ರೋಬೋ ಕಾಳಗಕ್ಕೆ ಸಿದ್ಧರಾದ ಮಲ್ಲರು
ಹೊರ ರಾಜ್ಯದಿಂದಲೂ ಬಂದಿವೆ ರೋಬೋ ಟಿ ಜೆಎನ್ಎನ್ಸಿಇಯಲ್ಲಿ ಅಖಾಡ ರೆಡಿ
ಟಿ ವಿಶೇಷ ವರದಿ
ಶಿವಮೊಗ್ಗ: ಮಲೆನಾಡಿನ ಮಂದಿಗೆ ಕೋಳಿ-ಕುರಿ ಕಾಳಗ ಗೊತ್ತಿರಬಹುದು, ರೋಬೋ ಕಾಳಗ ಗೊತ್ತಿರಲಿಕ್ಕಿಲ್ಲ. ಇಂತಹ ಒಂದು ಅಪರೂಪದ ಸ್ಪರ್ಧೆ ನಗರದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯದ ರೋಬೋಗಳು ಸಹ ಸೆಣಸಲು ಶಿವಮೊಗ್ಗಕ್ಕಾಗಮಿಸಿವೆ.
ಈ ವಿಶೇಷ ರೀತಿಯ ಸ್ಪರ್ಧೆಯನ್ನು ಇಲ್ಲಿನ ಜವಾಹರಲಾಲ್ ನೆಹರು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಟೆಕ್ ಝೋನ್-2014ರ ರಾಷ್ಟ್ರೀಯ ಸ್ಪರ್ಧೆಯ ಒಂದು ಭಾಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.
ಏನಿದು ಕಾಳಗ? ವಿದ್ಯಾರ್ಥಿಗಳು ತಮ್ಮ ತಲೆ ಖರ್ಚು ಮಾಡಿ ಸಿದ್ಧಪಡಿಸುವ ರೋಬೋಗಳು ಅಖಾಡದಲ್ಲಿ ಸೆಣಸಲಿವೆ. ಸುಮಾರು 10-10 ಅಡಿ ಅಳತೆಯ ಒಂದು ಅರೆನಾ ಅರ್ಥಾತ್ ಅಖಾಡವನ್ನು ಸಿದ್ಧಪಡಿಸಲಾಗಿದೆ. ಇದರ ಮೇಲೆ ಎರಡು ರೋಬೋಗಳನ್ನು ಸೆಣಸಲು ಬಿಡಲಾಗುತ್ತವೆ. ರೋಬೋಗಳನ್ನು ಅದನ್ನು ಸಿದ್ಧಪಡಿಸಿದವರು ರಿಮೋಟ್ ಮೂಲಕ ನಿಯಂತ್ರಿಸುತ್ತಾರೆ. ಯಾವ ರೋಬೋ ಬಲಿಷ್ಠವಾಗಿರುತ್ತದೋ ಅಥವಾ ಯಾವ ರೋಬೋ ತಾಂತ್ರಿಕವಾಗಿ ಬಲಿಷ್ಠವಾಗಿರುತ್ತದೋ ಅದು ತನ್ನ ಎದುರಾಳಿಯನ್ನು ಘಾಸಿಗೊಳಿಸುವುದೋ ಅಥವಾ ಅರೆನಾದಿಂದ ಹೊರಗಟ್ಟುವ ಮೂಲಕ ವಿಜಯಿಯಾಗುತ್ತದೆ ಎಂಬುದು ರೋಬೋ ಕಾಳಗ ವ್ಯವಸ್ಥೆಯ ನೇತೃತ್ವ ವಹಿಸಿರುವ ವಿದ್ಯಾರ್ಥಿ ಅಭಿಷೇಕ್ ನೀಡುವ ವಿವರಣೆ.
ಹೇಗಿರಬಹುದು ಕಾಳಗ? ಗರಿಷ್ಠ ತಾಂತ್ರಿಕತೆ ಹೊಂದಿರುವ ರೋಬೋ ತನ್ನ ಎದುರಾಳಿಯನ್ನು ಕುಕ್ಕಬಹುದು, ಚಿತ್ ಮಾಡಬಹುದು, ಘಾಸಿ ಮಾಡಬಹುದು. ಇನ್ನೂ ಹೇಳಬೇಕೆಂದರೆ ತೆಗೆದು ಪಕ್ಕಕ್ಕೆ ತಳ್ಳಬಹುದು, ಮಗುಚಬಹುದು. ಕಪಾಳಮೋಕ್ಷವನ್ನೂ ಮಾಡಬಹುದು, ಪಂಚ್ ಕೂಡ ಹೊಡೆಯಲಿವೆ ಎಂಬುದು ಸ್ಪರ್ಧೆ ಆಯೋಜಿಸಿರುವ ವಿದ್ಯಾರ್ಥಿಗಳ ವಿವರಣೆ.
