'ಕಡಿಮೆ ನೀರಿನ ಬೆಳೆ ಬಗ್ಗೆ ಗಮನಹರಿಸಿ'
ಶಿಕಾರಿಪುರ: ಹವಾಮಾನ ತಜ್ಞರ ಪ್ರಕಾರ ಈ ಮಳೆಗಾಲದಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ಸಾಧ್ಯತೆಯಿದ್ದು, ರೈತರು ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಯ ಬಗ್ಗೆ ವಿಶೇಷ ಗಮನಹರಿಸ ಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಯಡಿಯೂರಪ್ಪನವರು ರೈತ ಸಮುದಾಯಕ್ಕೆ ಮನವಿ ಮಾಡಿದರು.
ಪಟ್ಟಣದ ಕೃಷಿ ಇಲಾಖೆ ನೂತನ ಕಟ್ಟಡಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಅವರು ಕಟ್ಟಡ ಕಾಮಗಾರಿ ಹಾಗೂ ಸಿಬ್ಬಂದಿ ಕೊಠಡಿ ಪರಿಶೀಲಿಸಿ ನಂತರದಲ್ಲಿ ರೈತರ ಆಕಸ್ಮಿಕ ಸಾವು ಪರಿಹಾರ ಯೋಜನೆಯ ಅರ್ಹರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಸರ್ಕಾರದ ಕೆಲಸ ಸುಗಮವಾಗಿ ಸಾಗಿ ಜನಸಾಮಾನ್ಯರಿಗೆ ಸುಲಭವಾಗಿ ಯೋಜನೆಯ ಸದುಪಯೋಗಕ್ಕೆ ಅಗತ್ಯವಾದ ಎಲ್ಲಾ ಸರ್ಕಾರಿ ಕಚೇರಿಗಳನ್ನು ನೂತನವಾಗಿ ನಿರ್ಮಿಸಿ ಜಿಲ್ಲಾ ಕೇಂದ್ರಕ್ಕೆ ಸರಿಸಮಾನ ಕಾಮಗಾರಿಗಳನ್ನು ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಪೂರ್ಣಗೊಳಿಸಿದ್ದಾಗಿ ತಿಳಿಸಿದರು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳಿಲ್ಲದೆ ತೊಂದರೆಯಾಗದಂತೆ ಅಗತ್ಯ ಸಿಬ್ಬಂದಿ ನಿಯೋಜನೆಗೆ ಎಲ್ಲಾ ಇಲಾಖೆಗಳಿಂದ ವಿವರ ಪಡೆಯಲಾಗುವುದು ಎಂದ ಅವರು ಕೃಷಿ ಇಲಾಖೆಯ ಸಿಬ್ಬಂದಿ ಕೊರತೆ ಗಮನಕ್ಕೆ ಬಂದಿದ್ದು ಕೂಡಲೇ ಸರ್ಕಾರದ ಜತೆ ಚರ್ಚಿಸಿ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಬಾರಿಯ ಮುಂಗಾರು ಹವಾಮಾನ ತಜ್ಞರ ಪ್ರಕಾರ ನಿರೀಕ್ಷೆಯಷ್ಟು ಮಳೆಯಾಗುವ ಸಂಭವ ಕಡಿಮೆಯಿದ್ದು, ರೈತಾಪಿ ವರ್ಗ ಹೆಚ್ಚು ನೀರು ಅವಲಂಬಿಸದ ಬೆಳೆಯತ್ತ ಹೆಚ್ಚಿನ ಗಮನ ನೀಡುವಂತೆ ಮನವಿ ಮಾಡಿದರು.
ಬಿತ್ತನೆ ಬೀಜ - ಎಚ್ಚರ ವಹಿಸಿ: ರೈತ ವರ್ಗ ಕಾಳಸಂತೆಯಲ್ಲಿ ಹೆಚ್ಚು ಬೆಲೆ ನೀಡಿ ಗೊಬ್ಬರ ಬೀಜ ಖರೀದಿಸಿ ಮೋಸ ಹೋಗದಂತೆ ಎಚ್ಚರಿಸಿದರು. ಕೇಂದ್ರ ಸರ್ಕಾರ ಇಂತಹ ಕಳಪೆ ಬಿತ್ತನೆ ಬೀಜ ಕಂಪನಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದ್ದು ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಬೇಕಾಗಿದೆ ಎಂದು ಹೇಳಿದರು. ಇದೇ ವೇಳೆ ರೈತ ಜೀನಳ್ಳಿ ದೊಡ್ಡಪ್ಪ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿನ ಕೋಟ್ಯಂತರ ವೆಚ್ಚದ ಡಯಾಲಸಿಸ್ ಯಂತ್ರ ಸೂಕ್ತ ತಜ್ಞರ ನೇಮಕವಿಲ್ಲದೆ ನಿರುಪಯಕ್ತವಾಗಿದ್ದು, ಜನಸಾಮಾನ್ಯರು ಶಿವಮೊಗ್ಗ ಮತ್ತಿತರ ಕಡೆ ತೆರಳಬೇಕಾದ ಅನಿವಾರ್ಯ ಸ್ಥಿತಿ ಉದ್ಭವವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳ ಗಮನ ಸೆಳೆದರು. ಜಿಲ್ಲಾಸ್ಪತ್ರೆ ಉನ್ನತೀಕರಣದಿಂದಾಗಿ ನಿತ್ಯ ದೊಡ್ಡ ಪ್ರಮಾಣದಲ್ಲಿ ಅಕ್ಕಪಕ್ಕದ ತಾಲೂಕಿನಿಂದ ರೋಗಿಗಳು ಆಗಮಿಸುತ್ತಿದ್ದು ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉದ್ಭವಿಸಿದೆ. ಡಯಾಲಸಿಸ್ ಯಂತ್ರದ ತರಬೇತಿ ಪಡೆದ ಅಧಿಕಾರಿ ನೇಮಕವಾಗಿದ್ದು ಶೀಘ್ರದಲ್ಲಿಯೇ ಆಗಮಿಸಲಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದಾಗಿ ತಿಳಿಸಿದರು. ತಲಾ 1 ಲಕ್ಷದ ಪರಿಹಾರ ಚೆಕ್ಕನ್ನು ಸಂಸದ ಯಡಿಯೂರಪ್ಪನವರು ಹಾವು ಕಡಿತದಿಂದ ಸಾವಿಗೀಡಾದ ನೀಲಮ್ಮ, ಬಸವರಾಜನಾಯ್ಕ, ಶಶಿಧರ, ಗಿರೀಶ್ ಹಾಗೂ ವಿದ್ಯುತ್ ಸಂಪರ್ಕದಿಂದ ಸಾವಿಗೀಡಾದ ನಿತೀಶ್ ಕುಟುಂಬದವರಿಗೆ ವಿತರಿಸಿದರು. ಮಾಜಿ ಸಂಸದ ರಾಘವೇಂದ್ರ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ, ಮುಖಂಡ ಗುರುಮೂರ್ತಿ, ಮೋಹನ್, ಹಾಲಪ್ಪ, ಸುಕೇಂದ್ರಪ್ಪ, ಸಹಾಯಕ ಕೃಷಿ ನಿರ್ದೇಶಕ ಡಾ.ಪ್ರಭಾಕರ್, ಕಿರಣಕುಮಾರ್, ಗುರುರಾಜ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

