ಶಿವಮೊಗ್ಗ

ಮಾನದಂಡದಂತೆ ಶುಲ್ಕ ನೀತಿ ಜಾರಿ: ನಾರಾಯಣರಾವ್

Published On :

ಶಿವಮೊಗ್ಗ:  ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತದ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿರುವ ಮಾನದಂಡ ಅನುಸರಿಸಲಾಗುತ್ತಿದೆ. ಯಾವುದೇ ಸೀಟನ್ನು ಆಡಳಿತ ಮಂಡಳಿ ಕೋಟಾದಲ್ಲಿ ಭರ್ತಿ ಮಾಡುತ್ತಿಲ್ಲ. ಲಭ್ಯವಿರುವ ಎಲ್ಲಾ ಸೀಟುಗಳನ್ನು ಮೀಸಲಾತಿ ಪದ್ಧತಿಯಂತೆ ಭರ್ತಿ ಮಾಡಲಾಗುತ್ತಿದೆ ಎಂದು ಸಮಿತಿ ಕಾರ್ಯದರ್ಶಿ ಎನ್.ಟಿ. ನಾರಾಯಣರಾವ್ ಹೇಳಿದ್ದಾರೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲೂ ಸಹ ವಿದ್ಯಾರ್ಥಿಗಳ ಪ್ರವೇಶಕ್ಕೆ ಇದೇ ನಿಯಮ ಅನುಸರಿಸಲಾಗುತ್ತಿದೆ. ಸರ್ಕಾರದ ಕಾನೂನಿಗೆ ವಿರುದ್ಧವಾಗಿ ಶುಲ್ಕ ಸಂಗ್ರಹಿಸಿಲ್ಲ. ಸಂಗ್ರಹವಾಗುವ ಶುಲ್ಕದ ಮಾಹಿತಿಯನ್ನು ಪ್ರತಿ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಈ ಶುಲ್ಕವನ್ನು ವೇತನ, ಶೈಕ್ಷಣಿಕ ಸೌಲಭ್ಯ ಒದಗಿಸಲು ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಕರ್ ಸಂಭ್ರಮ
ನಾಳೆಯಿಂದ
ಶಿವಮೊಗ್ಗ:  ಶಿವಮೊಗ್ಗ ಬೆಳ್ಳಿಮಂಡಲ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಸಿನಿಮೊಗೆ, ವಾರ್ತಾ ಇಲಾಖೆಗಳ ಆಶ್ರಯದಲ್ಲಿ ಜೂನ್ ತಿಂಗಳ ಚಿತ್ರೋತ್ಸದ ಅಂಗವಾಗಿ -ಆಸ್ಕರ್ ಸಂಭ್ರಮ, ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರಗಳ ಉತ್ಸವ-ವನ್ನು ಜೂ.27ರಿಂದ 29ರವರೆಗೆ ಕರ್ನಾಟಕ ಸಂಘ ಭವನದಲ್ಲಿ ಆಯೋಜನೆಗೊಂಡಿದೆ.
ನಿತ್ಯ ಸಂಜೆ 6.30ಕ್ಕೆ ಆರಂಭವಾಗುವ ಈ ಚಿತ್ರೋತ್ಸವದಲ್ಲಿ ಜೂ.27 ರಂದು 'ಸೆಂಟ್ ಆಫ್ ಎ ವುಮನ್‌'  (ಅಮೆರಿಕಾ ಇಂಗ್ಲಿಷ್ 1992 ಮಾರ್ಟಿನ್ ಬ್ರಿಸ್ಟ್ 156 ನಿಮಿಷ) ಪ್ರದರ್ಶನವಿದ್ದು, ಚಿತ್ರ ಕುರಿತು ಪ್ರೊ. ಕೆ. ಅರವಿಂದಕುಮಾರ್ ವಿಶ್ಲೇಷಣೆ ನಡೆಸಲಿದ್ದಾರೆ. ಜೂ.28 ರಂದು ಪ್ರದರ್ಶನಗೊಳ್ಳಲಿರುವ ಗ್ರಾವಿಟಿ (ಇಂಗ್ಲೆಂಡ್ ಇಂಗ್ಲಿಷ್ 2013: ಆಲ್ಫೋನ್ಸೋ ಕ್ಯೂರಾನ್ 91 ನಿಮಿಷ) ಚಿತ್ರವನ್ನು ಡಾ. ನಾಗಮಣಿ ವಿಶ್ಲೇಷಿಸಲಿದ್ದಾರೆ. ಜೂ.29 ರಂದು 'ದ ಲಾಸ್ಟ್ ಎಂಪರರ್‌' (ಚೈನಾ ಇಂಗ್ಲಿಷ್ 1987 ಬರ್ನಾಡೋ ಬೆರ್ಟೋಲುಸ್ಸಿ 160 ನಿಮಿಷ) ಚಿತ್ರ ಪ್ರದರ್ಶನವಿದ್ದು, ಶಿವಮೊಗ್ಗ ಬೆಳ್ಳಿಮಂಡಲದ ಕಾರ್ಯದರ್ಶಿ ಡಾ. ಎಚ್.