ಎದುರಾಳಿ ಮೇಲೆ ಯಾವ ರೀತಿ ದಾಳಿ ನಡೆಸುತ್ತದೆ ಎಂಬುದರ ಆಧಾರದ ಮೇಲೆ ರೋಬೋ ಅಂಕ ಗಳಿಸುತ್ತಾ ಹೋಗುತ್ತದೆ. ನಿಗದಿತ ಅವಧಿಯಲ್ಲಿ ಹೆಚ್ಚು ಅಂಕ ಪಡೆದ ರೋಬೋ ನಂತರದ ಸುತ್ತಿಗೆ ಆಯ್ಕೆಯಾಗುತ್ತದೆ ಎಂದು ವಿದ್ಯಾರ್ಥಿ ಪ್ರಮೋದ್ ಶಾಸ್ತ್ರಿ ತಿಳಿಸಿದರು. ಒಟ್ಟಾರೆ ಇದೊಂದು ಡಬ್ಲ್ಯುಡಬ್ಲ್ಯುಎಫ್ ಕಲ್ಪನೆಯ ಕುಸ್ತಿ ಪಂದ್ಯಾವಳಿ, ಇಲ್ಲಿ ಮನುಷ್ಯರಿರುವುದಿಲ್ಲ, ರೋಬೋಗಳಿರುತ್ತವೆ ಅಷ್ಟೇ.
ಪ್ರೇಕ್ಷಕರನ್ನು ಉತ್ತೇಜಿಸಲು ಅಬ್ಬರದ ಸಂಗೀತವಿರುತ್ತದೆ, ವೇದಿಕೆಗೆ ಕಳೆಗಟ್ಟಲು ಅದ್ಭುತ ಲೈಟಿಂಗ್ ಕೂಡ ಇರುತ್ತದೆ.
20 ರೋಬೋ ನಿರೀಕ್ಷೆ: ರೋಬೋ ಕಾಳಗದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೊರ ರಾಜ್ಯದ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದ ವರೆಗೆ 10ಕ್ಕೂ ಹೆಚ್ಚು ರೋಬೋಗಳ ನೋಂದಣಿಯಾಗಿದ್ದು, ಅಂತಿಮವಾಗಿ 20 ರೋಬೋಗಳು ಸ್ಪರ್ಧಿಸುವ ನಿರೀಕ್ಷೆ ಇದೆ. ಇದರಲ್ಲಿ ತಮಿಳುನಾಡು ಸೇರಿದಂತೆ ಬೆಂಗಳೂರು ರೋಬೋಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಫೈನಲ್ ಕಾಳಗದಲ್ಲಿ ಗೆದ್ದ ರೋಬೋಗೆ 10 ಸಾವಿರ ನಗದು ಬಹುಮಾನ ಸಹ ನೀಡಲಾಗುತ್ತಿದೆ.
ಏನಿದು ರೋಬೋ? ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕೌಶಲತೆಒರೆಗೆ ಹಚ್ಚಿ ರೋಬೋ ತಯಾರಿಸುತ್ತಾರೆ. ಅವುಗಳ ಹೊರಮುಖ ಹೇಗೇ ಇದ್ದರೂ, ವಿದ್ಯಾರ್ಥಿಗಳು ಸಿದ್ಧಪಡಿಸುವ ಕೋಡಿಂಗ್ ಮತ್ತು ತಾಂತ್ರಿಕ ವ್ಯವಸ್ಥೆಗಳು ರೋಬೋನ ಶ್ರೀಮಂತಿಕೆಯನ್ನು ಹೆಚ್ಚಿಸಿರುತ್ತದೆ. ಕೋಡಿಂಗ್ ಜೊತೆ ಜೊತೆಗೆ ವೈರಿಂಗ್, ವೆಲ್ಡಿಂಗ್ ಸೇರಿದಂತೆ ಅನೇಕ ರೀತಿಯ ಕೆಲಸಗಳೂ ಸಹ ಪ್ರಮುಖಪಾತ್ರ ವಹಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

