ಶಿವಮೊಗ್ಗ

ಮೊದಲ ದಿನವೇ ನೀತಿ ಸಂಹಿತೆ ಗುಮ್ಮ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.5
ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಯಾಗಿದೆ. ಜೊತೆ ಜೊತೆಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನೀತಿಸಂಹಿತೆ ಭಯ ಅಟ್ಟಿಕೊಂಡು ಬಂದಿದೆ.
ಪರಿಣಾಮ, ಕೆಲವು ಸರ್ಕಾರಿ ಕಾರ್ಯಕ್ರಮಗಳು ಮೊಟಕುಗೊಂಡವು, ಮತ್ತಷ್ಟು ಕಾರ್ಯಕ್ರಮ ನಡೆಯಲೇ ಇಲ್ಲ, ಸರ್ಕಾರಿ ವಾಹನಗಳು ಮುಂದಡಿಯಿಡಲಿಲ್ಲ, ಮೊಟಕುಗೊಂಡ ಕಾರ್ಯಕ್ರಮಗಳತ್ತ ಅಧಿಕಾರಿಗಳು ಸುಳಿಯಲಿಲ್ಲ.  ಇನ್ನೊಂದೆಡೆ ರಾಜಕಾರಣಿಗಳು ತರಾತುರಿಯಲ್ಲೇ ಯೋಜನೆಗಳಿಗೆ ಉದ್ಘಾಟನೆ- ಶಂಕುಸ್ಥಾಪನೆ ನೆರವೇರಿಸಿ ಕೈತೊಳೆದುಕೊಂಡರು.
ಆಯನೂರು- ಇಲ್ಲಿನ ಹೋಬಳಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ ಉಪವಿಭಾಗಾಧಿಕಾರಿ ಕುಸುಮ ಕುಮಾರಿ ಸ್ಥಳದಿಂದ ಕಾಲ್ಕಿತ್ತ ಪ್ರಸಂಗ ಬುಧವಾರ ನಡೆಯಿತು.
ತರಾತುರಿಯಲ್ಲಿ ಆಯೋಜನೆಗೊಂಡ ನಾಡ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಂಜಾನೆಯೇ ಎಸಿಯವರು ಆಯನೂರಿಗೆ ಆಗಮಿಸಿದ್ದರು. ಈ ಮಧ್ಯೆ ಚುನಾವಣಾ ಆಯೋಗ ನೀತಿ ಸಂಹಿತೆ ಘೋಷಣೆ ಮಾಡುತ್ತಾರೆಂಬ ಖಚಿತ ಸುಳಿವು ಅವರಿಗೆ ಸಿಗುತ್ತಿದ್ದಂತೆಯೇ ಅವರು ಅಲ್ಲಿ ನಿಲ್ಲದೆಯೇ ಹೊರಟೇ ಬಿಟ್ಟರು. ಈ ಸಂದರ್ಭ ಕಾರ್ಯಕ್ರಮ ನಡೆಸಬಾರದೆಂಬ ಚರ್ಚೆ ನಡೆಯಿತಾದರೂ ಅಂತಿಮವಾಗಿ ತರಾತುರಿಯಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು. ಅಧಿಕಾರಿಗಳು ಮಾತ್ರ ವೇದಿಕೆ, ನಾಡಕಚೇರಿ ಸುತ್ತಮುತ್ತಲು ಸುಳಿಯಲೇ ಇಲ್ಲ.
ಬ್ಯಾನರ್ ಮಡಚಿಟ್ಟರು:  ಜೆಎನ್‌ಎನ್‌ಸಿಇಯಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಓಗಳಿಗೆ ಜೈವಿಕ ಇಂಧನ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಗೆ ಎಲ್ಲವೂ ಸಿದ್ಧತೆ ನಡೆದಿತ್ತು. ಯಾವಾಗ ನೀತಿ ಸಂಹಿತೆ ಗುಮ್ಮ ಆವರಿಸಿತೋ ಅಲ್ಲಿದ್ದ ಅಧಿಕಾರಿಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅತಿಥಿಗಳೂ ಸಹ ಬಂದಾಗಿತ್ತು. ಅಂತಿಮವಾಗಿ ಕಾರ್ಯಕ್ರಮದ ಬ್ಯಾನರ್ ಮಡಚಿಟ್ಟು ಸಾಂಕೇತಿಕವಾಗಿ ಕಾರ್ಯಕ್ರಮ ನಡೆಯಿತು. ಸರ್ಕಾರಿ ಕಾರ್ಯಕ್ರದ ಹೊರತಾಗಿ ಕಾಲೇಜಿನ ಕಾರ್ಯಕ್ರಮವಾಗಿ ರೂಪಾಂತರಗೊಂಡಿತು.
ವಾಹನ ಬಿಟ್ಟು ಹೊರಟರು:  ಸಾಗರದಲ್ಲಿ ಬುಧವಾರ ಸಚಿವ ಎಚ್.ಸಿ. ಮಹದೇವಪ್ಪ ಅವರ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಷ್ಟರ ಮಧ್ಯೆಯೇ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಸಚಿವರು ತಮ್ಮ ಸರ್ಕಾರಿ ಕಾರನ್ನು ಅಲ್ಲಿಯೇ ಬಿಟ್ಟು ಜಿಲ್ಲಾ ಪಂಚಾಯಿತಿ ಸದಸ್ಯರ ಕಾರನ್ನೇರಿ ಅಲ್ಲಿಂದ ಹೊರಟು ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.