ಎಸ್. ನಾಗಭೂಷಣ ವಿಶ್ಲೇಷಿಸಲಿದ್ದಾರೆ. ಬೆಳ್ಳಿಮಂಡಲ ಪೋಷಕ ಸದಸ್ಯರಲ್ಲದವರಿಗೆ 20 ಪ್ರವೇಶ ಶುಲ್ಕವಿದೆ. ಈ ಮೂರೂ ದಿನಗಳ ಕಾಲ ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲದಿರುವುದರಿಂದ ಚಲನಚಿತ್ರ ಪ್ರದರ್ಶನ ಸಮಯಕ್ಕೆ ಸರಿಯಾಗಿ ಆರಂಭವಾಗಲಿದೆ ಎಂದು ಬೆಳ್ಳಿಮಂಡಲದ ಸಂಚಾಲಕ ವೈದ್ಯ, ಕಾರ್ಯಾಧ್ಯಕ್ಷ ಡಾ. ಅಶೋಕ್ ಪೈ, ಕಾರ್ಯದರ್ಶಿಗಳಾದ ಡಾ. ನಾಗಭೂಷಣ, ಚೇತನ್ ಕೋರಿದ್ದಾರೆ.
ತೊಟ್ಟಿಯಲ್ಲಿ ಬಿದ್ದು ದನ
ಸಾವು: ಕಾಲೇಜಿಗೆ ರಜೆ
ಶಿರಾಳಕೊಪ್ಪ:  ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿದ್ದ ತೆರೆದ ತೊಟ್ಟಿಯಲ್ಲಿ ದನವೊಂದು ಬಿದ್ದು ಮೃತಪಟ್ಟಿದೆ. ಅಲ್ಲದೆ, ಕೊಳೆತು ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆ ಕಾಲೇಜಿನಲ್ಲಿ ಪಾಠ-ಪ್ರವಚನ ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಸಲಾಯಿತು. ದನ 2 ದಿನಗಳ ಹಿಂದೆ ಕಾಲೇಜ್ ಕಾಂಪೌಂಡ್ ಪ್ರವೇಶಿದ್ದು, ತೊಟ್ಟಿಯಲ್ಲಿ ಬಿದ್ದು ಹೊರಬರಲಾಗದೆ ಮುಳುಗಿ ಮೃತಪಟ್ಟಿದೆ. ನಂತರ ಪ.ಪಂ. ಸಿಬ್ಬಂದಿ ಸ್ಥಳಕ್ಕೆ ತೆರಳಿ ದನದ ಶವವನ್ನು ಸಾಗಿಸಿದರು. ಕಾಲೇಜಿಗೆ ಸಂಪೂರ್ಣ ಕಾಂಪೌಂಡ್ ಇದ್ದರೂ ದನ ಹೇಗೆ ತೊಟ್ಟಿಯಲ್ಲಿ ಬಿತ್ತು ಎಂಬ ಪ್ರಶ್ನೆ ಕಾಲೇಜು ಕ್ಯಾಂಪಸ್‌ನಲ್ಲಿ ಕೇಳಿಬಂತು.
ಶೇಖ್ ಮಹಬೂಬ್ ಅಧ್ಯಕ್ಷ
ಭದ್ರಾವತಿ:  ಪಟ್ಟಣದ ಅಂಜುಮನ್ ಇಸ್ಲಾಂ ಅಲ್ ಮುಸ್ಲಿಮೀನ್ ಸಂಸ್ಥೆ ಅಧ್ಯಕ್ಷರನ್ನಾಗಿ ಮಾಜಿ ನಗರಭಾಧ್ಯಕ್ಷ ಹಾಗೂ ಷಾಹಿ ಮಸೀದಿಯ ಅಧ್ಯಕ್ಷ ವಿ.ಶೇಖ್ ಮಹಬೂಬ್ ಅವರನ್ನು ನೇಮಿಸಿ ಕೇಂದ್ರೀಯ ಮುಸ್ಲಿಂ ಸಂಘಟನೆ ಆದೇಶ ಹೊರಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.