ಚಲನಚಿತ್ರ ಕೇವಲ ಮನರಂಜನಾ ಮಾಧ್ಯಮವಾಗಿ ಉಳಿದಿಲ್ಲ'
ಶಿವಮೊಗ್ಗ: ಚಲನಚಿತ್ರ ಇಂದು ಕೇವಲ ಮನರಂಜನೆಯ ಮಾಧ್ಯಮವಾಗಿ ಉಳಿದಿಲ್ಲ, ಇದು ಬೌದ್ಧಿಕ ವಿಕಸನಕ್ಕೆ ಒಂದು ವೇದಿಕೆ. ಈ ಹಿನ್ನೆಲೆಯಲ್ಲಿ, ಜಾಗತಿಕ ಮಟ್ಟದಲ್ಲಿ ಚಲನಚಿತ್ರ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆ ಹಾಗೂ ಆವಿಷ್ಕಾರಗಳನ್ನು ಅರಿಯಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ಸಹಕಾರಿ ಎಂದು ಶಿವಮೊಗ್ಗ ಬೆಳ್ಳಿಮಂಡಲ ಸಿನಿಮಾಗೆ ಚಿತ್ರ ಸಮಾಜಗಳ ಸಂಚಾಲಕ ವೈದ್ಯ ಹೇಳಿದರು.
ಪರಿಣಾಮಕಾರಿ: ಶಿವಮೊಗ್ಗ ರೋಟರಿ ಪೂರ್ವ ಸಂಸ್ಥೆಯ ವಾರದ ಸಭೆಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು.
ಒಂದು ಕಾಲದಲ್ಲಿ ಈ ಚಿತ್ರೋತ್ಸವಗಳು ಕೇವಲ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ದೂರದೃಷ್ಟಿಯಿಂದಾಗಿ ಅದು ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುವಂತಾಗಿದೆ. ಶಿವಮೊಗ್ಗೆಯಲ್ಲಿಯೂ ಬೆಳ್ಳಿಮಂಡಲದ ವತಿಯಿಂದ ಈ ರೀತಿಯ ಪ್ರಯತ್ನ ಸಣ್ಣ ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದ ಅವರು, ಚಲನಚಿತ್ರ ಕ್ಷೇತ್ರದಲ್ಲಿನ ಹೊಸ ಹೊಸ ಬೆಳವಣಿಗೆಗಳು, ನಿರ್ಮಾಣ-ನಿರ್ದೇಶನ, ಕಥಾ ವಿನ್ಯಾಸಗಳ ಅಧ್ಯಯನದ ದೃಷ್ಟಿಯಿಂದ ಈ ಚಿತ್ರೋತ್ಸವಗಳು ನಿಜಕ್ಕೂ ಪರಿಣಾಮಕಾರಿ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ರೀತಿಯ ಹೊಸತನ ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಯಿತು. ಐವತ್ತು ದೇಶಗಳ ಚಲನಚಿತ್ರ ದಿಗ್ಗಜರೊಂದಿಗೆ ಕಾಲ ಕಳೆಯುವ ಹಾಗೂ ನೂರೈವತ್ತಕ್ಕೂ ಹೆಚ್ಚು ದೇಶಗಳ ಚಿತ್ರಗಳನ್ನು ನೋಡುವ ಅವಕಾಶ, ವಿಶೇಷವಾಗಿ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆಮಾಡುವ ಜವಾಬ್ದಾರಿ ನಿಜಕ್ಕೂ ಹೊಸ ಅನುಭವ ಕಟ್ಟಿಕೊಟ್ಟಿದೆ ಎಂದು ವಿವರಿಸಿದ ಅವರು, ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಗಳನ್ನು ಶಿವಮೊಗ್ಗದಲ್ಲಿಯೂ ಶಾಲಾ ಕಾಲೇಜು ಮಟ್ಟದಲ್ಲಿ ಪ್ರದರ್ಶಿಸುವ ಉದ್ದೇಶವಿದೆ. ಈ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಸಮಷ್ಠಿಯ ಚಿಂತನೆ ಅಗತ್ಯ: ಕನ್ನಡ ಚಲನಚಿತ್ರರಂಗ ಬೆಳೆದು ಬಂದ ದಾರಿಯನ್ನು ಅವಲೋಕಿಸಿದ ಅವರು, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ವಿಕಸನದ ಹಾದಿಯಲ್ಲಿ ಕನ್ನಡ ಚಲನಚಿತ್ರದ ಕೊಡುಗೆಯೂ ಅನನ್ಯವಾಗಿದೆ.
ಆದರೆ, ಬದಲಾದ ಸಂದರ್ಭದಲ್ಲಿ ರಿಮೇಕ್ ಹಾಗೂ ಈಗ ಡಬ್ಬಿಂಗ್ ಪ್ರಸ್ತಾವದಿಂದಾಗಿ ಕನ್ನಡತನಕ್ಕೆ ಧಕ್ಕೆಯಾಗಲಿದೆ. ಈ ಕುರಿತು ಸಮಷ್ಠಿಯ ಚಿಂತನೆ ಅಗತ್ಯ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಪುರುಷೋತ್ತಮ ವಹಿಸಿದ್ದರು. ಜಿ. ವಿಜಯಕುಮಾರ್ ಅವರಿಂದ ಪರಿಚಯ, ಕಾರ್ಯದರ್ಶಿ ಬಿ. ಪ್ರಸನ್ನಕುಮಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

