ಶಿವಮೊಗ್ಗ

ಮೂಢನಂಬಿಕೆ ವೈಭವೀಕರಣ ಸಲ್ಲ: ಕಾಗೋಡು

Published On :

ಕ.ಪ್ರ.ವಾರ್ತೆ ್ಣ ಸಾಗರ ್ಣ ಮಾ. 4
ಆಧುನಿಕತೆ, ವಿಜ್ಞಾನ ತಂತ್ರಜ್ಞಾನ ಎಷ್ಟೆ ಮುಂದುವರಿದಿದ್ದರೂ ಮೌಢ್ಯದ ಜಾಡಿನಿಂದ ಜನರು ಹೊರಗೆ ಬಂದಿಲ್ಲ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಬೆಳಲಮಕ್ಕಿಯ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವೈಜ್ಞಾನಿಕ ವಸ್ತುಪ್ರದರ್ಶನ ಉದ್ಘಾಟಿಸಿ, ಮೂಢನಂಬಿಕೆ, ಕಂದಾಚಾರ, ಅಂಧಾನುಕರಣೆ ನಿವಾರಣೆಯಾಗಬೇಕಾದರೆ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು ಎಂದು ಹೇಳಿದರು.
ಆಸಕ್ತಿ ಮೂಡಿಸಿ: ಮನುಷ್ಯನ ಬದುಕು ನೆಮ್ಮದಿಯಾಗಿರಬೇಕಾದರೆ ನಂಬಿಕೆ ಇರಬೇಕು. ಆದರೆ, ಮೂಢನಂಬಿಕೆಯನ್ನೆ ವೈಭವೀಕರಿಸುವ ಕೆಲವಾರು ಆಚರಣೆಗಳಿಂದ ಮನುಷ್ಯ ದೂರವೆ ಉಳಿಯಬೇಕು. ಹಿರಿಯರು ಮಕ್ಕಳಲ್ಲಿ ವಿಜ್ಞಾನ ಕುರಿತು ಆಸಕ್ತಿ ಬೆಳೆಸುವ ಅಗತ್ಯವಿದೆ. ಪಠ್ಯದಲ್ಲಿನ ವಿಜ್ಞಾನ ಮಾಹಿತಿ ಜತೆಗೆ ಹೊಸ- ಹೊಸ ಆವಿಷ್ಕಾರಗಳನ್ನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಾಡುತ್ತಿರುವುದು ಅವರಲ್ಲಿನ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ನಂತರ ವಿದ್ಯಾರ್ಥಿಗಳು ವಿಜ್ಞಾನ ಪಠ್ಯದ ಬಗೆಗಿನ ತಮ್ಮ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪದವಿ ಸಂದರ್ಭದಲ್ಲಿಯಂತೂ ಐಟಿಬಿಟಿಯಂತಹ ಕ್ಷೇತ್ರಗಳಿಗೆ ಹೋಗುವ ಧಾವಂತ ತೋರಿಸುತ್ತಿದ್ದಾರೆ. ಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ಇಂತಹ ವಸ್ತು ಪ್ರದರ್ಶನಗಳಲ್ಲಿ ತಯಾರಿಸಿರುವ ವೈಜ್ಞಾನಿಕ ಪ್ರಯೋಗಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದರು.
ನಗರಸಭೆ ಸದಸ್ಯ ರವಿ ಜಂಬಗಾರು ಮಾತನಾಡಿ, ಕೇಂದ್ರ ಸರ್ಕಾರ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಿರುವುದು ಮಕ್ಕಳು ಬೇರೆ- ಬೇರೆ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಾಲ್ಕು ಗೋಡೆಯ ಶಿಕ್ಷಣದ ಜತೆಗೆ ವೈಜ್ಞಾನಿಕ ಚಿಂತನೆ ಬೆಳೆಸುವ ಇಂತಹ ಚಟುವಟಿಕೆಗಳ ಅಗತ್ಯ ಹೆಚ್ಚು ಇದೆ ಎಂದರು.
ನಗರಸಭೆ ಸದಸ್ಯ ಎನ್. ಶ್ರೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಸಮನ್ವಯಾಧಿಕಾರಿ ವೈ.ಗಣೇಶ್, ಮೂರ್ತಿ, ಮುಖ್ಯ ಶಿಕ್ಷಕಿ ಮಹಾದೇವಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.