷ್ಟ ಜಾತಿ, ವರ್ಗದವರಿಗೆ ಹೆಚ್ಚುವರಿಯಾಗಿ 2 ರುಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದೆ. ಎಲ್ಲಾ ಉತ್ಪಾದಕರಿಗೂ ಈಗಾಗಲೇ ನಾಲ್ಕು ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ ಒಂದು ವರ್ಗಕ್ಕೆ ಮಾತ್ರ ಹೆಚ್ಚುವರಿಯಾಗಿ ಎರಡು ರುಪಾಯಿ ಘೋಷಿಸಿರುವುದು ಸರಿಯಲ್ಲ. ಇದು ರೈತ ಸಮೂಹದಲ್ಲಿ ತಾರತಮ್ಯ ನೀತಿಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು.
ಮುಖಂಡರಾದ ಕಡಿದಾಳು ಶಾಮಣ್ಣ, ಈಶಣ್ಣ, ರಾಜು, ರಾಘವೇಂದ್ರ, ಚಂದ್ರಪ್ಪ, ಶಿವಮೂರ್ತಿ, ಮಲ್ಲಿಕಾರ್ಜುನ ಇದ್ದರು.
ವಿಧಾನಸೌಧ ಮುತ್ತಿಗೆ 23ರಂದು
ರೈತರ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜೂ.23ರಂದು ವಿಧಾನಸೌಧ ಮುತ್ತಿಗೆ ಹಮ್ಮಿಕೊಂಡಿದ್ದು, ಸಾವಿರಾರು ರೈತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಬಸವರಾಜಪ್ಪ ತಿಳಿಸಿದರು. ಕೃಷಿ ಬೆಲೆ ಆಯೋಗ ರೈತ ಸಂಘದ ಪ್ರತಿನಿಧಿಗಳನ್ನು ಒಳಗೊಂಡಂತೆ ಕೂಡಲೇ ಸಮಿತಿ ರಚನೆ ಮಾಡಬೇಕು. ವರ್ಷವಿಡಿ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಲು ರು. 25 ಸಾವಿರ ಕೋಟಿ ಆವರ್ತ ನಿಧಿ ತೆಗೆದಿಡಬೇಕು. ರೈತರ ಸಂಪೂರ್ಣ ಸಾಲ ರದ್ದು ಮಾಡಬೇಕು. ಸರ್ಕಾರವೇ ಕಬ್ಬಿನ ಬೆಲೆ ರು. 2500 ನಿಗದಿ ಮಾಡಿ ಆದೇಶ ಹೊರಡಿಸಿದಂತೆ ಬಾಕಿ ಹಣವನ್ನು ಶೇ.18ರ ಬಡ್ಡಿ ಸಮೇತ ಕೂಡಲೇ ಕೊಡಿಸಬೇಕು. ಐಪಿ ಸೆಟ್ಗಳಿಗೆ ಹಗಲು 16 ಗಂಟೆ ಗುಣಮಟ್ಟದ ವಿದ್ಯುತ್ ನೀಡಬೇಕು. ಕುಲಾಂತರಿ ತಳಿ ಪ್ರಯೋಗವನ್ನು ರೈರ ಜಮೀನಿನಲ್ಲಿ ಮಾಡಬಾರದು. ಕನಕ ಬಿಟಿ ಹತ್ತಿ ಬೀಜ ದೋಷದಿಂದ ಕೂಡಿದ್ದು, ಹೂ- ಕಾಯಿ ಬಿಟ್ಟಿಲ್ಲ. ಆದ್ದರಿಂದ ಸರ್ಕಾರ ಸಂಬಂಧಪಟ್ಟ ಕಂಪನಿಯಿಂದ ಪರಿಹಾರ ಕೊಡಿಸಬೇಕೆಂಬ ಬೇಡಿಕೆ ಮಂಡಿಸಿ ಹೋರಾಟ ಹಮ್ಮಿಕೊಂಡಿರುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

